

ತುಮಕೂರು: ಲೋಕಸಭೆ ಚುನಾವಣೆಯಲ್ಲಿ ತುಮಕೂರು ಕ್ಷೇತ್ರ ಉಳಿಸಿಕೊಳ್ಳುವ ಸವಾಲು ಎದುರಿಸುತ್ತಿರುವ ಬಿಜೆಪಿ ಇತ್ತೀಚೆಗೆ ಆಂತರಿಕ ಸರ್ವೆ ನಡೆಸಿದೆ ಎನ್ನಲಾಗಿದೆ.
ಒಕ್ಕಲಿಗ ಸಮುದಾಯದಿಂದ ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ, ಮಾಜಿ ಸಚಿವ ನೊಳಂಬ ಲಿಂಗಾಯತ ಸಮುದಾಯದಿಂದ ಜೆ.ಸಿ.ಮಾಧುಸ್ವಾಮಿ, ಹಾಗೂ ಒಬಿಸಿಯಿಂದ ಮಾಜಿ ಶಾಸಕ ಡಾ.ಎಂ.ಆರ್.ಹುಲಿನಾಯ್ಕರ್ ಹೆಸರನ್ನಿಟ್ಟುಕೊಂಡು ಬಿಜೆಪಿ ನಡೆಸಿರುವ ಮೊದಲ ಹಂತದ ಆಂತರಿಕ ಸಮೀಕ್ಷೆಯಲ್ಲಿ ಮುದ್ದಹನುಮೇಗೌಡ ಪರ ಒಲವು ವ್ಯಕ್ತವಾಗಿದೆ ಎನ್ನಲಾಗಿದೆ.
ತುಮಕೂರಿನಲ್ಲಿ ಮೊದಲಿಂದಲೂ ಲಿಂಗಾಯತ ಸಮುದಾಯಕ್ಕೆ ಬಿಜೆಪಿ ಲೋಕಸಭೆ ಟಿಕೆಟ್ ನೀಡಿರುವ ಇತಿಹಾಸವಿದೆ. ಈ ಬಾರಿ ಗೆಲುವಿನ ಮಾನದಂಡದಲ್ಲಿ ಒಕ್ಕಲಿಗ ಸಮುದಾಯಕ್ಕೂ ಮಾನ್ಯತೆ ನೀಡಬಹುದು ಎಂಬ ಮಾತಿದೆ.
ಈ ನಡುವೆ ಈಗಾಗಲೇ ಎರಡು ಸಲ ಸಂಸತ್ ಚುನಾವಣೆ ಎದುರಿಸಿರುವ ಮುದ್ದಹನುಮೇಗೌಡರನ್ನು ಕಾಂಗ್ರೆಸ್‌ಗೆ ವಾಪಸ್ ಕರೆತರಲು ತೆರೆಮರೆಯ ಕಸರತ್ತು ಕೂಡ ನಡೆದಿದೆ ಎಂಬ ಬಗ್ಗೆ ಮಾತು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.