

ತುಮಕೂರು: `ಸಂಸ್ಕೃತ' ಎಂಬುದು ಭಾರತೀಯ ಸಂಸ್ಕೃತಿಯ ಪ್ರತಿ ಕಣದಲ್ಲಿದ್ದು ಅದನ್ನು ಉಳಿಸಿಕೊಂಡು ಹೋಗುವ ಕೆಲಸವಾಗಬೇಕು ಎಂದು ರಾಜ್ಯ ಸಂಸ್ಕೃತ ಪಾಠಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ವಿದ್ವಾನ್ ಎಚ್.ಬಿ.ಗಂಗಾಧರಯ್ಯ ಹೇಳಿದರು.
ತುಮಕೂರು ತಾಲೂಕು ಶ್ರೀಸಿದ್ಧಾರ್ಥ ನಗರದ ಸಿದ್ಧಾರ್ಥ ಸಂಸ್ಕೃತ ಪಾಠಶಾಲಾ ಆವರಣದಲ್ಲಿ ತುಮಕೂರು ಜಿಲ್ಲಾ ಸಂಸ್ಕೃತ ಪಾಠಶಾಲಾ ಶಿಕ್ಷಕರ ಸಂಘ, ಶ್ರೀಸಿದ್ಧಾರ್ಥ ಶಿಕ್ಷಣ ಸಂಸ್ಥೆ ವತಿಯಿಂದ ತುಮಕೂರು ಜಿಲ್ಲಾ ಮಟ್ಟದ ಸಂಸ್ಕೃತೋತ್ಸವ ಉದ್ಘಾಟಿಸಿ ಮಾತನಾಡಿದರು.
ರಾಜ್ಯದಲ್ಲಿ 175 ಸಂಸ್ಕೃತ ಶಿಕ್ಷಕರು ನಿವೃತ್ತಿ ಹೊಂದಿದ್ದಾರೆ ಆದರೆ, ಖಾಲಿ ಇರುವ ಹುದ್ದೆಗೆ ಶಿಕ್ಷಕರನ್ನು ತುಂಬಿಕೊಳ್ಳುವಂತಹ ಕೆಲಸವನ್ನು ಸರ್ಕಾರ ಮಾಡಿಲ್ಲ, ನೇಮಕವಾದರೆ ಮಾತ್ರ ಸಂಸ್ಕೃತ ಶಾಲೆಗಳು ಉಳಿಸಲು ಸಾಧ್ಯವಾಗುತ್ತದೆ ಎಂದರು.
ಸಂಸ್ಕೃತ ಪಾಠಶಾಲೆಯನ್ನು ಉಳಿಸಿಕೊಂಡು ಹೋಗುವಂತಹ ಕೆಲಸ ಎಲ್ಲರ ಮೇಲಿದೆ ಸಂಸ್ಕೃತ ವಿಶ್ವದ ಭಾಷೆಯಾಗಿದ್ದು ಪ್ರಪಂಚದ ಬಹುತೇಕ ಭಾಗದ ಜನರು ಯೋಗ ಹಾಗೂ ಸಂಸ್ಕೃತ ಕಲಿಯಲು ಮುಂದಾಗಿದ್ದಾರೆ ಎಂದರೆ ಆದರ ಶಕ್ತಿ ಎಂತದ್ದು ಎಂಬುದನ್ನ ನಾವೇಲ್ಲರೂ ಅರ್ಥ ಮಾಡಿಕೊಳ್ಳಬೇಕಾಗಿದೆ ಎಂದರು.
ಬೆಟ್ಟದಹಳ್ಳಿ ಶ್ರೀಚಂದ್ರಶೇಖರ ಸ್ವಾಮೀಜಿ ಮಾತನಾಡಿ, ಸಂಸ್ಕೃತಿ, ಸಂಸ್ಕಾರ, ಸಂಸ್ಕೃತ ಈ ಮೂರು ಪದಗಳು ಈ ದೇಶದಲ್ಲಿ ಇನ್ನೂ ನೂರು ವರ್ಷಗಳಾದರೂ ಜೀವಂತವಾಗಿರುತ್ತವೆ ಎಂಬುದನ್ನು ಪ್ರತಿಯೊಬ್ಬರು ಅರ್ಥ ಮಾಡಿಕೊಳ್ಳಬೇಕಾಗಿದೆ.
ಶ್ರೀಸಿದ್ಧಾರ್ಥ ಶಿಕ್ಣಷ ಸಂಸ್ಥೆ ಆಡಳಿತಾಧಿಕಾರಿ ಬಿ.ನಂಜುಂಡಪ್ಪ, ಸಿದ್ದಗಂಗಾ ಮಠದ ಶ್ರೀಸಿದ್ದಲಿಂಗೇಶ್ವರ ವೇದ ಸಂಸ್ಕೃತ ಕಾಲೇಜು ಪ್ರಾಚಾರ್ಯ ಡಿ.ಎಸ್.ಚಂದ್ರಶೇಖರಯ್ಯ, ನಿಕಟ ಪೂರ್ವ ಅಧ್ಯಕ್ಷ ರಂಗರಾಜು, ಉಪಾಧ್ಯಕ್ಷ ಎಂ.ರಾಜಣ್ಣ, ಜಿಲ್ಲಾಧ್ಯಕ್ಷ ಎಚ್.ಪಿ.ಶಿವರುದ್ರಪ್ಪ, ಕಾರ್ಯದರ್ಶಿ ವೆಂಕಟಪ್ಪ ಮತ್ತಿತರರು ಇದ್ದರು.