

ತುಮಕೂರು: 17ರ ವಯೋಮಿತಿಯಲ್ಲಿ ವಿಭಾಗ ಮಟ್ಟದ ಖೋಖೋ ಪಂದ್ಯಾವಳಿಯಲ್ಲಿ ತುಮಕೂರಿನ ಸರ್ವೋದಯ ಶಾಲೆಯ ಬಾಲಕರು ವೇಗದ ಓಟ, ಚುರುಕಿನ ಆಟ ಮೈಗೂಡಿಸಿಕೊಂಡಿರುವ ಚಾಕಚಕ್ಯತೆಯ ಪ್ರದರ್ಶನದ ಮೂಲಕ ಸೆಮಿಫೈನಲ್ಸ್ ಹಂತ ಪ್ರವೇಶಿಸಿದರು.
ಮಂಗಳವಾರ ನಗರದ ಸರ್ವೋದಯ ಹೈಸ್ಕೂಲ್ ಮೈದಾನದಲ್ಲಿ ಆರಂಭವಾದ ಪಂದ್ಯಾವಳಿಯಲ್ಲಿ ಪ್ರವಾಸಿ ರಾಮನಗರ ತಂಡದ ವಿರುದ್ಧ 16-7 ಅಂತರದ ನಿರಾಯಾಸ ಗೆಲುವು ಪಡೆದರು.
ನಾಯಕ ವಿಕಾಸ್, ಹರ್ಷ ಮತ್ತು ಪ್ರಥ್ವಿ ಉತ್ತಮ ಆಟದ ಮೂಲಕ ತಂಡದ ಗೆಲುವಿಗೆ ಕಾರಣರಾಗುವ ಜತೆಗೆ ನೆರದ ಪ್ರೇಕ್ಷಕರನ್ನು ರಂಜಿಸಿದರು.
ತುಮಕೂರು ಜತೆಗೆ ಬೆಂಗಳೂರು ದಕ್ಷಿಣ , ದಾವಣಗೆರೆ, ಮತ್ತು ಶಿವಮೊಗ್ಗ ತಂಡಗಳು ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡಿ ಸೆಮಿಫೈನಲ್ಸ್ ಪ್ರವೇಶಿಸಿದವು.
ಬೆಂಗಳೂರು ದಕ್ಷಿಣ ತಂಡದ ಬಾಲಕರು, ಬೆಂಗಳೂರು ಗ್ರಾಮಾಂತರ ತಂಡದ ವಿರುದ್ದ 15-6 ಅಂತರದಲ್ಲಿ, ಹಾಗೂ ಬೆಂಗಳೂರು ಉತ್ತರದ ವಿರುದ್ದ 20- 18 ರಲ್ಲಿ ಗೆಲುವಿನ ನಗೆ ಬೀರಿದರು.
ಶಿವಮೊಗ್ಗ ತಂಡದ ಆಟಗಾರರು 26-12 ಅಂಕಗಳ ಅಂತರದಿAದ ಚಿತ್ರದುರ್ಗ ತಂಡವನ್ನು ಮಣಿಸಿದರು.
ಬುಧವಾರ ನಡೆಯುವ ಸೆಮಿಫೈನಲ್ ಪಂದ್ಯದಲ್ಲಿ ತುಮಕೂರು ತಂಡ ಶಿವಮೊಗ್ಗ ತಂಡನ್ನು ಮತ್ತು ದಾವಣಗೆರೆ ತಂಡ ಬೆಂಗಳೂರು ದಕ್ಷಿಣ ತಂಡವನ್ನು ಎದುರಿಸಲಿದೆ. ಇಲ್ಲಿ ಗೆಲುವು ಪಡೆಯುವ ಎರಡು ತಂಡಗಳು ರಾಜ್ಯ ಮಟ್ಟದ ಸ್ಫರ್ಧೆಗೆ ಅರ್ಹತೆ ಪಡೆಯಲು ಪರಸ್ಪರ ಸೆಣಸಾಡಲಿವೆ.
ಬಾಲಕರ ವಿಭಾಗದ 14 ರ ವಯೋಮಿತಿಯಲ್ಲಿ ತುಮಕೂರು, ದಾವಣಗೆರೆ, ಬೆಂಗಳೂರು ಉತ್ತರ ಮತ್ತು ದಕ್ಷಿಣ ತಂಡಗಳು ಸೆಮಿಫೈನಲ್ ಹಂತಕ್ಕೆ ಪ್ರವೇಶ ಪಡೆದಿವೆ.
ತುಮಕೂರು ತಂಡ ದಾವಣಗೆರೆ ತಂಡವನ್ನು ಬೆಂಗಳೂರು ದಕ್ಷಿಣ ಮತ್ತು ಉತ್ತರ ತಂಡಗಳು ಫೈನಲ್ ಹಂತಕ್ಕೆ ಜಿಗಿಯಲು ನಾಳಿನ ಸೆಮಿಫೈನಲ್ಸ್ ನಲ್ಲಿ ಕಾದಾಟ ನಡೆಸಲಿವೆ.
ಬಾಲಕಿಯರ ವಿಭಾಗದ 17ರ ವಯೋಮಿತಿಯಲ್ಲಿ ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ ಮತ್ತು ಕೋಲಾರ ತಂಡಗಳು ಸೆಮಿಫೈನಲ್ ಹಂತ ಪ್ರವೇಶಿಸಿವೆ. ಬುಧವಾರ ಸೆಮಿಫೈನಲ್ ಹಂತದಲ್ಲಿ ದಾವಣಗೆರೆ ತಂಡ ಚಿತ್ರದುರ್ಗದ ವಿರುದ್ಧ, ಶಿವಮೊಗ್ಗ ತಂಡದ ವಿರುದ್ಧ ಕೋಲಾರ ತಂಡ ಸೆಣೆಸಾಟ ನಡೆಸಲಿವೆ.
14ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ ತುಮಕೂರು, ಕೋಲಾರ, ಬೆಂಗಳೂರು ದಕ್ಷಿಣ ಮತ್ತು ಶಿವಮೊಗ್ಗ ತಂಡಗಳು ಸೆಮಿಫೈನಲ್‌ಗೆ ಲಗ್ಗೆ ಇಟ್ಟಿವೆ. ಇಂದು ನಡೆಯುವ ಸೆಮಿಫೈನಲ್‌ನಲ್ಲಿ ತುಮಕೂರು ಹಾಗೂ ಶಿವಮೊಗ್ಗ ಮತ್ತು ಕೋಲಾರ ಹಾಗೂ ಬೆಂಗಳೂರು ದಕ್ಷಿಣ ಪರಸ್ಪರ ಸೆಣಸಾಡಲಿವೆ.
ನಾಲ್ಕು ವಿಭಾಗದ ಸೆಮಿಫೈನಲ್ ಪಂದ್ಯಾಟಗಳು ಬುಧವಾರ ಬೆಳಗ್ಗೆ 8ಕ್ಕೆ ನಡೆಯಲಿದ್ದು ಪೈನಲ್‌ನಲ್ಲಿ ಗೆದ್ದ ತಂಡಗಳು ಗುರುವಾರದಿಂದ ಇದೇ ಕ್ರೀಡಾಂಗಣದಲ್ಲಿ ನಡೆಯುವ ರಾಜ್ಯಮಟ್ಟದ ಸ್ಫರ್ಧೆಯಲ್ಲಿ ಕಣಕ್ಕಳಿಯಲಿವೆ.