ಮಾಧುಸ್ವಾಮಿ ಬಿಜೆಪಿ ಬಿಡಲ್ಲ ; ಸೋಮಣ್ಣ ಹೀಗೆಳಿದ್ದು ಯಾತಕ್ಕೆ ?

MataBete_Somanna_01
Published on

ತುಮಕೂರು: ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಬಿಜೆಪಿ ಬಿಡುವುದಿಲ್ಲ. ಮುಂದಿನ ದಿನಗಳಲ್ಲಿ ಪಕ್ಷದ ಪರವಾಗಿ ಪ್ರಚಾರ ನಡೆಸಲಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ವಿಶ್ವಾಸ ವ್ಯಕ್ತಪಡಿಸಿದರು.

ಬೆಂಗಳೂರಿನ ಆದಿಚುಂಚನಗಿರಿ ಶಾಖಾ ಮಠದಲ್ಲಿ ಬುಧವಾರ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಎನ್‌ಡಿಎ ಅಭ್ಯರ್ಥಿಗಳು ಡಾ.ನಿರ್ಮಲಾನಂದನಾಥ ಸ್ವಾಮೀಜಿ ಆಶೀರ್ವಾದ ಪಡೆದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸೋಮಣ್ಣ, ಮಾಧುಸ್ವಾಮಿ ಅವರು ಉಡುಪಿ-ಚಿಕ್ಕಮಗಳೂರು, ಚಿತ್ರದುರ್ಗ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿ ಪರ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ ಎಂದರು.

ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಆತ್ಮೀಯರು, ಬುದ್ಧಿವಂತರಿದ್ದಾರೆ. ನಮ್ಮ ಜತೆಯಲ್ಲೇ ಇರುತ್ತಾರೆ. ಅವರ ಬೆಂಬಲಿಗರು, ಆತ್ಮೀಯರು ಚಿಕ್ಕನಾಯಕನಹಳ್ಳಿ ಕ್ಷೇತ್ರದಲ್ಲಿ ಪಕ್ಷದ ಪರ ಪ್ರಚಾರದಲ್ಲಿ ತೊಡಗಿದ್ದಾರೆ. ಜೆಸಿಎಂರನ್ನು ಕಾಂಗ್ರೆಸ್ಸಿ ಗೆ ಆಹ್ವಾನಿಸುವುದಾಗಿ ಪರಮೇಶ್ವರ್ ಯಾಕೆ ಹೇಳಿಕೆ ಕೊಟ್ಟರು ಗೊತ್ತಿಲ್ಲ. ಕಾಂಗ್ರೆಸ್ಸಿನ ದೊಡ್ಡ ನಾಯಕ ಅವರು. ಅವರನ್ನೇ ಕೇಳಬೇಕಿದೆ ಎಂದು ನುಣುಚಿಕೊಂಡರು.

ಜಾತ್ರೆಯಲ್ಲಿ ಭಾಗಿ: ಬೆಂಗಳೂರಿನಿಂದ ತರಾತುರಿಯಲ್ಲಿ ಓಡಿಬಂದ ವಿ.ಸೋಮಣ್ಣ ಕೊರಟಗೆರೆ ತಾಲೂಕು ವಡ್ಡಗೆರೆ ಶ್ರೀ ವೀರನಾಗಮ್ಮ ದೇವಿ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಶ್ರೀ ಹನುಮಂತನಾಥ ಸ್ವಾಮೀಜಿ ಆಶೀರ್ವಾದ ಪಡೆದುಕೊಂಡರು. ಬಳಿಕ ಮಾಜಿ ಸಚಿವ ವೀರಣ್ಣ ನಿವಾಸಕ್ಕು ಭೇಟಿ ಮಾಡಿ ಚುನಾವಣೆಯಲ್ಲಿ ಸಹಕಾರ ಕೋರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net