ಜೆಡಿಎಸ್ ಶಾಸಕ ಎಂ.ಟಿ.ಕೃಷ್ಣಪ್ಪ ನೇತೃತ್ವದಲ್ಲಿ ಪ್ರತಿಭಟನೆ

26tvk03
Published on

ತುರುವೇಕೆರೆ: ಹೇಮಾವತಿ ಜಲಾಶಯದಿಂದ ನಾಗಮಂಗಲ ಶಾಖಾ ನಾಲೆಯ ಮೂಲಕ  ದಬ್ಬೇಘಟ್ಟ ಮತ್ತು ಮಾಯಸಂದ್ರ ಹೋಬಳಿಗೆ ಕುಡಿಯುವ ನೀರು ಹರಿಸಬೇಕೆಂದು ಆಗ್ರಹಿಸಿ ಜೆಡಿಎಸ್ ಶಾಸಕ ಎಂ.ಟಿ.ಕೃಷ್ಣಪ್ಪ ನೇತೃತ್ವದಲ್ಲಿ ಮೈತ್ರಿ ಕಾರ್ಯಕರ್ತರು, ಮುಖಂಡರು ಖಾಲಿ ಕೊಡ ತಲೆ ಮೇಲೆ ಹೊತ್ತು ಸೋಮವಾರ ಪ್ರತಿಭಟನೆ ನಡೆಸಿದರು.

 ಶಾಸಕ ಎಂ.ಟಿ.ಕೃಷ್ಣಪ್ಪನವರ ನೇತೃತ್ವದಲ್ಲಿ ಬಿಜೆಪಿ ಮತ್ತು ಜೆಡಿಎಸ್ ನ ನೂರಾರು ಕಾರ್ಯಕರ್ತರು ತಲೆಯ ಮೇಲೆ ಖಾಲಿ ಕೊಡಗಳನ್ನು ಹೊತ್ತು ಪಾದಯಾತ್ರೆ ಮೂಲಕ ಹೇಮಾವತಿ ಕಚೇರಿತನಕ ಹೊರಟರು. ಈ ವೇಳೆ ಬೇಕೇ ಬೇಕು ಹೇಮಾವತಿ ನೀರು ಬೇಕು, ಉಳಿಸಿ ಉಳಿಸಿ ರೈತರನ್ನು ಉಳಿಸಿ ಎಂದು ಘೋಷಣೆ ಕೂಗಲಾಯಿತು.

ಕುಡಿಯುವ ನೀರಿಗೆ ತತ್ವಾರವಿರುವ ದಬ್ಬೇಘಟ್ಟ ಹೋಬಳಿ ಮತ್ತು ಮಾಯಸಂದ್ರ ಹೋಬಳಿಯ ಮೂಲಕ ಹಾದು ಹೋಗುವ ನಾಗಮಂಗಲ ನಾಲೆಗೆ ನೀರನ್ನು ಹರಿಸಿ ಕೆರೆ ಕಟ್ಟೆಗಳನ್ನೂ ಸಹ ತುಂಬಿಸಬೇಕು. ರೈತಾಪಿಗಳು ಬರಗಾಲದಿಂದ ತತ್ತರಿಸಿ ಹೋಗಿದ್ದಾರೆ. ಎಲ್ಲಾ ಕೆರೆ ಕಟ್ಟೆಗಳು ಬತ್ತಿ ಹೋಗಿವೆ. ಜನ ಜಾನುವಾರುಗಳಿಗೆ ಕುಡಿಯುವ ನೀರಿಗೂ ತತ್ವಾರವಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತುಮಕೂರಿನ ಜನರು ಮಾತ್ರ ಮನುಷ್ಯರಾ? ನಾವು ಮನುಷ್ಯರಲ್ಲವೇ?. ತುಮಕೂರು ಶಾಖಾ ನಾಲೆಗೆ ಮಾತ್ರ ನೀರು ಬಿಡಲಾಗಿದೆ. ನಾಗಮಂಗಲ ಶಾಖಾ ನಾಲೆಗೆ ಏಕೆ ನೀರು ಬಿಡಲಾಗುತ್ತಿಲ್ಲ. ಇಲ್ಲಿಯ ಜನರು ಬದುಕುವುದು ಬೇಡವೇ? ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಹೇಮಾವತಿ ಇಲಾಖಾ ಅಧೀಕ್ಷಕಿ ಸುವರ್ಣ ರವರನ್ನು ತರಾಟೆಗೆ ತೆಗೆದುಕೊಂಡರು.

 ಇನ್ನು ಮೂರ್ನಾಲ್ಕು ದಿನಗಳಲ್ಲಿ ಹೇಮಾವತಿ ನೀರನ್ನು ನಾಗಮಂಗಲ ಶಾಖಾ ನಾಲೆಗೆ ಬಿಡದಿದ್ದಲ್ಲಿ ಸಹಸ್ರಾರು ರೈತರೊಂದಿಗೆ ಹೇಮಾವತಿ ಇಲಾಖೆ ಮುಂದೆ ಪ್ರತಿಭಟನಾ ಧರಣಿ ಕೂರುವುದಾಗಿ ಶಾಸಕ ಎಂ.ಟಿ.ಕೃಷ್ಣಪ್ಪ ಎಚ್ಚರಿಕೆ ನೀಡಿದರು.

 ದಬ್ಬೇಘಟ್ಟ ರಸ್ತೆಯಲ್ಲಿರುವ ಹೇಮಾವತಿ ಇಲಾಖೆ ಬಳಿ ಶಾಸಕರು ಪ್ರತಿಭಟನೆ ಹಮ್ಮಿಕೊಳ್ಳುವ ಮಾಹಿತಿಯನ್ನು ಆಧರಿಸಿ ಹೇಮಾವತಿ ಕಚೇರಿ ಮುಂಭಾಗ ಸಿಪಿಐ ಲೋಹಿತ್ ನೇತೃತ್ವದಲ್ಲಿ ಬಿಗಿ ಪೊಲೀಸ್  ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಇಲಾಖಾ ಗೇಟಿನ ಮುಂಭಾಗವೇ ಪ್ರತಿಭಟನಾಕಾರರನ್ನು ಪೊಲೀಸರು ತಡೆದರು. ಪ್ರತಿಭಟನಾಕಾರರ ಬಳಿಗೇ ಹೇಮಾವತಿ ಇಲಾಖೆಯ ಎಸ್ ಇ ಸುವರ್ಣ, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಗಳಾದ ಬಿಂದಿ ಮತ್ತು ಶ್ರೀನಿವಾಸ್, ಸಹಾಯಕ ಎಂಜಿಯರ್ ಶಿವಪ್ರಸಾದ್ ಸೇರಿದಂತೆ ಹಲವು ಎಂಜಿನಿಯರ್ ಗಳು ಆಗಮಿಸಿ ಶಾಸಕ ಎಂ.ಟಿ.ಕೃಷ್ಣಪ್ಪನವರ ಅಹವಾಲು ಆಲಿಸಿದರು. ಸಂಬಂಧಿಸಿದ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಸೂಕ್ತ ಕ್ರಮ ಕೈಗೊಳ್ಳುವ ಭರವಸೆಯನ್ನು ಅಧಿಕಾರಿಗಳು ನೀಡಿದರು.

 ಈ ಸಂದರ್ಭದಲ್ಲಿ ಮಾಜಿ ಶಾಸಕ ಎಂ.ಡಿ.ಲಕ್ಷ್ಮೀನಾರಾಯಣ್, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ದೊಡ್ಡೇಗೌಡ, ಮುಖಂಡರಾದ ಮಂಗೀಕುಪ್ಪೆ ಬಸವರಾಜು, ಅರೆಮಲ್ಲೇನಹಳ್ಳಿ ಹೇಮಚಂದ್ರು, ವಿಠಲದೇವರಹಳ್ಳಿ ಹರೀಶ್, ಸೋಮಣ್ಣ, ಲೀಲಾವತಿ ಗಿಡ್ಡಯ್ಯ, ವೆಂಕಟೇಶ್ ಕೃಷ್ಣಪ್ಪ, ಬಿ.ಎಸ್.ದೇವರಾಜ್, ಥರಮನಕೋಟೆ ರಾಜು, ಜಡೆಯ ಕೃಷ್ಣಮೂರ್ತಿ ಸೇರಿದಂತೆ ಹಲವು ಮುಖಂಡರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net