

ತುಮಕೂರು: ಮಹಿಳೆಯರು, ಯುವಜನರು, ರೈತರು ಹಾಗೂ ಬಡವರನ್ನು ಒಳಗೊಂಡ ವಿಕಸಿತ ಭಾರತದ ಬಜೆಟ್ ಇದಾಗಿದೆ ಎಂದು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ಹೇಳಿದರು.
2047ಕ್ಕೆ ದೇಶಕ್ಕೆ ಸ್ವಾತಂತ್ರೃ ಬಂದು 100 ವರ್ಷಗಳು ತುಂಬುತ್ತಿರುವ ಈ ವೇಳೆಗೆ ಭಾರತವನ್ನು ವಿಶ್ವದ ನಂ.1 ರಾಷ್ಟ್ರ ಮಾಡುವ ನಿಟ್ಟಿನಲ್ಲಿ ಮುನ್ನುಡಿ ಬರೆದಿದೆ. ಸಾಮಾಜಿಕ ನ್ಯಾಯಕ್ಕೆ ಒತ್ತು ನೀಡಲಾಗಿ. ಮುಂದಿನ ಐದು ವರ್ಷಗಳಲ್ಲಿ 2 ಕೋಟಿ ಮನೆ ನಿರ್ಮಾಣದ ಗುರಿ ಹೊಂದಿದ್ದು,ಸ್ವಂತ ನಿವೇಶನ ಹೊಂದಿರುವ ವ್ಯಕ್ತಿಗಳಿಗೆ ಮನೆ ನಿರ್ಮಾಣಕ್ಕೆ ಸಹಾಯಧನ, ಹೌಸ್ ಫಾರ್ ಆಲ್ ಎಂಬ ಪರಿಕಲ್ಪನೆಗೆ ಪೂರಕವಾಗಿದೆ ಎಂದು ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರೈಲ್ವೆ ಅಭಿವೃದ್ದಿಗೆ ಹೆಚ್ಚು ಒತ್ತು ನೀಡಿದ್ದು, ಸರಕು ಸಾಗಾಣಿಕೆ,ಜನರ ಓಡಾಟ ಹಾಗೂ ಬಂದರುಗಳಿಗೆ ಸರಕು ಸಾಗಿಸಲು ಅನುಕೂಲವಾಗುವ ಮೂರು ಎಕಾಮಿಕ್ ರೈಲ್ವೆ ಕಾರಿಡಾರ್‌ಗಳನ್ನು ನಿರ್ಮಾಣ ಮಾಡುವ ಗುರಿ ಹೊಂದಲಾಗಿದೆ.ರೈತರ ಉತ್ಪನ್ನಗಳಿಗೆ ಕೊಯ್ಯಲೋತ್ತರ ಮಾರುಕಟ್ಟೆ ನಿರ್ಮಾಣ, ಹೈನೋದ್ಯಮಕ್ಕೆ ಬೆಂಬಲ, ಸ್ವ ಸಹಾಯ ಗುಂಪುಗಳಿಗೆ ಸಾಲ ಸೌಲಭ್ಯ, ಸೋಲಾರ್ ಎನರ್ಜಿ ಉತ್ಪಾದನೆಗೆ ಉತ್ತೇಜನವನ್ನು ಬಜೆಟ್‌ನಲ್ಲಿ ಕೊಡಲಾಗಿದೆ.
ರಾಜ್ಯ ಸರ್ಕಾರಗಳು ತಮ್ಮ ವ್ಯಾಪ್ತಿಯಲ್ಲಿ ಮೂಲಭೂತ ಸೌಕರ್ಯ ಅಭಿವೃದ್ಧಿಗೆ 75000 ಕೋಟಿ ರೂ., ಗಳವರೆಗೆ 50 ವರ್ಷ ಬಡ್ಡಿರಹಿತ ಸಾಲ ಸೇರಿದಂತೆ ಹಲವು ಮಹತ್ವದ ಯೋಜನೆಗಳನ್ನು ಪ್ರಕಟಿಸಿದೆ. ಇವುಗಳಿಂದ ಗ್ರಾಮೀಣ ರೈತರ, ಯುವಜನರಿಗೆ ಉದ್ಯೋಗ ದೊರೆಯಲಿದೆ ಎಂಬ ವಿಶ್ವಾಸವನ್ನು ಜ್ಯೋತಿಗಣೇಶ್ ವ್ಯಕ್ತಪಡಿಸಿದರು.
ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ನೀಡುತಿದ್ದು, ಹೊಸ ಅವಿಷ್ಕಾರಾತ್ಮಕ ಪ್ರವಾಸೋದ್ಯಮಕ್ಕೆ ಮೊದಲ ಅದ್ಯತೆ ನೀಡಲಾಗುತ್ತಿದೆ. ರಕ್ಷಣಾತ್ಮಕ ವಲಯದಲ್ಲಿ ಆತ್ಮನಿರ್ಭರತೆ ತರುವ ನಿಟ್ಟಿನಲ್ಲಿ ಹಲವಾರು ಹೊಸ ಯೋಜನೆಗಳನ್ನು 2024-25ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ. ವಾಯು ಮಾಲಿನ್ಯ ತಡೆಯುವ ನಿಟ್ಟಿನಲ್ಲಿ ಹೊಗೆ ರಹಿತ, ಪರಿಸರ ಸ್ನೇಹಿ ವಾಹನಗಳ ಅವಿಷ್ಕಾರ, ವಿಶ್ವ ಆರೋಗ್ಯ ಸಂಸ್ಥೆಯ ನಿಯಮದಂತೆ ಜನಸಂಖ್ಯೆಗೆ ಅನುಗುಣವಾಗಿ ವೈದ್ಯರ ಸೃಜಿಸಲು ಹೊಸ ಮೆಡಿಕಲ್ ಕಾಲೇಜುಗಳನ್ನು ತೆರೆಯುವುದು.ಅಡುಗೆ ಎಣ್ಣೆ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಲು ಎಣ್ಣೆ ಕಾಳುಗಳ ಬೆಳೆಯಲು ಉತ್ತೇಜನ ಹಾಗೂ ಮಿನಿಮಮ್ ಗೌರ‌್ನಮೆಂಟ್, ಮ್ಯಾಕ್ಸಿಮಮ್ ಗೌರ್ವನೆನ್ಸ್ ತರುವ ಪ್ರಯತ್ನ ಇದಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎಚ್.ಎಸ್.ರವಿಶಂಕರ್, ಪಾಲಿಕೆ ವಿಪಕ್ಷ ಮಾಜಿ ನಾಯಕ ವಿಷ್ಣುವರ್ಧನ, ಟೂಡಾ ಮಾಜಿ ಸದಸ್ಯ ಹನುಮಂತರಾಯಪ್ಪ, ಬಿಜೆಪಿ ಮುಖಂಡರಾದ ಸಂದೀಪ್‌ಗೌಡ, ಆರ್.ಕೆ.ಶ್ರೀನಿವಾಸ್, ವೇದಮೂರ್ತಿ ಮತ್ತಿತರರು ಹಾಜರಿದ್ದರು.
ಫೆ. 2ರಂದು ನಗರದ ಸಿದ್ದವಿನಾಯಕ ಸಮುದಾಯಭವನದಲ್ಲಿ ಶಕ್ತಿ ವಂದನಾ ಮಹಿಳಾ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಇದರ ಉದ್ಘಾಟನೆಯನ್ನು ಮಾಜಿ ಸಚಿವೆ ಶಶಿಕಲಾ ಜೋಲ್ಲೆ ನೆರವೇರಿಸುತ್ತಿದ್ದು, ಸಮಾರೋಪ ಸಮಾರಂಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪಾಲ್ಗೊಳ್ಳಲಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎಚ್.ಎಸ್.ರವಿಶಂಕರ್ ತಿಳಿಸಿದರು.