ಅವಧಿ ಅಂತ್ಯದಲ್ಲಿ ಕಾರ್ಪೋರೇಟರ್‌ಗಳ ‘ಅಧ್ಯಯನ’ ಪ್ರವಾಸ

Mahanagara_Palike
Published on

ಜಗನ್ನಾಥ್ ಕಾಳೇನಹಳ್ಳಿ

ತುಮಕೂರು: ಆಡಳಿತಾವಧಿ ಅಂತ್ಯದ ದಿನಗಣನೆ ನಡುವೆಯೇ ಮಹಾನಗರ ಪಾಲಿಕೆ ಸದಸ್ಯರು ಅಧ್ಯಯನ ಪ್ರವಾಸಕ್ಕೆ ಹೊರಟು ನಿಂತಿದ್ದಾರೆ. ಜನವರಿ 16ರಿಂದ 20ರವರೆಗೆ ಐದು ದಿನಗಳ ಕಾಲ ನೋಯಿಡಾ, ಗುರ್‌ಗಾವ್‌ಗೆ ‘ಅಧ್ಯಯನ’ ಪ್ರವಾಸಕ್ಕೆ ಪೌರಾಡಳಿತ ನಿರ್ದೇಶನಾಲಯ ಅನುಮತಿ ನೀಡಿದೆ.

ಜ.29ಕ್ಕೆ ಚುನಾಯಿತ ಆಡಳಿತ ಮಂಡಳಿಯ ಅವಧಿ ಅಂತ್ಯಗೊಳ್ಳಲಿದ್ದು ಈ ಕೊನೆಕ್ಷಣದಲ್ಲಿ ಜನರ ತೆರಿಗೆ ಹಣದಲ್ಲಿ ಮೇಯರ್ ಎಂ.ಪ್ರಭಾವತಿ ನೇತೃತ್ವದಲ್ಲಿ ಪಾಲಿಕೆ ಸದಸ್ಯರು ಅಧ್ಯಯನ ಪ್ರವಾಸ ಕೈಗೊಂಡಿದ್ದಾರೆ. ಪ್ರವಾಸ ಮುಗಿಸಿ ಬಂದ ಬಳಿಕ ಈ ಅಧ್ಯಯನ ಪ್ರವಾಸದ ವರದಿಯನ್ನು ನೀಡಬೇಕಿದ್ದು ಅಷ್ಟರೊಳಗೆ ಅವಧಿಯೇ ಮುಗಿದು ಹೋಗುವುದರಿಂದ ಇದೊಂದು ಮೋಜಿನ ಪ್ರವಾಸ ಆಗಲಿದೆ.

ಪಾಲಿಕೆ ಕೌನ್ಸಿಲ್ ವತಿಯಿಂದಲೇ ಪೌರಾಡಳಿತ ನಿರ್ದೇಶಕರಿಗೆ ಪತ್ರವನ್ನು ನೇರವಾಗಿ ಕಳುಹಿಸಿ ಪಾಲಿಕೆ ಸದಸ್ಯರ ಅಧ್ಯಯನ ಪ್ರವಾಸಕ್ಕೆ ಅನುಮತಿಯನ್ನು ತರಾತುರಿಯಲ್ಲಿ ಪಡೆಯಲಿದೆ. ಜ.16 ರಿಂದ 20ರವರೆಗೆ 5 ದಿನಗಳ ಕಾಲ ಪಾಲಿಕೆಯ 35 ಚುನಾಯಿತ ಸದಸ್ಯರುಗಳು, ಪ್ರವಾಸಿ ಮಾರ್ಗದರ್ಶಕರಾಗಿ ಐವರು ಅಧಿಕಾರಿ -ಸಿಬ್ಬಂದಿ ಸಹ ತೆರಳಲಿರುವುದು ವಿಶೇಷವೆನಿಸಿದೆ.

30 ಲಕ್ಷ ಪ್ಯಾಕೇಜ್: ಈ ಅಧ್ಯಯನ ಪ್ರವಾಸಕ್ಕೆ ಪಾಲಿಕೆಯಿಂದ 30 ಲಕ್ಷ ರೂ.,ಗಳನ್ನು ವ್ಯಯಿಸಲಿದ್ದು ವಿಮಾನದಲ್ಲಿ ಹೋಗಿ, ಬರುವುದು ಜತೆಗೆ ನೋಯಿಡಾ, ಗುರ್‌ಗಾವ್ ನಂತರ ದೆಹಲಿಯಲ್ಲಿ ಐತಿಹಾಸಿಕ ಸ್ಥಳಗಳನ್ನು ವೀಕ್ಷಣೆಗೆ ಟೆಂಡರ್ ಪ್ರಕ್ರಿಯೆ ನಡೆಸಿ ಬೆಂಗಳೂರಿನ ಖಾಸಗಿ ಟೂರ್ ಆ್ಯಂಡ್ ಟ್ರಾವೆಲ್ಸ್‌ಗೆ ‘ಪ್ರವಾಸ’ ಪ್ಯಾಕೇಜ್ ನೀಡಲಾಗಿದೆ. ಈ ಪ್ರವಾಸ ಹೊರೆಯನ್ನು ಜನರ ತೆರಿಗೆ ಹಣದಿಂದ ಬಳಸುತ್ತಿರುವುದಾಗಿದೆ. ಅಧಿಕಾರವಧಿಯ ಕೊನೆದಿನಗಳಲ್ಲಿ ಅಧ್ಯಯನ ನೆಪದಲ್ಲಿ ಕುಟುಂಬ ಸಮೇತ ಮೋಜಿನ ಪ್ರವಾಸವನ್ನು ವರ್ಷಾರಂಭದಲ್ಲೇ ಸದಸ್ಯರು ಕೈಗೊಂಡಿರುವುದು ತೆರಿಗೆದಾರರ ಕೆಂಗಣ್ಣಿಗೆ ಗುರಿಯಾಗಲಿದೆ.

ಸಾಮಾನ್ಯ ಸಭೆ ನಡೆಸಲೇ ಅನುಮತಿ ಕೊಟ್ಟಿರಲಿಲ್ಲ ?

ಮೇಯರ್, ಉಪಮೇಯರ್ ಅವರ 1 ವರ್ಷದ ಅಧಿಕಾರವಧಿ ಈಗಾಗಲೇ ಮುಗಿದು 3 ತಿಂಗಳಾಗಿರುವ ಹಿನ್ನೆಲೆಯಲ್ಲಿ ಮೇಯರ್ ಪ್ರಭಾವತಿಗೆ ಸಾಮಾನ್ಯಸಭೆ ನಡೆಸಲು ಕಾನೂನಿನಲ್ಲಿ ಅವಕಾಶವಿದೆಯೇ ಎಂಬ ಆಕ್ಷೇಪಣೆಯನ್ನು ಆಯುಕ್ತ ಬಿ.ವಿ.ಅಶ್ವಿಜ ತೆಗೆದಿದ್ದರು. ಮೇಯರ್ ಮನವಿ ಮೇರೆಗೆ ಸಾಮಾನ್ಯ ಸಭೆ ನಡೆಸಲು ನಿರ್ದೇಶನಕ್ಕಾಗಿ ಕೋರಿ ಆಯುಕ್ತರು ಸರ್ಕಾರಕ್ಕೆ ಪತ್ರ ಬರೆದಿದ್ದು ಈವರೆಗೆ ಯಾವ ಉತ್ತರವು ಬಂದಿಲ್ಲ. ಇದು ಪಾಲಿಕೆ ಸದಸ್ಯರಿಗೆ ಸಾಕಷ್ಟು ಇರಿಸುಮುರಿಸು ಉಂಟುಮಾಡಿತ್ತು. ಹಾಗಾಗಿ, ಆಯುಕ್ತರ ಗಮನಕ್ಕೆ ತಾರದೇ ಪಾಲಿಕೆ ಕೌನ್ಸಿಲ್ ಮೂಲಕ ನೇರವಾಗಿ ಪೌರಾಡಳಿತ ನಿರ್ದೇಶನಾಲಯಕ್ಕೆ ನೇರವಾಗಿ ಪತ್ರ ಕಳುಹಿಸಿ ಕಾರ್ಪೋರೇಟರ್‌ಗಳು ಅಧ್ಯಯನ ಪ್ರವಾಸ ಹೊರಟು ನಿಂತಿದ್ದಾರೆ.

ಕುಟುಂಬ ಸಮೇತ ಪ್ರವಾಸ

ಈ ಹಿಂದೆ 2019ರಲ್ಲಿ ಪೌರಾಡಳಿತ ನಿರ್ದೇಶನಾಲಯ ಆದೇಶವನ್ನು ಧಿಕ್ಕರಿಸಿ ಮಹಾನಗರ ಪಾಲಿಕೆ ಸದಸ್ಯರು ಉತ್ತರಭಾರತದ ಮೋಜಿನ ಅಧ್ಯಯನ ಪ್ರವಾಸ ಸಂದರ್ಭದಲ್ಲಿ ತಮ್ಮ ಕುಟುಂಬದ ಸದಸ್ಯರನ್ನು ಕರೆದುಕೊಂಡು ಹೋಗಿದ್ದರು.

ಅಧ್ಯಯನ ವೇಳೆ ಕುಟುಂಬ ಸದಸ್ಯರನ್ನು ಕರೆದೊಯ್ಯದಂತೆ ಪೌರಾಡಳಿತ ನಿರ್ದೇಶನಾಲಯ ಷರತ್ತುವಿಧಿಸಿತ್ತು. ಆದರೂ ಕುಟುಂಬ ಸಮೇತ ಪ್ರವಾಸ ಕೈಗೊಂಡಿದ್ದರು. ಈ ಬಾರಿ ಜೆ.ಕುಮಾರ್, ನಯಾಜ್, ಮುಜೀದ್ ಖಾನಂ ಸೇರಿ 8 ಸದಸ್ಯರು ಪ್ರವಾಸಕ್ಕೆ ತೆರಳುತ್ತಿಲ್ಲವೆನ್ನಲಾಗಿದೆ. 17 ಮಹಿಳಾ ಸದಸ್ಯರಿದ್ದು ಬಹುತೇಕರು ತಮ್ಮ ಕುಟುಂಬದವರನ್ನು ಕರೆದುಕೊಂಡ ಹೋಗುವ ಸಾಧ್ಯತೆಗಳಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net