ರಾಜ್ಯ ಮಟ್ಟಕ್ಕೆ ದಾವಣಗೆರೆ, ಶಿವಮೊಗ್ಗ, ತುಮಕೂರು

Tumkur-Dvg Khokho (1)
Published on

ತುಮಕೂರು: ಅತ್ಯುತ್ತಮ ಪ್ರದರ್ಶನ ನೀಡಿದ ದಾವಣಗೆರೆ ಬಾಲಕರು, ಶಿವಮೊಗ್ಗ ಬಾಲಕಿಯರು 17 ವರ್ಷ ವಯೋಮಿತಿಯ ವಿಭಾಗ ಮಟ್ಟದ ಖೋಖೋ ಪಂದ್ಯಾವಳಿಯಲ್ಲಿ ವಿಜೇತರಾಗಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದರು.

ನಗರದ ಸರ್ವೋದಯ ಶಾಲಾ ಮೈದಾನದಲ್ಲಿ ಬುಧವಾರ ಬಾಲಕರ ಫೈನಲ್ ಹಣಾಹಣಿಯಲ್ಲಿ ದಾವಣಗೆರೆ ಮತ್ತು ತುಮಕೂರು ನಡುವಿನ ಪಂದ್ಯ ಜಿದ್ದಾಜಿದ್ದಿನಿಂದ ಕೂಡಿತ್ತು. ವಿರಾಮದ ವೇಳೆಗೆ 2 ಅಂಕಗಳಿಂದ ಮುನ್ನಡೆ ಸಾಧಿಸಿದ ದಾವಣಗೆರೆ ಬಾಲಕರು ಅಂತಿಮವಾಗಿ 17-15 ರಲ್ಲಿ ಪಂದ್ಯವನ್ನು ಗೆದ್ದು ರಾಜ್ಯ ಮಟ್ಟಕ್ಕೆ ದಾಪುಗಾಲಿಟ್ಟರು.

ವಿಜಯಿ ತಂಡದ ಪರ ಪುನೀತ್ ಭೋವಿ 4 ಅಂಕಗಳನ್ನು ಗಳಿಸಿ ಗಮನಾರ್ಹ ಸಾಧನೆ ಮಾಡಿ, ಕ್ರೀಡಾಪ್ರೇಮಿಗಳ ಮನಗೆದ್ದರು. ಉಳಿದಂತೆ ವಿಜಯಿ ತಂಡದ ಕ್ರಷ್ಣ, ಹರ್ಷ, ಸಮರ್ಥ, ದಿಲೀಪ್ ಚುರುಕಿನ ಆಟದ ಮೂಲಕ ಗಮನ ಸೆಳೆದರು. ತುಮಕೂರು ತಂಡದ ಮಹಮ್ಮದ್ ಜಾಹಿದ್, ವಿಕಾಸ್, ಹರ್ಷ ಗೆಲುವಿಗೆ ಪ್ರಯತ್ನ ಪಟ್ಟು ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟರು.

ಬಾಲಕಿಯರ ಫೈನಲ್ ಪಂದ್ಯದಲ್ಲಿ ಶಿವಮೊಗ್ಗ ತಂಡದ ಆಟಗಾರ್ತಿಯರು ಎದುರಾಳಿ ದಾವಣಗೆರೆ ಬಾಲಕಿಯರ ವಿರುದ್ದ ನಿರಾಯಾಸವಾಗಿ ಇನ್ನಿಂಗ್ಸ್ ಮತ್ತು 14-10 ರಲ್ಲಿ ಗೆದ್ದು ರಾಜ್ಯ ಮಟ್ಟಕ್ಕೆ ಮುನ್ನಡೆದರು. ವಿಜಯಿ ತಂಡದ ಎಂ.ಮಮತ ವೇಗದ ಓಟ ಮತ್ತು ಚುರುಕಿನ ಆಟಕ್ಕೆ ಎದುರಾಳಿ ಆಟಗಾರ್ತಿಯರು ಪಂದ್ಯವನ್ನು ಕೈ ಚೆಲ್ಲಿದರು.

14ರ ವಯೋಮಿತಿಯ ಬಾಲಕಿಯರ ವಿಭಾಗ ಮಟ್ಟದ ಚಾಂಪಿಯನ್‌ಶಿಪ್ ಬೆಂಗಳೂರು ದಕ್ಷಿಣ ತಂಡದ ಪಾಲಾಯಿತು. 8-4ರ ಅಂತರದಿAದ ಬೆಂಗಳೂರು ತಂಡ ಗೆಲುವು ದಾಖಲಿಸಿತು.

ಭವ್ಯಶ್ರೀ ಚುರುಕಿನ ಆಟ ಬೆಂಗಳೂರು ತಂಡಕ್ಕೆ ಪ್ರಶಸ್ತಿ ತಂದು ಕೊಟ್ಟಿತು, ಮೋನಿಕ ಉತ್ತಮ ಪ್ರತಿರೋಧ ತೋರಿದರು ತಮ್ಮ ತಂಡವನ್ನ ಗೆಲುವಿನ ಸನಿಹಕ್ಕೆ ತರಲು ಸಾಧ್ಯವಾಗದೆ ತುಮಕೂರು ತಂಡ ರನ್ನರ್ ಅಪ್ ಸ್ಥಾನಕ್ಕೆ ತ್ರಪ್ತಿ ಪಡಬೇಕಾಯಿತು.

ಬಾಲಕರ ವಿಭಾಗದ 14ರ ವಯೋಮಿತಿ ಫೈನಲ್ ಪಂದ್ಯದಲ್ಲಿ ಅತಿಥೇಯ ತುಮಕೂರು ತಂಡ , ಬೆಂಗಳೂರು ದಕ್ಷಿಣ ತಂಡದ ವಿರುದ್ದ 17-14 ಅಂಕಗಳಿಂದ ಗೆದ್ದು ರಾಜ್ಯ ಮಟ್ಟಕ್ಕೆ ಆಯ್ಕೆಯಾದರು.

ಕ್ರೀಡಾ ಕೂಟ ಯಶಸ್ವಿಯಾಗಿ ಮುಕ್ತಾಯ ಕಂಡಿತು. ಗುರುವಾರ ಹಾಗೂ ಶುಕ್ರವಾರ ಎರಡು ದಿನಗಳ ರಾಜ್ಯಮಟ್ಟದ ಖೋಖೋ ಪಂದ್ಯಾವಳಿ ಇದೇ ಮೈದಾನದಲ್ಲಿ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net