

ತುಮಕೂರು:ಜಿಲ್ಲಾ ಲಾರಿ ಮಾಲೀಕರ ಸಂಘದ ನೇತೃತ್ವದಲ್ಲಿ ಲಾರಿ ಚಾಲಕರು ಮತ್ತು ಕ್ಲಿನರ್‌ಗಳಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಅಪಘಾತ ರಹಿತ ಚಾಲನೆ ಮಾಡಿದ ಚಾಲಕರಿಗೆ ಅಭಿನಂದನಾ ಸಮಾರಂಭ ಸೆ.6ರಂದು ಆಯೋಜಿಸಲಾಗಿದೆ ಸಂಘದ ಅಧ್ಯಕ್ಷ ಚನ್ನಬಸವಪ್ರಸನ್ನ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಪಿಎಂಸಿ ಯಾರ್ಡ್ ನಲ್ಲಿರುವ ಸಂಘದ ಕಚೇರಿಯಲ್ಲಿ ಸೆ.6ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 3ರ ವರೆಗೆ ಸಿದ್ದಗಂಗಾ ಅಸ್ಪತ್ರೆ ಸಹಯೋಗದಲ್ಲಿ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದೆ ಎಂದರು.
ಲಾರಿ ಮಾಲೀಕರ ಸಂಘದ ಜತೆಗೆ ಜಿಲ್ಲಾ ಹಮಾಲಿಗಳ ಸಂಘ, ಜಿಲ್ಲಾ ಲಾರಿ ಚಾಲಕರು ಮತ್ತು ಮಾಲೀಕರ ಸಂಘಗಳ ಸಹಯೋಗದಲ್ಲಿ ಶಿಬಿರ ನಡೆಸುತ್ತಿದ್ದು ಸಂಘದಲ್ಲಿ ನೊಂದಾಯಿತ ಸುಮಾರು 2000 ಜನ ಚಾಲಕರು ಮತ್ತು ಕ್ಲೀನರ್ ಗಳಲ್ಕಿ 600 ಜನರು ಶಿಬಿರದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದರು.
ಕಣ್ಣಿನ ದೋಷ, ಬೆನ್ನಮೂಳೆ, ರಕ್ತದೊತ್ತಡ, ಮಧುಮೇಹ, ರಕ್ತ ಪರೀಕ್ಷೆ ಜತೆಗೆ ಜನರಲ್ ಚೆಕಪ್ ನಡೆಯಲಿದೆ. ಅಗತ್ಯ ಇರುವವರಿಗೆ ಸ್ಥಳದಲ್ಲಿಯೇ ಕನ್ನಡಕ ನೀಡಲಾಗುವುದು, ಅಲ್ಲದೆ ಮೆಡಿಷನ್ ಸಹ ವಿತರಿಸಲು ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಸಂಘದ ನಿರ್ದೇಶಕ ಟಿ.ಆರ್.ಸದಾಶಿವಯ್ಯ ತಿಳಿಸಿದರು.
ಸಿದ್ದಗಂಗಾ ಆಸ್ಪತ್ರೆಯ ಪಿಆರ್‌ಒ ಕಾಂತರಾಜು, ಜಿಲ್ಲಾ ಲಾರಿ ಮಾಲೀಕರ ಘದ ಉಪಾಧ್ಯಕ್ಷ ಆಶೋಕ್ ಕುಮಾರ್ ಜೈನ್, ಕಾರ್ಯದರ್ಶಿ ಶೌಕತ್ ಉಲ್ಲಾಖಾನ್, ಸಹಕಾರ್ಯದರ್ಶಿ ಟಿ.ಎಸ್.ನಾಗಭೂಷಣ್ ಆರಾಧ್ಯ, ಖಜಾಂಚಿ ಶಿವರುದ್ರ ಆರಾಧ್ಯ ಇದ್ದರು.