ಹೆಬ್ಬೂರು ಹೇಮಾವತಿ ಕ್ವಾಟ್ರಸ್‌ನಲ್ಲಿ ಮರಗಳ ಮಾರಣಹೋಮ

06tmk_hEBBURU_tREE_1
Published on

ತುಮಕೂರು: ತಾಲೂಕಿನ ಹೆಬ್ಬೂರು ಹೇಮಾವತಿ ಇಲಾಖೆ ಸಿಬ್ಬಂದಿಗಳ ವಸತಿ ಸಂಕಿರ್ಣದಲ್ಲಿ ವಿವಿಧ ಜಾತಿಯ 30ಕ್ಕೂ ಹೆಚ್ಚು ಮರಗಳನ್ನು ಬೆಸ್ಕಾಂ ಸಿಬ್ಬಂದಿ ಶುಕ್ರವಾರ ಕಡಿದು ಹಾಕಿರುವುದು ಸ್ಥಳೀಯರ ಕೆಂಗಣ್ಣಿಗೆ ಗುರಿಯಾಗಿದೆ.

ವಿದ್ಯುತ್ ಲೈನ್‌ಗೆ ಅಡ್ಡಿಯಾಗಿದೆ ಎಂಬ ನೆಪದಲ್ಲಿ ರೆಂಬೆ, ಕೊಂಬೆಗಳನ್ನು ಕಡಿಯುವ ನೆಪದಲ್ಲಿ ವಿದ್ಯುತ್ ಲೈನ್ ಇಲ್ಲದ ಕಡೆಯಲ್ಲಿಯೂ ಮರಗಳನ್ನು ಯಂತ್ರದಿಂದ ನೆಲಕ್ಕುರುಳಿದ್ದು ಕಿಡಿಗೇಡಿಗಳ ವಿರುದ್ಧ ಕ್ರಮಕ್ಕೆ ಹೆಬ್ಬೂರು ಗ್ರಾಪಂ ಅರಣ್ಯ ಇಲಾಖೆಗೆ ಮನವಿ ಮಾಡಿದೆ.

30 ವರ್ಷಗಳ ಹಿಂದೆ ಹೇಮಾವತಿ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿದ್ದ ಹಿರಿಯ ಇಂಜಿನಿಯರ್ ಮುತುವರ್ಜಿಯಿಂದ ಹಾಕಿ, ಬೆಳಸಿರುವ ಮರಗಳಿಂದ ಕಸ ಸುರಿಯುತ್ತದೆ ಎಂಬ ನೆಪದಲ್ಲಿ ಕ್ವಾಟ್ರರ್ಸ್ನಲ್ಲಿರುವ ಸಿಬ್ಬಂದಿಯೇ ಬೆಸ್ಕಾಂ ಸಿಬ್ಬಂದಿಗೆ ಕುಮ್ಮಕ್ಕುಕೊಟ್ಟು ಮರ ಕಡಿಸಿದ್ದಾರೆ ಎಂದು ವಾಯುವಿಹಾರಿಗಳು ದೂರಿದ್ದಾರೆ.

ಹೇಮಾವತಿ ಇಲಾಖೆಯಲ್ಲಿ ಇದು ಮದಲೇನಲ್ಲ!

ಹೇಮಾವತಿ ಇಲಾಖೆ ಅಧಿಕಾರಿಗಳು ಇಲಾಖೆ ಕಚೇರಿ, ವಸತಿ ಸಂಕಿರ್ಣದಲ್ಲಿರುವ ಮರಗಳನ್ನು ಅರಣ್ಯ ಇಲಾಖೆ ಅನುಮತಿ ಪಡೆಯದೇ ಕಡಿದು ಹಾಕಿರುವುದು ಇದು ಮೊದಲೇನಲ್ಲ.
ಇತ್ತೀಚೆಗಷ್ಟೇ ತುಮಕೂರಿನ ಹೇಮಾವತಿ ಮುಖ್ಯ ಕಚೇರಿ ಆವರಣದಲ್ಲಿಯೂ ಆರೋಗ್ಯವಂತ ಮರಗಳನ್ನೇ ಕಡಿದು ನೆಲಕ್ಕುರುಳಿಸಿ ಜೀರ್ಣಸಿಕೊಂಡಿದ್ದರು. 40 ಲಕ್ಷಕ್ಕೂ ಹೆಚ್ಚು ಬೆಲೆ ಬಾಳುವ ತೇಗದ ಮರಗಳನ್ನು ಕಡಿದು ಹಾಕಿರುವ ಬಗ್ಗೆ ವೃಕ್ಷ ಮಿತ್ರ ಸಂಸ್ಥೆ ಅಧ್ಯಕ್ಷ ಪ್ರೊ.ಸಿದ್ಧಪ್ಪ ಅರಣ್ಯ ಇಲಾಖೆ ಅಧಿಕಾರಿಗಳಿಗೆ ದೂರು ಕೂಡ ನೀಡಿದ್ದರು.

ಹೆಬ್ಬೂರಿನಲ್ಲಿ ಮರಗಳನ್ನು ಕಡಿದಿರುವ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದು ನಮ್ಮ ಸಿಬ್ಬಂದಿಗಳನ್ನು ಕಳುಹಿಸಿ ಪ್ರಾಥಮಿಕ ಮಾಹಿತಿ ಪಡೆದಿದ್ದೇನೆ. ಅನುಮತಿ ಇಲ್ಲದೆ ಆರೋಗ್ಯವಂತ ಮರಗಳನ್ನು ಕಡಿದಿದ್ದರೆ ಕ್ರಮಕೈಗೊಳ್ಳುತ್ತೇನೆ.
ಪವಿತ್ರಾ
ಆರ್‌ಎಫ್‌ಒ, ತುಮಕೂರು ತಾ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net