

ತುಮಕೂರು: ಸರ್ಕಾರಿ ಶಾಲೆಯಲ್ಲಿ 35 ವರ್ಷ ಸೇವೆ ಸಲ್ಲಿಸಿ ನಿವೃತ್ತರಾದ ಶಿಕ್ಷಕರೊಬ್ಬರ ಬೀಳ್ಕೊಡುಗೆ ಗ್ರಾಮಹಬ್ಬದಂತೆ ಆಚರಿಸಲಾಯಿತು. ಗ್ರಾಮದ ರಾಜಬೀದಿಗಳಲ್ಲಿ ಬೆಳ್ಳಿರಥದಲ್ಲಿ ಕೂರಿಸಿ ಅದ್ದೂರಿಯಾಗಿ ಮೆರವಣಿಗೆ ಮಾಡಿ ಸನ್ಮಾನಿಸಿದ ಅಪರೂಪದ ಪ್ರಸಂಗ ಗುರುಗಳಿಗೆ ಸಲ್ಲಿಸಿದ ಗೌರವಕ್ಕೆ ಸಾಕ್ಷಿಯಾಗಿದೆ.
ತಾಲೂಕಿನ ಹೆಬ್ಬೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಹಿಂದಿ ಶಿಕ್ಷಕರಾಗಿದ್ದ ಎಂ.ಬಿ. ಮಂಜುನಾಥಾಚಾರ್ ವಯೋ ನಿವೃತ್ತರಾದ ಹಿನ್ನೆಲೆಯಲ್ಲಿ ಶಾಲೆ ಶಿಕ್ಷಕರು ಹಾಗೂ ಹಿರಿಯ ವಿದ್ಯಾರ್ಥಿಗಳು ಸೇರಿ ಇತ್ತೀಚೆಗೆ ಆಯೋಜಿಸಿದ್ದ ಬೀಳ್ಕೊಡುಗೆ ಕಾರ್ಯಕ್ರಮವು ಗುರು-ಶಿಷ್ಯರ ಅನ್ಯೋನ್ಯತೆಯನ್ನು ತೋರಿಸಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಪ್ರೌಢಶಾಲೆ ಮುಖ್ಯ ಶಿಕ್ಷಕಿ ಎನ್.ಸರಳ, ನಮ್ಮ ಶಾಲೆಯಲ್ಲಿ 15 ವರ್ಷಗಳಿಂದ ಹಿಂದಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದ ಮಂಜುನಾಥಾಚಾರ್ ಅವರ ಶಿಸ್ತು, ಸಹನೆ, ತಾಳ್ಮೆ, ಸ್ನೇಹಪರತೆ ಮಕ್ಕಳ ಉತ್ತಮ ಸಂಸ್ಕಾರದ ಬೆಳವಣಿಗೆಗೆ ಸದಾ ಮಾರ್ಗದರ್ಶಿ ಎಂದು ತಿಳಿಸಿದರು. ಜನಮೆಚ್ಚಿದ ಶಿಕ್ಷಕ ಪ್ರಶಸ್ತಿ ಹಾಗೂ ಜಿಲ್ಲಾ ಹಿಂದಿ ಶಿಕ್ಷಣ ರತ್ನ ಪ್ರಶಸ್ತಿ ಪಡೆದಿದ್ದು ಉತ್ತಮ ಚಿತ್ರಕಲಾ ಶಿಕ್ಷಕರೂ ಆಗಿದ್ದರು ಎಂದು ಪ್ರಶಂಸಿಸಿದರು.
ಸನ್ಮಾನ ಸ್ವೀಕರಿಸಿ ಮಂಜುನಾಥಾಚಾರ್ ಮಾತನಾಡಿ, ಶಿಕ್ಷಕನಾಗಿ 35 ವರ್ಷಗಳ ದೀರ್ಘ ಸೇವೆಯನ್ನು ಸ್ಮರಿಸುತ್ತಾ, ಹಳೆಯ ಘಟನೆಗಳನ್ನು ಮೆಲುಕುಹಾಕಿದರು. ಶಾಲೆಯ ಹಾಗೂ ಇಲಾಖೆಯ ಎಲ್ಲ ಸಿಬ್ಬಂದಿ ವರ್ಗದವರ ಸಹಾಯ, ಸಹಕಾರವನ್ನು ನೆನೆದರು.
ಎಸ್‌ಡಿಎಂಸಿ ಅಧ್ಯಕ್ಷೆ ಸುಜಾತ ಮತ್ತು ಸದಸ್ಯರುಗಳು, ಹಿರಿಯ ವಿದ್ಯಾರ್ಥಿಗಳು, ಹಿಂದಿ ವಿಷಯದ ಜಿಲ್ಲಾ ಸಂಘ ಮತ್ತು ತಾಲ್ಲೂಕು ಸಂಘದ ಪದಾಧಿಕಾರಿಗಳು, ಪೋಷಕರು , ಗ್ರಾಮಸ್ಥರು ಹಾಜರಿದ್ದರು.