

ತುಮಕೂರು: ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ವಿರೋಧಿಸಿ ವಿವಿಧ ಕನ್ನಡ ಸಂಘಟನೆಗಳು ಬೆಂಗಳೂರು ಬಂದ್‌ಗೆ ಕರೆ ನೀಡಿವೆ. ಪ್ರತಿಭಟನೆ ಕಾನೂನು ಚೌಕಟ್ಟಿನಲ್ಲಿ ಇರಬೇಕು, ಅನುಮತಿ ಇಲ್ಲದೆ ಬಂದ್ ನಡೆಸಿದರೆ ಕಾನೂನು ವಿರೋಧಿಯಾಗಲಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಬಂದ್‌ನಿಂದ ಸಾರ್ವಜನಿಕ ಹಾಗೂ ಖಾಸಗಿ ಆಸ್ತಿಗಳಿಗೆ ನಷ್ಟವಾಗಬಾರದು, ಕಾನೂನು ಬಾಹಿರವಾಗಿ ನಡೆದುಕೊಂಡರೆ ಕ್ರಮ ಅನಿವಾರ್ಯ, ಶಾಂತಿಯುತ ಪ್ರತಿಭಟನೆಗೆ ನಮ್ಮ ಅಭ್ಯಂತರವಿಲ್ಲ ಎಂದರು.
ಕಾವೇರಿ ನೀರು ಉಳಿಸಿಕೊಳ್ಳಲು ಸರ್ಕಾರ ಎಲ್ಲಾ ರೀತಿಯ ಪ್ರಯತ್ನ ನಡೆಸುತ್ತಿದೆ, ಜನರು ಸರ್ಕಾರದ ಜತೆಗೆ ಸಹಕಾರ ನೀಡಬೇಕು. ಸಿಡಬ್ಲೂಡಬಲ್ಯೂಎಂಎ ಮುಂದೆ ನಮ್ಮ ಕಾನೂನು ತಜ್ಞರು ವಾದ ಮಂಡಿಸುತ್ತಿದ್ದಾರೆ, ಎಲ್ಲವನ್ನೂ ಸಾರ್ವಜನಿಕರ ಮುಂದಿಟ್ಟಿದ್ದೇವೆ ಎಂದರು.
CWMA ನವರು 5 ಸಾವಿರ ಕ್ಯೂಸೆಕ್ ನೀರು ಬೀಡಬೇಕು ಎಂದು ಹೇಳಿದ್ದಾರೆ. ನಾವು ಮೇಲ್ಮನವಿ ಸಲ್ಲಿಸಿದ್ದೇವೆ ಸೆ. 26ಕ್ಕೆ ಕೇಸ್ ಬರುತ್ತದೆ, ಏನು ತೀರ್ಮಾನ ಆಗುತ್ತದೆ ಎಂಬುದನ್ನು ಕಾದು ನೋಡೋಣ ಎಂದರು.
ನಾವು ಅವರು ಹೇಳಿದ್ದಂತೆ 5 ಸಾವಿರ ಕ್ಯೂಸೆಕ್ ನೀರು ಬಿಟ್ಟಿಲ್ಲ, ಸ್ವಾಭಾವಿಕವಾಗಿ 2 ಸಾವಿರ ಕ್ಯೂಸೆಕ್ ನೀರು ಹೊಗುತ್ತದೆ. ಅದನ್ನು ಬಿಟ್ಟು ಹೆಚ್ಚು ನೀರು ಬಿಟ್ಟಿಲ್ಲ. ಶಾಂತಿಯುತವಾಗಿ ಪ್ರತಿಭಟನೆ ಮಾಡಿದ್ದಾರೆ ಅವರಿಗೆ ಧನ್ಯವಾದ ಹೇಳುತ್ತೇನೆ ಎಂದರು.