

ತುಮಕೂರು: ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಕಣಕ್ಕಿಳಿಸಲು ಸಮರ್ಥ ಅಭ್ಯರ್ಥಿಗಳಿಗಾಗಿ ಹುಡಕಾಟ ನಡೆಸಿರುವ ಕಾಂಗ್ರೆಸ್ ಒಬಿಸಿಗಳಿಗೆ ಟಿಕೆಟ್ ನೀಡುವುದಾದರೆ ಎಪಿಸಿಸಿ ಮಾಜಿ ಅಧ್ಯಕ್ಷ ರಘುವೀರರೆಡ್ಡಿ ಹೆಸರು ತೇಲಿಬಿಟ್ಟಿದೆ.
ತುಮಕೂರು ಕ್ಷೇತ್ರದಲ್ಲಿ ಈವರೆಗೆ ಲಿಂಗಾಯತ ಹಾಗೂ ಒಕ್ಕಲಿಗ ಸಮುದಾಯದ ಅಭ್ಯರ್ಥಿಗಳೇ ಗೆದ್ದ ಉದಾಹರಣೆಯಿದೆ, ಒಮ್ಮೆ ಮಾತ್ರ ಕುರುಬ ಸಮುದಾಯದ ಸಿ.ಎನ್.ಭಾಸ್ಕರಪ್ಪ ಅವರು ಜನತಾದಳದಿಂದ ಗೆದ್ದು ಸಂಸದರಾಗಿದ್ದು ಈಗ ಇತಿಹಾಸ.
ರಾಜಕೀಯ ಪಕ್ಷಗಳು ಸಂಭವನೀಯರ ಪಟ್ಟಿ ತಯಾರಿಸುವಾಗ ಲಿಂಗಾಯತ, ಒಕ್ಕಲಿಗ ಹಾಗೂ ಒಬಿಸಿ ಸಮುದಾಯದಿಂದ ತಲಾ ಒಬ್ಬರನ್ನು ಆಯ್ಕೆ ಮಾಡಿಕೊಂಡು ಗೆಲ್ಲುವ ಸಾಮಥ್ಯದ ಮೇಲೆ ಅಭ್ಯರ್ಥಿ ಘೋಷಿಸುವುದು ರಾಜಕೀಯ ವಾಡಿಕೆ.
ಇದೇ ಸಂಪ್ರದಾಯದAತೆ ಸಮರ್ಥ ಅಭ್ಯರ್ಥಿಗಾಗಿ ಹುಡುಕಾಡುತ್ತಿರುವ ಕಾಂಗ್ರೆಸ್ ಒಬಿಸಿ ಕೋಟಾದಲ್ಲಿ ಆಂದ್ರ ಪ್ರದೇಶ ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷ, ಕಾಡುಗೊಲ್ಲ ಸಮುದಾಯದ ರಘುವೀರರೆಡ್ಡಿ ಹೆಸರು ತೇಲಿಬಿಟ್ಟಿರುವುದು ಅಚ್ಚರಿ ಮೂಡಿಸಿದೆ.
ಆಂದ್ರ ಪ್ರದೇಶದಲ್ಲಿ ಕ್ಷೇತ್ರ ಪುನರ್‌ವಿಂಗಡನೆ ಬಳಿಕ ಕ್ಷೇತ್ರವಿಲ್ಲದೆ ರಾಜಕೀಯದಿಂದ ದೂರಉಳಿದಿರುವ ನೆರೆಯ ರಾಜ್ಯದ ಮುಖಂಡನ ಹೆಸರು ಕೇಳಿಬಂದಿರುವುದಕ್ಕೆ ಸ್ಥಳೀಯ ಕಾಂಗ್ರೆಸ್ ಮುಖಂಡರು ಅಸಮಧಾನ ವ್ಯಕ್ತಪಡಿಸಿದ್ದಾರೆ.