

ತುಮಕೂರು: ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಹಾಡಿ ಹೊಗಳಿದ ಚಿತ್ರದುರ್ಗ ಭೋವಿಗುರುಪೀಠದ ಶ್ರೀಇಮ್ಮಡಿ ಸಿದ್ದರಾಮೇಶ್ವರ ಸ್ವಾಮಿಜಿ `ರಾಜದೇವರು' ಎಂಬ ಬಿರುದು ಕೂಡ ದಯಪಾಲಿಸಿದರು.
ತುಮಕೂರಿನ ಗಾಜಿನ ಮನೆಯಲ್ಲಿ ಭಾನುವಾರ ಆಯೋಜಿಸಿದ್ದ ಭೋವಿ ಸಮಾಜದ ಜಾಗೃತಿ ಸಮಾವೇಶದಲ್ಲಿ ಸಿಎಂ ಎದುರಿನಲ್ಲಿಯೇ ಸಿಎಂ ಪ್ರಧಾನ ಕಾರ್ಯದರ್ಶಿಯಾಗಿ ಮಂಜುನಾಥ್ ಪ್ರಸಾದ್ ಅವರನ್ನು ನೇಮಿಸಿರುವ ವಿಷಯ ಪ್ರಸ್ತಾಪಿಸಿ ಮೆಚ್ಚುಗೆ ಮಳೆಗೈದರು.
ಬಸವರಾಜ ಬೊಮ್ಮಾಯಿ ಅವರದು ತಾಯಿ ಹೃದಯ, ಅವರ ಬಳಿಯ ಕೋಪ ತಂದೆಯದ್ದು. ತಾಯಿ ಹೃದಯ, ತಾಯಿ ವಾತ್ಸಲ್ಯ, ತಾಯಿಯ ಮಿಡಿತ ಎಲ್ಲವೂ ಸಿಎಂ ಬಸವರಾಜ ಬೊಮ್ಮಾಯಿ ಅವರಿಗಿದೆ ಎಂದರು.
ತಾಯಿ ತನ್ನ ಮಗುವನ್ನು ನೋಡಿಕೊಂಡಂತೆ ನಮ್ಮ ರಾಜ್ಯವನ್ನು ನೋಡಿಕೊಳ್ಳಲು ಇಂತಹ ಮುಖ್ಯಮಂತ್ರಿ ಸಿಕ್ಕಿದ್ದಾರೆ, ತಾಯಿ ಹೃದಯದ ಸಿಎಂ ಸಿಕ್ಕಿದ್ದು ನಮ್ಮ ಹೆಮ್ಮೆ. ಮೈಕ್ರೋ ಮೈನಾರಿಟಿ ಮಡಿವಾಳರಿಗೂ ಹುಡುಕಿ ಸಹಾಯ ಮಾಡಿದ್ದಾರೆ, ಸಾಮಾಜಿಕ ನ್ಯಾಯ ಕೊಟ್ಟ ಸಿಎಂ ಎಂದು ಪ್ರಶಂಶಿಸಿದರು.
ಅಂಬೇಡ್ಕರರ ಸಂವಿಧಾನದ ಆಶಯದಂತೆ ಎಲ್ಲಾ ಸಮುದಾಯಕ್ಕೂ ಸಾಮಾಜಿಕ ನ್ಯಾಯ ಒದಗಿಸಿದ ಮುಖ್ಯಮಂತ್ರಿ ಎಂದರೆ ಅದು ಬಸವರಾಜು ಬೊಮ್ಮಾಯಿ, ಲಿಂಗಾಯತ ಸಮುದಾಯದ ಅಧಿಕಾರಕ್ಕೆ ಬಂದರೆ ಬೇರೆ ಸಮುದಾಯದ ಜನ ಮಾತನಾಡಿಸೋದು ಕಷ್ಟ ಎಂದು ಹೇಳುತ್ತಾರೆ ಆದರೆ, ಸಿಎಂ ಬಸವರಾಜು ಅದಕ್ಕೆ ಅಪವಾದ ಎಂದರು.
ಅವರ ಸಮುದಾಯಕ್ಕಿಂತ ಬೇರೆ ಸಮುದಾಯದವರು ಅವರಿಂದ ಹೆಚ್ಚಿಗೆ ಲಾಭ ಪಡೆದಿದ್ದಾರೆ, ನಮಗೆ ಸಾಮಾಜಿಕ ನ್ಯಾಯ ಕೊಡುವ ಮುಖ್ಯಮಂತ್ರಿ ಲಭಿಸಿದ್ದಾರೆ ಎಂದು ಮೆಚ್ಚಗೆಯ ಮಾತನಾಡಿದರು.