

ತುಮಕೂರು: ಸದ್ದುಗದ್ದಲವಿಲ್ಲದೆ ಮತದಾರರ ಮನತಟ್ಟಿದ್ದ ಬಿಜೆಪಿ ಅಭ್ಯರ್ಥಿ, ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ಶನಿವಾರ ಅಬ್ಬರದ ಪ್ರಚಾರಕ್ಕೆ ಮೊರೆ ಹೋದರು. ನಗರದ ಮೂರು ಕಡೆಗಳಲ್ಲಿ ದೇವಾಲಯಗಳಲ್ಲಿ ಪೂಜೆ ಕೈಗೊಂಡು ಭರ್ಜರಿ ರೋಡ್ ಶೋ ನಡೆಸಿ ಚುನಾವಣಾ ಪ್ರಚಾರ ಕೈಗೊಂಡರು.
ಮರಳೂರು ಶನಿ ಮಹಾತ್ಮ ದೇವಸ್ಥಾನ, ಬಟವಾಡಿಯ ಆಂಜನೇಯ ಸ್ವಾಮಿ, ಹನುಮಂತಪುರದ ಭೈಲಾಂಜನೇಯಸ್ವಾಮಿ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಿ ತೆರೆದ ವಾಹನದಲ್ಲಿ ಪ್ರತ್ಯೇಕ ರ‍್ಯಾಲಿ ನಡೆಸುವ ಮೂಲಕ ಭರ್ಜರಿ ಚುನಾವಣಾ ಪ್ರಚಾರ ಕೈಗೊಂಡರು. ನಗರಸಭೆ ಮಾಜಿ ಅಧ್ಯಕ್ಷೆ ಕಮಲಮ್ಮ, ಬಿಜೆಪಿ ಮಹಿಳಾ ಮೋರ್ಚಾ ಮಾಜಿ ಅಧ್ಯಕ್ಷೆ ಸರೋಜಾ ಗೌಡ, ದೇವರಾಜ್, ಬೆಳ್ಳಿಲೋಕೇಶ್, ಅಣೆತೋಟ ಶ್ರೀನಿವಾಸ್, ಹನುಮಂತರಾಜು, ಆದ್ಯಾಗೌಡ, ಮಾಜಿ ಪಾಲಿಕೆ ಸದಸ್ಯರಾದ ಕುಬೇರ್ ನಾಗಭೂಷಣ್, ಸತ್ಯಮಂಗಲ ಜಗದೀಶ್, ಟಿ.ಡಿ. ಕೃಷ್ಣಮೂರ್ತಿ, ವೈ.ಟಿ.ರಾಜೇಂದ್ರ, ವಾರ್ಡ್ ಅಧ್ಯಕ್ಷರಾದ ವಿಶ್ವನಾಥ ಸ್ವಾಮಿ, ಶೈಲಾ, ಭರತ್ ಮತ್ತಿತರರು ಸಾಥ್ ನೀಡಿದರು.
ಇತಿಹಾಸದಲ್ಲಿ ಕಂಡರಿಯದ ಅಭಿವೃದ್ಧಿ: ಈ ವೇಳೆ ಮಾತನಾಡಿದ ಜ್ಯೋತಿಗಣೇಶ್, ನಗರದ ಇತಿಹಾಸದಲ್ಲೇ ಕಾಣದಷ್ಟು ಅಭಿವೃದ್ಧಿ ಕಾರ್ಯಗಳನ್ನು ಈ ಅವಧಿಯಲ್ಲಿ ಕೈಗೊಳ್ಳಲಾಗಿದೆ. ಸ್ಮಾರ್ಟ್ಸಿಟಿ ಯೋಜನೆಗಳು ಸೇರಿದಂತೆ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದಿಂದ ತುಮಕೂರು ನಗರದಲ್ಲಿ ಸಮಗ್ರ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದೆ ಎಂದರು.
ರಸ್ತೆ, ಕ್ರೀಡಾಂಗಣ, ಆಟದ ಮೈದಾನಗಳು, ಉದ್ಯಾನಗಳಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದೆ. ಅಭಿವೃದ್ಧಿ ಕಾರ್ಯದ ಜತೆಗೆ ಕಾನೂನು ಸುವ್ಯವಸ್ಥೆ ಸೇರಿದಂತೆ ನಗರದಲ್ಲಿ ಶಾಂತಿ ವಾತಾವರಣ ನೆಲೆಸಲು, ನಾಗರಿಕರ ಹಿತ ಕಾಪಾಡುವುದು ನನ್ನ ಮೊದಲ ಆದ್ಯತೆಯಾಗಿತ್ತು. ನಗರದ ಹೆಚ್ಚಿನ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡಲು ಈ ಬಾರಿ ನನನ್ನು ಮತ್ತೊಮ್ಮೆ ಆಶೀರ್ವದಿಸಬೇಕೆಂದು ಮನವಿ ಮಾಡಿದರು.
ತುಮಕೂರಿನ ನಿರ್ವಾಣಿ ಲೇಔಟ್‌ನಲ್ಲಿ ವಿವಿಧ ಪಕ್ಷಗಳ ಮುಖಂಡರಾದ ಅಂಜನಮೂರ್ತಿ, ಗಂಗಾಧರ್, ಕಿರಣ್, ಮಾರುತಿ, ದಯಾ, ರಾಜಣ್ಣ, ಕಿಶೋರ್ ಮತ್ತಿತರರು ಬಿಜೆಪಿ ಸೇರ್ಪಡೆಯಾದರು. ಜ್ಯೋತಿಗಣೇಶ್ ಪಕ್ಷದ ಶಾಲುಹಾಕಿ ಬರಮಾಡಿಕೊಂಡರು. ನಂತರ ಮನೆ ಮನೆ ಪ್ರಚಾರ ಕೈಗೊಂಡ ಶಾಸಕರಿಗೆ ಮಹಿಳೆಯರು ಆರತಿ ಬೆಳಗಿ ಸ್ವಾಗತಿಸಿದರು.