ತುಮಕೂರು ಪಾಲಿಕೆಯಲ್ಲಿ ಪೌರಕಾರ್ಮಿಕರಿಗೆ ಕೊಳೆತ ಮೊಟ್ಟೆ

Palike_egg
Published on

ತುಮಕೂರು: ಕಸ ಎತ್ತುವರಿಗೆ ಕೊಳತೆ ಮೊಟ್ಟೆ ನೀಡಿ ಅವರನ್ನು ಸಾಯಿಸುತ್ತೀರಾ ? ಪಿಕೆಎಸ್ (ಪೌರಕಾರ್ಮಿಕರ)ಗಳ ಜೀವಕ್ಕೆ ಬೆಲೆಯೇ ಇಲ್ಲವಾ ? ಹೀಗೆಂದು ಜೆಡಿಎಸ್ ಸದಸ್ಯೆ ನಾಜಿಮಾಬಿ ಮಹಾನಗರ ಪಾಲಿಕೆ ಆಡಳಿತ ವೈಖರಿಯನ್ನು ಬುಧವಾರ ಸಾಮಾನ್ಯ ಸಭೆಯಲ್ಲಿ ತರಾಟೆ ತೆಗೆದುಕೊಂಡ ಪ್ರಸಂಗ ನಡೆಯಿತು.

ನಾನು ಪ್ರತಿನಿಧಿಸುವ 29ನೇ ವಾರ್ಡ್ ವ್ಯಾಪ್ತಿಯಲ್ಲಿ ಪೌರಕಾರ್ಮಿಕರಿಗೆ ಹುಳುಗಳಿಂದ ಕೂಡಿದ ಕೊಳೆತ ಮೊಟ್ಟೆಗಳನ್ನು ಬೆಳಗಿನ ಉಪಹಾರದೊಂದಿಗೆ ವಿತರಿಸಲಾಗಿದೆ. ನಗರದ ಕೊಳಕನ್ನು ಸ್ವಚ್ಛಗೊಳಿಸಿ ನೈರ್ಮಲ್ಯ ಕಾಪಾಡುವವರಿಗೆ ತಿನ್ನಲು ಕೊಳೆತ ಆಹಾರವನ್ನು ನೀಡಲಾಗುತ್ತಿದೆ. ಈ ಅಮಾನವೀಯ ಘಟನೆಗೆ ಕಾರಣರಾದ ಆರೋಗ್ಯ ನಿರೀಕ್ಷಕರ ವಿರುದ್ಧ ಕ್ರಮಕೈಗೊಳ್ಳಬೇಕು. ಆಹಾರ ಸರಬರಾಜು ಮಾಡಿದ ಗುತ್ತಿಗೆದಾರರ ಹೆಸರನ್ನು ಕಪ್ಪು ಪಟ್ಟಿಗೆ ಸೇರಿಸಿ ತನಿಖೆ ಕೈಗೊಳ್ಳುವಂತೆ ಆಗ್ರಹಿಸಿದರು. ಇದಕ್ಕೆ ಆಡಳಿತರೂಢ ಜೆ.ಕುಮಾರ್, ಎಚ್ಡಿಕೆ ಮಂಜುನಾಥ್ ಸಹ ಧ್ವನಿಗೂಡಿಸಿ ಗುಣಮಟ್ಟದ ಆಹಾರ ನೀಡಲು ಸಾಧ್ಯವಿಲ್ಲದಿದ್ದರೆ ಇನ್ಮುಂದೆ ಪೌರಕಾರ್ಮಿಕರ ಖಾತೆಗೆ ನೇರ ಹಣ ಜಮಾ ಮಾಡುವಂತೆ ಪಟ್ಟುಹಿಡಿದರು. ಇದಕ್ಕೆ ಪಕ್ಷಾತೀತವಾಗಿ ಎಲ್ಲ ಸದಸ್ಯರು ಬೆಂಬಲ ವ್ಯಕ್ತಪಡಿಸಿದರು.

ಈ ವೇಳೆ ಮೇಯರ್ ಎಂ.ಪ್ರಭಾವತಿ, ಪೌರಕಾರ್ಮಿಕರ ಬೆಳಗಿನ ಉಪಹಾರಕ್ಕಾಗಿ ಪ್ರತೀ ತಿಂಗಳು 2.45ಲಕ್ಷ ರೂ..ಗಳನ್ನು ಗುತ್ತಿಗೆದಾರರಿಗೆ ಭರಿಸಲಾಗುತ್ತಿದೆ. ಇಂತಹ ಕಳಪೆ ಆಹಾರ ನೀಡುವ ಬದಲು ಅವರ ಖಾತೆಗೆ ಉಪಹಾರದ ವೆಚ್ಚದ ಹಣವನ್ನು ವರ್ಗಾವಣೆ ಮಾಡುವುದೇ ಸೂಕ್ತ. ನಿಮ್ಮೆಲ್ಲರ ಆಗ್ರಹದಂತೆ ಇನ್ಮುಂದೆ ಪೌರಕಾರ್ಮಿಕರ ಖಾತೆಗೆ ನೇರ ಹಣ ವರ್ಗಾವಣೆ ಮಾಡುವ ಭರವಸೆಯಿತ್ತ ಬಳಿಕ ವಿಷಯಕ್ಕೆ ಇತಿಶ್ರೀ ಹಾಡಲಾಯಿತು.

ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್, ಉಪಮೇಯರ್ ಟಿ.ಕೆ.ನರಸಿಂಹಮೂರ್ತಿ, ಆಯುಕ್ತೆ ಬಿ.ವಿ.ಅಶ್ವಿಜಾ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net