ವಿಜಯವಾಣಿ ಸಂವಾದದಲ್ಲಿ ತುರುವೇಕೆರೆ ಶಾಸಕ ಎಂ.ಟಿ.ಕೃಷ್ಣಪ್ಪ

04Tmk_
Published on

ತುಮಕೂರು: ತುಮಕೂರು ಜಿಲ್ಲೆ ಇಬ್ಭಾಗವಾಗುವುದೇ ಆದರೆ ತುರುವೇಕೆರೆ ಜಿಲ್ಲಾ ಕೇಂದ್ರವಾಗಲಿ. ಇದು ನನ್ನ ಮಹಾ ಕನಸು. ಜಿಲ್ಲಾ ಕೇಂದ್ರವಾದರೆ ಸಾಕಷ್ಟು ಸೌಲಭ್ಯಗಳು ಸ್ವಾಭಾವಿಕವಾಗಿ ಬರಲಿವೆ ಹೀಗೆಂದು ತುರುವೇಕೆರೆ ಶಾಸಕ ಎಂ.ಟಿ.ಕೃಷ್ಣಪ್ಪ ಕನಸು ಬಿಚ್ಚಿಟ್ಟರು.

ನಗರದ ವಿಜಯವಾಣಿ ಕಚೇರಿಯಲ್ಲಿ ಸೋಮವಾರ ವಿಶೇಷ ಸಂವಾದದಲ್ಲಿ ಮಾತನಾಡಿದ ಅವರು, ಜೆಡಿಎಸ್ ಸರ್ಕಾರ ಬಂದಿದ್ದರೆ ನನ್ನ ಕನಸು ನನಸಾಗುತ್ತಿತ್ತು, ತುರುವೇಕೆರೆ ಜಿಲ್ಲಾ ಕೇಂದ್ರವಾಗಬೇಕಿತ್ತು. ಈಗ ಆ ಕನಸು ಕೈಗೂಡವಂತೆ ಕಾಣುತ್ತಿಲ್ಲ ಎಂದರು.

ತೆಂಗು, ಅಡಕೆ ಪ್ರಮುಖ ವಾಣಿಜ್ಯ ಬೆಳೆಯಾಗಿರುವ ತುರುವೇಕೆರೆ ತಾಲೂಕಿನಲ್ಲಿ ತೆಂಗು ಬೆಳೆಗಾರರು ನತದೃಷ್ಟರು ಎನ್ನಿಸಿದ್ದಾರೆ. ಕೊಬ್ಬರಿ ಬೆಲೆ ಪಾತಾಳಕ್ಕಿಳಿದಿದ್ದು ಕಾಂಗ್ರೆಸ್ ಸರ್ಕಾರ ರೈತ ವಿರೋಧಿಯಾಗಿದೆ. ಕೊಬ್ಬರಿಗೆ ಬೆಂಬಲ ಬೆಲೆ ನೀಡುವಂತೆ ಆಗ್ರಹಿಸಿ ಹೋರಾಟ ಅನಿವಾರ್ಯ ಎಂದು ಎಚ್ಚರಿಸಿದರು.

ಕ್ಷೇತ್ರದ ಎಲ್ಲಾ ಗ್ರಾಮಗಳಿಗೂ ಸುಸಜ್ಜಿತ ರಸ್ತೆ, ಶಾಲೆ, ಅಂಗನವಾಡಿ ಕಟ್ಟಡಗಳ ನಿರ್ಮಾಣವನ್ನು ಆದ್ಯತೆಯಾಗಿ ಸ್ವೀಕರಿಸಿದ್ದು ಈಗಾಗಲೇ ಸರ್ಕಾರಕ್ಕೂ ಅನುದಾನ ಕೋರಿ ಪತ್ರ ಬರೆದಿದ್ದೇನೆ, ಹಣ ಸಿಗದಿದ್ದರೆ ಹೋರಾಟ ಮಾಡಿಯಾದರೂ ಕ್ಷೇತ್ರದಲ್ಲಿ ಆಗಬೇಕಿರುವ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.

ತಾಲೂಕಿನಲ್ಲಿ ಹೇಮಾವತಿ ನೀರು ಹರಿದರೂ ಇನ್ನೂ ಸಾಕಷ್ಟು ಭಾಗಕ್ಕೆ ನೀರಾವರಿ ಯೋಜನೆಗಳಿಗೆ ಆಗ್ರಹಿಸಿದ್ದೇ ಇಲ್ಲ, ದಬ್ಬೇಘಟ್ಟ ಏತ ನೀರಾವರಿ ಯೋಜನೆ ಆರಂಭವಾಗಿ ಆರು ವರ್ಷಗಳು ಕಳೆದರೂ ಕಾಮಗಾರಿ ಆರಂಭವೇ ಆಗಿಲ್ಲ, ಇದಕ್ಕೆಲ್ಲಾ ಕಾಯಕಲ್ಪ ನೀಡಬೇಕಿದೆ ಎಂದರು.

ದಬ್ಬೇಘಟ್ಟ, ಕಣತ್ತೂರು, ಮಾನವನಹಳ್ಳಿ, ಮುದ್ದನಹಳ್ಳಿ ಏತನೀರಾವರಿ ಯೋಜನೆ ಚಾಲನೆಯಗಿ ಆರು ವರ್ಷ ಕಳೆದಿದೆ, ಆರು ನೀರಾವರಿ ಯೋಜನೆಗಳು ಸಾಕಾರವಾಗಬೇಕಿದೆ. ದೆಬ್ಬೇಘಟ್ಟ, ಬಾಣಸಂದ್ರ ಭಾಗಕ್ಕೆ ಶಿಂಷಾ ನದಿಯಿಂದ ನೀರು ಹರಿಸುವ ಯೋಜನೆಗಳಿಗೆ ಶೀಘ್ರದಲ್ಲಿಯೇ ಚಾಲನೆ ನೀಡಬೇಕಿದೆ. ಈ ನಿಟ್ಟಿನಲ್ಲಿ ಕ್ರಮವಹಿಸುವೆ ಎಂದು ತಿಳಿಸಿದರು.

ಗ್ಯಾರಂಟಿ ಕೊಟ್ಟು ಲೋಕಸಭೆ ಗೆಲ್ಲುವ ಕನಸು ಕಾಣುತ್ತಿದೆ:

ಕಾಂಗ್ರೆಸ್ ಸರ್ಕಾರವು ಗ್ಯಾರಂಟಿ ಕಾರ್ಯಕ್ರಮಗಳನ್ನು ನೀಡಿ ಮುಂಬರುವ ಲೋಕಸಭಾ ಚುನಾವಣೆಯನ್ನು ಗೆಲ್ಲುವ ಕನಸು ಕಾಣುತ್ತಿದೆ. ಆದರೆ, ಅವರಿಗೆ ದೊಡ್ಡ ನಿರಾಸೆ ಕಾಡಲಿದೆ. ಈ ಹಿಂದೆ ರಾಮಕೃಷ್ಣ ಹೆಗಡೆ ತಾಳಿಭಾಗ್ಯ ಕಾರ್ಯಕ್ರಮ ನೀಡಿದ್ದರೂ, ಸಿದ್ಧರಾಮಯ್ಯ ಅವರೂ ಶಾದಿಭಾಗ್ಯ ಕೊಟ್ಟಿದ್ದರು ಈಗೆ ಆ ಯೋಜನೆಗಳು ಎಲ್ಲಿವೆ ಎಂದು ಪ್ರಶ್ನಿಸಿದರು.
ಲೋಕಸಭೆ ಚುನಾವಣೆ ನಂತರ ಕಾಂಗ್ರೆಸ್ ಸರ್ಕಾರದ ಎಲ್ಲಾ ಗ್ಯಾರಂಟಿ ಕಾರ್ಯಕ್ರಮಗಳೂ ಬಂದ್ ಆಗಲಿವೆ. ಜನರಿಗೆ ಎಲ್ಲವೂ ಅರ್ಥವಾಗಲಿದೆ ಎಂದು ಎಂ.ಟಿ.ಕೃಷ್ಣಪ್ಪ ಭವಿಷ್ಯ ನುಡಿದರು.

ಅಭಿವೃದ್ಧಿ ಶೂನ್ಯ ಎನ್ನಿಸಿದೆ, ಹಳ್ಳಿ ಕಡೆ ರಸ್ತೆ ಗುಂಡಿ ಬಿದ್ದಿವೆ…

ತಾಲೂಕಿನಲ್ಲಿ ಇನ್ನೂ ಸಾಕಷ್ಟು ಕೆಲಸಗಳು ಬಾಕಿ ಉಳಿದಿದ್ದು ಸರ್ಕಾರದಿಂದ ಹೆಚ್ಚಿನ ಅನುದಾನದ ನಿರೀಕ್ಷೆಯಿದೆ. ತಾಲೂಕಿನ ಬಹುತೇಕ ರಸ್ತೆಗಳೆಲ್ಲವೂ ಹಾಳಾಗಿದ್ದು ಸುಗಮ ಸಂಚಾರಕ್ಕೆ ಹೊಸ ರಸ್ತೆಗಳನ್ನು ನಿರ್ಮಿಸಬೇಕಿದೆ ಎಂದು ಕೃಷ್ಣಪ್ಪ ಹೇಳಿದರು.
10 ಕೋಟಿ ರೂ., ವೆಚ್ಚದಲ್ಲಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿಗೆ ಹೊಸ ಕಟ್ಟಡ ನಿರ್ಮಿಣವಾಗುತ್ತಿದೆ. ಬಸ್ ನಿಲ್ದಾಣ, ಪುರಸಭೆ ಕಚೇರಿ, ತಾಲೂಕು ಆಸ್ಪತ್ರೆ ಕಟ್ಟಡಕ್ಕೆ ಈ ಹಿಂದೆ ನಾನು ಶಾಸಕನಾಗಿದ್ದಾಗಲೇ ಅನುದಾನ ತಂದಿದ್ದೆ. ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರದ ಮೂಲಸೌಕರ್ಯಕ್ಕೆ ಅನುದಾನ ಕೇಳಿದ್ದೇನೆ. ರಸ್ತೆಗಳ ಅಭಿವೃದ್ಧಿಗೆ ವಿಶೇಷ ಆಸಕ್ತಿ ವಹಿಸಿದ್ದೇನೆ. ಶಾಲೆ, ಅಂಗನನಾಡಿ ಕಟ್ಟಡಗಳ ನಿರ್ಮಾಣ ಮಾಡುತ್ತೇವೆ. ಅಭಿವೃದ್ಧಿ ಕೆಲಸಗಳನ್ನು ನನ್ನ ಅವಧಿಯಲ್ಲಿ ಮುಂದುವರೆಸುವೆ ಎಂದು ಭರವಸೆಯಿತ್ತರು.

ಸರ್ಕಾರಿ ಇಂನಿಜಿಯರಿಂಗ್ ಕಾಲೇಜು ಅಗತ್ಯವಿದೆ:

ತುರುವೇಕೆರೆಯಲ್ಲಿ ಈಗಾಗಲೇ ಸರ್ಕಾರಿ ಡಿಪ್ಲೊಮಾ ಕಾಲೇಜು ಇದೆ. ಇದರ ಜತೆ ಇಂಜಿನಿಯರಿಂಗ್ ಕಾಲೇಜು ಸ್ಥಾಪಿಸಬೇಕು ಎಂಬುದು ನನ್ನ ಕನಸಾಗಿತ್ತು. ಆದರೆ, ನಮ್ಮ ಪಕ್ಷದ ಸರ್ಕಾರ ಬರಲಿಲ್ಲ. ಈಗಿನ ಕಾಂಗ್ರೆಸ್ ಸರ್ಕಾರ ನಮ್ಮ ಬೇಡಿಕೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಎಂ.ಟಿ.ಕೃಷ್ಣಪ್ಪ ಬೇಸರಿಸಿದರು.
ಗ್ರಾಮೀಣ ಭಾಗದ ರೈತರ ಮಕ್ಕಳೂ ತಾಂತ್ರಿಕ ಶಿಕ್ಷಣ ಪಡೆದು ವಿದ್ಯಾವಂತರಾದರೆ ಕುಟುಂಬಗಳು ಉದ್ಧಾರವಾಗಲಿವೆ. ಈ ಹಿನ್ನೆಲೆಯಲ್ಲಿ ಡಿಪ್ಲೊಮಾ, ಇಂಜಿನಿಯರಿಂಗ್ ಕಾಲೇಜು ಸ್ಥಾಪಿಸಬೇಕಿದೆ. ತುರುವೇಕೆರೆ ಜಿಲ್ಲಾ ಕೇಂದ್ರವಾಗಿದ್ದರೆ ಇಂತಹ ಅನೇಕ ಸೌಲಭ್ಯಗಳು ಸಹಜವಾಗಿಯೇ ಬರುತ್ತಿದ್ದವು ಎಂದರು.

ಜೆಡಿಎಸ್ ಘೋಷಿಸಿದ್ದ `ಪಂಚರತ್ನ' ದೀ ಬೆಸ್ಟ್:

ಚುನಾವಣೆ ಪೂರ್ವದಲ್ಲಿ ಜೆಡಿಎಸ್ ಘೋಷಿಸಿದ್ದ ಪಂಚರತ್ನ ಯೋಜನೆಗಳು `ದೀ ಬೆಸ್ಟ್ ' ಯೋಜನೆಗಳಾಗಿದ್ದವು. ಆದರೆ, ಜನರು ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗೆ ಮರುಳಾಗಿ ಆ ಪಕ್ಷಕ್ಕೆ ಮತ ನೀಡಿದ್ದಾರೆ. ಈ ಗ್ಯಾರಂಟಿಗಳ ಜಾರಿಯನ್ನೇ ಸರ್ಕಾರ ದೊಡ್ಡ ಸಾಧನೆ ಅಂತ ಬಿಂಬಿಸಿಕೊಳ್ಳುತ್ತಿದೆ. ಅಭಿವೃದ್ಧಿ ಕೆಲಸಕ್ಕೆ ದುಡ್ಡು ಒದಗಿಸಲಾಗದೆ ಒದ್ದಾಡುತ್ತಿದೆ. ರಾಜ್ಯದಲ್ಲಿ ತೀವ್ರ ಬರಗಾಲ ಆವರಿಸಿದೆ, ಹೇಮಾವತಿ ನೀರು ತಮಿಳುನಾಡಿಗೆ ಸರಾಗವಾಗಿ ಹರಿಯುತ್ತಿದೆ. ರೈತ ವಿರೋಧಿಯಾದ ಕಾಂಗ್ರೆಸ್ ಸರ್ಕಾರ ಮೌನವಹಿಸಿದೆ. ಕೊಬ್ಬರಿ ಬೆಲೆ ಪಾತಾಳಕ್ಕಿಳಿದಿದ್ದು ರೈತರಲ್ಲಿ ಆತಂಕ ಎದುರಾಗಿದೆ. ವಿಪಕ್ಷದ ಸದಸ್ಯನಾಗಿ ವಿಧಾನಸೌಧದಲ್ಲಿ ಈ ಬಗ್ಗೆ ಮಾತನಾಡುತ್ತೇನೆ, ಹೋರಾಟ ರೂಪಿಸಲು ದಸರಾ ಹಬ್ಬದ ಕಳೆದ ಮೇಲೆ ಒಂದು ತೀರ್ಮಾನ ಮಾಡುತ್ತೇನೆ ಎಂದರು.

ಗೌಡರ ಕುಟುಂಬ ಅಧಿಕಾರದಲ್ಲಿಲ್ಲ, ಜಿಲ್ಲೆಗೆ ಏಕೆ ನೀರು ಬರುತ್ತಿಲ್ಲ!?

ಎಚ್.ಡಿ.ದೇವೇಗೌಡರು ತುಮಕೂರು ಜಿಲ್ಲೆಗೆ ನೀರು ಬರಲು ವಿರೋಧಿಯಾಗಿದ್ದಾರೆ ಎಂದು ಸುಳ್ಳು ಹಬ್ಬಿಸಲಾಗಿದೆ. ದೇವೇಗೌಡರು ಇಲ್ಲದಿದ್ದರೆ ಜಿಲ್ಲೆಗೆ ನೀರು ಬರುತ್ತಿರಲಿಲ್ಲ. ಬಾಗೂರು-ನವಿಲೆ ಸುರಂಗ ಮಾಡಿದ್ದರಿಂದಲೇ ಜಿಲ್ಲೆಗೆ ನೀರು ಬಂದಿದ್ದು ಎಂದು ನೆಚ್ಚಿನ ನಾಯಕನನ್ನು ಎಂಟಿಕೆ ಸಮರ್ಥಿಸಿಕೊಂಡರು.
ಈಗ ರಾಜ್ಯದಲ್ಲಿ ದೇವೇಗೌಡರ ಕುಟುಂಬವೇನು ಅಧಿಕಾರದಲ್ಲಿಲ್ಲ. ಆದರೂ, ಜಿಲ್ಲೆಗೆ ಏಕೆ ಹೇಮಾವತಿ ನೀರು ಬರುತ್ತಿಲ್ಲ ಎಂದು ಕಾಂಗ್ರೆಸ್ ಮುಖಂಡರನ್ನು ಪ್ರಶ್ನಿಸಿದರು. ತಮಿಳುನಾಡಿಗೆ ನೀರು ಬಿಡುವ ವಿಷಯದಲ್ಲಿ ಹಿಂದೆ ಬಂಗಾರಪ್ಪ ಅವರಂತೆ ದಿಟ್ಟ ನಿರ್ಧಾರ ತೆಗೆದುಕೊಳ್ಳಬಹುದಿತ್ತು. ಆದರೆ, ಸರ್ಕಾರ ಎಲ್ಲಿ ಹೋಗುತ್ತೇ ಅನ್ನುವ ಭಯ. ಜನರಿಗಾಗಿಯೇ ನಮ್ಮ ಸರ್ಕಾರ ಅಂತ ಹೇಳುತ್ತಾರೆ, ಜನರಿಗೋಸ್ಕಾರ ಅಧಿಕಾರ ಕಳೆದುಕೊಳ್ಳಲು ಸಿದ್ಧರಿಲ್ಲ. ನಮ್ಮ ತಾಲೂಕಿನಲ್ಲಿ ಕೆರೆ ಕಟ್ಟೆಗಳು ತುಂಬಿಲ್ಲ, 20 ದಿನ ಹರಿಯಬೇಕಿತ್ತು ಹರಿಯಲಿಲ್ಲ ಎಂದರು.

ಕಾಂಗ್ರೆಸ್ ಮುಖಂಡರು ಮೋಸ ಮಾಡಿದರು…

2019ರಲ್ಲಿ ಎಚ್.ಡಿ.ದೇವೇಗೌಡರು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ತುಮಕೂರು ಲೋಕಸಭಾಕ್ಷೇತ್ರದಲ್ಲಿ ಕಣಕ್ಕಿಳಿದು ಸೋಲು ಕಂಡರು. ಕಾಂಗ್ರೆಸ್ ಮುಖಂಡರು ಮೋಸ ಮಾಡಿದರು. ಬಿಜೆಪಿಯವರು ಕಾಂಗ್ರೆಸ್‌ನವರಂತಲ್ಲ ಎಂದು ಬಿಜೆಪಿ ಜತೆಗಿನ ಜೆಡಿಎಸ್ ಮೈತ್ರಿಯನ್ನು ಸಮರ್ಥಿಸಿಕೊಂಡರು.
ದೇಶದಲ್ಲಿ ಕಾಂಗ್ರೆಸ್ ಕೂಡ ಶಕ್ತಿಯನ್ನು ಕಳೆದುಕೊಂಡು ಪ್ರಾದೇಶಿಕ ಪಕ್ಷದಂತೆಯೇ ಇದೆ. ಬಿಜೆಪಿ ಜತೆ ಮೈತ್ರಿ ನಮಗೆ ಅನಿವಾರ್ಯವಾಗಿತ್ತು. ಇಂಡಿಯಾ ಕೂಟಕ್ಕೆ ಜೆಡಿಎಸ್ ಸೇರಿಸಿಕೊಳ್ಳಲಿಲ್ಲ. ಜೆಡಿಎಸ್‌ಗೆ ಮುಸ್ಲಿಂ ಸಮುದಾಯದವರು ಕೂಡ ಓಟು ಕೊಡುತ್ತಾರೆ. ಅವರಿಗೆ ಮೀಸಲಾತಿ ನೀಡಿದ್ದು ದೇವೇಗೌಡರು. ಸಾಮಾಜಿಕ ನ್ಯಾಯವನ್ನು ನಾವು ಕಾಪಾಡಿಕೊಂಡು ಬಂದಿದ್ದೇವೆ ಎಂದರು.

ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿ:

ಮುಸ್ಲಿಂ ಸಮುದಾಯಕ್ಕೆ ಮಾತುಕೊಟ್ಟಂತೆ ನಡೆದುಕೊಂಡಿದ್ದೇವೆ. ನಮಗೆ ಎಲ್ಲರೂ ಒಂದೇ. ಬಿಜೆಪಿ ಜತೆಗಿನ ಮೈತ್ರಿಗೆ ಸ್ವಾಗತವಿದೆ. ಕಾಂಗ್ರೆಸ್‌ನಷ್ಟು ಮೋಸವಾಗದು, ಮೋದಿ ಮತ್ತೊಮ್ಮೆ ಪ್ರಧಾನಿಯಗಲಿ ಎಂಬುದು ಎಲ್ಲರ ಆಶಯವಾಗಿದೆ ಎಂದು ಕೃಷ್ಣಪ್ಪ ಹೇಳಿದರು.
ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಯಾರಿಗೆ ಟಿಕೆಟ್ ಕೊಡಬೇಕೆಂಬ ಬಗ್ಗೆ ವರಿಷ್ಠರು ತೀರ್ಮಾನ ಮಾಡುತ್ತಾರೆ. ಯಾವ ಕ್ಷೇತ್ರವನ್ನು ನಾವು ಇಟ್ಟುಕೊಳ್ಳಬೇಕು. ಬಿಜೆಪಿಗೆ ಎಷ್ಟು ಬಿಟ್ಟುಕೊಡಬೇಕು ಎಂಬುದು ವರಿಷ್ಠರ ನಿರ್ಧಾರ. ಜೆಡಿಎಸ್ ಅಥವಾ ಬಿಜೆಪಿಯಿಂದ ಯಾರೇ ಅಭ್ಯರ್ಥಿಯಾದರೂ ಗೆಲುವಿಗೆ ಎಲ್ಲರೂ ಒಟ್ಟಿಗೆ ಶ್ರಮಿಸುತ್ತೇವೆ ಎಂದರು.

ಕ್ಷೇತ್ರದ ಬಡವರಿಗೆ 1500 ಮನೆ ಮಂಜೂರು:

ಕ್ಷೇತ್ರದಲ್ಲಿರುವ ಬಡವರಿಗೆ ಮನೆ ನಿರ್ಮಿಸಿಕೊಡಬೇಕು ಎಂಬುದು ನಮ್ಮ ಆದ್ಯತೆಯಾಗಿದ್ದು ಸರ್ಕಾರದಿಂದ 1500 ಮನೆಗಳು ಮಂಜೂರಾಗಿದ್ದು ಆಯಾ ಗ್ರಾಪಂನಲ್ಲಿಯೇ ಗ್ರಾಮಸಭೆ ಮೂಲಕ ಫಲಾನುಭವಿಗಳ ಆಯ್ಕೆ ನಡೆಯಲಿದೆ. ಪರಿಶಿಷ್ಟ ಜಾತಿ, ಪಂಗಡ, ಒಬಿಸಿ, ಅಲ್ಪಸಂಖ್ಯಾತರು, ಸಾಮಾನ್ಯ ವರ್ಗದ ಬಡವರಿಗೂ ಮನೆಗಳು ಸಿಗಲಿದೆ.

ಒಂದು ರೂಪಾಯಿ ಕೊಟ್ಟಿಲ್ಲ:

ತುರುವೇಕೆರೆ ಸೇರಿದಂತೆ ಜಿಲ್ಲೆಯ ಎಲ್ಲಾ ತಾಲೂಕುಗಳು ಬರಗಾಲ ಪಟ್ಟಿಗೆ ಸೇರಿವೆ. ಬರಗಾಲದ ಹಿನ್ನೆಲೆಯಲ್ಲಿ ಎಲ್ಲಾ ಗ್ರಾಮಗಳಲ್ಲಿಯೂ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿದೆ. ಇದಕ್ಕಾಗಿ ಹಣದ ಅಗತ್ಯವಿದೆ. ಬರ ನಿರ್ವಹಣೆಗೆ ಅಂತ ಒಂದು ರೂಪಾಯಿ ಕೊಟ್ಟಿಲ್ಲ. ಜಿಲ್ಲಾಧಿಕಾರಿಗಳು ಕೊಳವೆಬಾವಿ ಕೊರೆಯಲಿಕ್ಕು ದುಡ್ಡ ಕೊಟ್ಟಿಲ್ಲ. ಎಂದು ಕೃಷ್ಣಪ್ಪ ಅಸಮಾಧಾನ ಹೊರಹಾಕಿದರು.

ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡೋಣ:

ತಾಲೂಕಿನ ಮಲ್ಲಾಘಟ್ಟ ಕೆರೆ ಪ್ರವಾಸಿ ತಾಣವಾಗಬೇಕು ಎಂಬುದು ನಮ್ಮ ಬಹುದಿನದ ಬೇಡಿಕೆ ಎನ್ನಿಸಿದೆ. ಈ ಕೆರೆ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ಬರಲಿದ್ದು ಅಭಿವೃದ್ಧಿಗೆ ಇಲಾಖೆಯ ಅನುಮತಿ ನೀಡಬೇಕಿದೆ. ಪ್ರವಾಸಿಗರನ್ನು ಆಕರ್ಷಿಸಲು ಪ್ರವಾಸಿ ಮಂದಿರ ನಿರ್ಮಾಣಕ್ಕೆ ಸಂಬಂಧಪಟ್ಟ ಇಲಾಖೆ ಜತೆ ಸಂಪರ್ಕದಲ್ಲಿದ್ದೇನೆ ಎಂದರು.

ಮಹಾಲಯ ಅಮಾವಾಸ್ಯೆ ಬಳಿಕ ತುಮಕೂರಿಗೆ ಪಾದಯಾತ್ರೆ:

ಕಾಂಗ್ರೆಸ್ ಸರ್ಕಾರದ ರೈತ ವಿರೋಧಿಯಾಗಿದ್ದು ನಯಾ ಪೈಸೆ ಅನುದಾನವನ್ನು ಅಭಿವೃದ್ಧಿಗೆ ನೀಡುತ್ತಿಲ್ಲ. ಕೊಬ್ಬರಿ ಬೆಲೆ ಹೆಚ್ಚಳ, ವಿದ್ಯುತ್ ಸಮಸ್ಯೆ ಪರಿಹಾರ ಹಾಗೂ ವಿವಿಧ ನೀರಾವರಿ ಯೋಜನೆಗಳಿಗೆ ಆಗ್ರಹಿಸಿ ತುರುವೇಕೆರೆಯಿಂದ-ತುಮಕೂರಿಗೆ ಪಾದಯಾತ್ರೆ ಆರಂಭಿಸಲಾಗುವುದು. ಪಕ್ಷಬೇದ ಮರೆತು ಎಲ್ಲರೂ ಈ ಚಳವಳಿಯಲ್ಲಿ ಭಾಗವಹಿಸಬೇಕು ಎಂದು ಎಂಟಿಕೆ ಈ ಸಂದರ್ಭದಲ್ಲಿ ಮನವಿ ಮಾಡಿದರು.
ಕೊಬ್ಬರಿ ಕೊಂಡುಕೊಳ್ಳಲು ಖರೀದಿ ಕೇಂದ್ರವನ್ನು ಶಾಶ್ವತವಾಗಿ ಸ್ಥಾಪಿಸುವಂತೆ ಆಗ್ರಹಿಸಿ ಜಿಲ್ಲೆಯಲ್ಲಿ ತೆಂಗು ಬೆಳೆಯುವ ರೈತರೆಲ್ಲಾ ನತದೃಷ್ಟರಾಗಿದ್ದಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net