

ತುಮಕೂರು: ನಗರದ ಕುವೆಂಪುನಗರ ಕಾಲೇಜು ಲಿಂಕ್ ರಸ್ತೆಯ 2ನೇ ಬ್ಲಾಕ್‌ನ 1ನೇ ಅಡ್ಡ ರಸ್ತೆಯಲ್ಲಿ 35ರಿಂದ 40 ವರ್ಷದ 6 ಮರಗಳನ್ನು ಅಕ್ರಮವಾಗಿ ಕಡಿಯಲಾಗಿದ್ದು ಈ ಬಗ್ಗೆ ಅರಣ್ಯ ಇಲಾಖೆಗೆ ದೂರು ನೀಡಿದರೂ ಕ್ರಮಕೈಗೊಂಡಿಲ್ಲ ಎಂದು ವೃಕ್ಷ ಮಿತ್ರ ಸಂಘಟನೆಯ ಅಧ್ಯಕ್ಷ ಪ್ರೊ.ಕೆ.ಸಿದ್ದಪ್ಪ ಅಳಲು ತೋಡಿಕೊಂಡಿದ್ದಾರೆ.
ಇತ್ತೀಚೆಗೆ ಕುವೆಂಪು ನಗರ ಕಾಲೇಜು ಲಿಂಕ್ ರಸ್ತೆಯಲ್ಲಿ ಮರ ಕಡಿಯುವುದು ಗಮನಕ್ಕೆ ಬಂದ ನಂತರ ತಡೆದು ನಿಲ್ಲಿಸಲಾಯಿತು. ನಾವು ಅಲ್ಲಿಂದ ತೆರಳಿದ ನಂತರ ಮತ್ತೆ ಮರಗಳನ್ನು ಕತ್ತರಿಸಲಾಗಿದೆ. ಜನರಿಗೆ ತೊಂದರೆ ನೀಡದ 6 ಮರ ಕಡಿಯಲು ಅನುಮತಿ ಕೊಟ್ಟವರು ಯಾರು ಎಂದು ಪ್ರಶ್ನಿಸಿದ್ದಾರೆ.
ಅರಣ್ಯ ಇಲಾಖೆಯ ಎಲ್ಲಾ ಹಂತದ ಅಧಿಕಾರಿಗಳಿಗೆ ದೂರವಾಣಿ ಮೂಲಕ ಗಮನಕ್ಕೆ ತಂದರೂ ಮರ ಕಡಿಯುವುದನ್ನು ನಿಲ್ಲಿಸುವಂತೆ ಕೇಳಿಕೊಂಡರೂ ಸ್ಪಂದಿಸಲಿಲ್ಲ. ಖುದ್ದು ಜಿಲ್ಲಾಧಿಕಾರಿಗೂ ಪತ್ರ ಬರೆದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದ್ದಾರೆ.
ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹಾಳಾಗಿದ್ದು, ಯಾರು ಏನು ಬೇಕಾದರೂ ಮಾಡಬಹುದು ಎಂಬ ಸ್ಥಿತಿ ನಿರ್ಮಾಣವಾಗಿದೆ. ಹಸಿರು ಉಳಿಸಲು ಸಂಘ ಸಂಸ್ಥೆಗಳು ಧ್ವನಿ ಎತ್ತಬೇಕು ಎಂದು ಪ್ರೊ.ಕೆ. ಸಿದ್ದಪ್ಪ ಮನವಿ ಮಾಡಿದ್ದಾರೆ.