ಬರ ನಿರ್ವಹಣೆಗೆ ಜಿಲ್ಲಾಡಳಿತ ಸಜ್ಜಾಗಿದೆ: ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್

4444444444444444
Published on

ತುಮಕೂರು: ಜಿಲ್ಲೆಯಲ್ಲಿ 10 ತಾಲೂಕುಗಳಲ್ಲಿ ಬರ ನಿರ್ವಹಣೆಗೆ ಜಿಲ್ಲಾಡಳಿತ ಸಜ್ಜಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಜಿಲ್ಲೆಯ ಚಿಕ್ಕನಾಯಕನಹಳ್ಳಿ, ಗುಬ್ಬಿ, ಕೊರಟಗೆರೆ, ಕುಣಿಗಲ್, ಮಧುಗಿರಿ, ಪಾವಗಡ, ಶಿರಾ, ತಿಪಟೂರು, ತುರುವೇಕೆರೆ ತಾಲೂಕು ತೀವ್ರ ಬರಪೀಡಿತ ಹಾಗೂ ತುಮಕೂರು ಸಾಧಾರಣ ಬರಪೀಡಿತ ತಾಲೂಕು ಪಟ್ಟಿಯಲ್ಲಿವೆ ಎಂದರು.

ಬರ ನಿರ್ವಹಣೆಗೆ ಗ್ರಾಮ ಸಹಾಯಕರು ಹಾಗೂ ಕೃಷಿ ಸಹಾಯಕರ ತಂಡ ರಚಿಸಿ ಇದರ ಮೇಲುಸ್ತುವಾರಿಯನ್ನು ಉಪತಹಸೀಲ್ದಾರ್ ನೋಡಿಕೊಳ್ಳಲಿದ್ದಾರೆ. ತಾಲೂಕು ಮಟ್ಟದ ಅಧಿಕಾರಿ ಪ್ರತಿ ಹೋಬಳಿಗಳಿಗೆ ನೋಡಲ್ ಅಧಿಕಾರಿಯಾಗಿ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ತಾಲ್ಲೂಕುಗಳ ನೋಡಲ್ ಅಧಿಕಾರಿಯಾಗಿ ಈಗಾಗಲೇ ನೇಮಿಸಲಾಗಿದೆ ಎಂದರು.

ತೀವ್ರ ಬರಪೀಡಿತ 9 ತಾಲೂಕುಗಳಲ್ಲಿ ಶೇ.80ರಷ್ಟು ಮಳೆ ಕೊರತೆಯಾಗಿದ್ದು, ತುಮಕೂರು ತಾಲೂಕಿನಲ್ಲಿ ಮಾತ್ರ ಶೇ.65ರಷ್ಟು ಮಳೆ ಕೊರತೆಯಾಗಿದೆ. ಪ್ರಸ್ತುತ ಜಿಲ್ಲೆಯಲ್ಲಿ 3,14,630 ಹೆಕ್ಟೇರ್ ಬಿತ್ತನೆ ವಿಸ್ತೀರ್ಣದಲ್ಲಿ 2,12,667 ಹೆಕ್ಟೇರ್(ಶೇ.67.59ರಷ್ಟು) ಮಾತ್ರ ಬಿತ್ತನೆಯಾಗಿದೆ ಎಂದರು.

ಪ್ರಸ್ತುತ ಜಿಲ್ಲೆಯಲ್ಲಿ ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕ ಮತ್ತು ಕೃಷಿ ಉಪಕರಣಗಳು ಲಭ್ಯವಿದ್ದು, ರೈತರು ಅರೆ ನೀರಾವರಿ ಬೆಳೆಗಳನ್ನು ಬೆಳೆಯುವುದು ಉತ್ತಮವಾಗಿದೆ ಎಂದರು.

ಜಿಲ್ಲೆಯಲ್ಲಿ 7009070 ಕ್ವಿಂಟಾಲ್ ಒಣ ಮೇವು ಮತ್ತು 580625 ಕ್ವಿಂಟಾಲ್ ಹಸಿ ಮೇವು ಲಭ್ಯವಿದೆ. ಈ ಹಂಗಾಮಿಗೆ ಒಟ್ಟು 417678 ಮೇವು ಮಿನಿ ಕಿಟ್ ಬೇಡಿಕೆಯಿದೆ. ಕೊಳವೆ ಬಾವಿ ಹೊಂದಿರುವ ರೈತರನ್ನು ಗುರುತಿಸಿ, ಸದರಿ ಮಿನಿ ಕಿಟ್‌ಗಳನ್ನು ನೀಡಲು ಯೋಜನೆ ರೂಪಿಸಿಕೊಳ್ಳಲಾಗುತ್ತಿದೆ. ಜಿಲ್ಲೆಯ ಸರ್ಕಾರಿ ಗೋಮಾಳಗಳಲ್ಲಿ ಮೇವು ಬೆಳೆಯಲು ರೈತರಿಗೆ ಸೌಲಭ್ಯ ಒದಗಿಸಲಾಗುವುದು ಎಂದರು.

ಜಿಲ್ಲೆಯಲ್ಲಿ ಬರ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಬ್ಯಾಂಕುಗಳಾಗಲಿ, ಸಂಘಸAಸ್ಥೆ ಅಥವಾ ಲೇವಾದೇವಿದಾರರಾಗಲಿ ರೈತರಿಂದ ಯಾವುದೇ ರೀತಿಯ ಸಾಲ ವಸೂಲಿ ಸಧ್ಯಕ್ಕೆ ಮಾಡಬಾರದು ಎಂದು ಸಂಬAಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದರು.

ಸರ್ಕಾರಿ ಯೋಜನೆಗಳಾದ ನರೇಗಾ ಯೋಜನೆಗಳನ್ನು ಕನ್‌ವರ್ಜೆನ್ಸ್ ಆಧಾರದ ಮೇಲೆ ಗ್ರಾಮೀಣ ಭಾಗದ ರೈತರಿಗೆ 100 ದಿನಗಳ ಬದಲಾಗಿ 150 ದಿನಗಳ ಉದ್ಯೋಗಾವಕಾಶ ಕಲ್ಪಿಸಲಾಗುವುದು ಎಂದರು.

ಗೌರಿ-ಗಣೇಶ ಹಬ್ಬದ ನಿಮಿತ್ತ ಜಿಲ್ಲೆಯಲ್ಲಿ ಸಾರ್ವಜನಿಕರು ಪಿಒಪಿ ಗಣೇಶ ಮೂರ್ತಿಗಳನ್ನು ಪ್ರತಿಷ್ಟಾಪಿಸಿ, ನೀರಿನಲ್ಲಿ ವಿಸರ್ಜನೆ ಮಾಡುವುದರಿಂದ ಪರಿಸರಕ್ಕೆ ಹಾನಿಯುಂಟಾಗುತ್ತದೆ. ಆದ್ದರಿಂದ ಮಣ್ಣಿನ ಮೂರ್ತಿಗಳನ್ನು ಇಡಬೇಕೆಂದು ಮನವಿ ಮಾಡಿದರು.


ಬರಪೀಡಿತ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ನರೇಗಾ ಯೋಜನೆಯಡಿ ಮೆಟೀರಿಯಲ್ ಆಧಾರಿತ ಕಾಮಗಾರಿ ಮಾಡುವಂತಿಲ್ಲ. ರೈತರು ತಮ್ಮ ಜಮೀನಿನಲ್ಲಿ ವೈಯಕ್ತಿಕ ಕಾಮಗಾರಿ ಮಾಡುವುದಕ್ಕೆ ಅವಕಾಶ ಕಲ್ಪಿಸಲಾಗಿದೆ. ಪ್ರತಿ ಗ್ರಾಪಂಹೆ 2.5ಕೋಟಿಯಷ್ಟು ಕೂಲಿ ಆಧಾರಿತ ಕಾಮಗಾರಿಗೆ ಸೂಚಿಸಲಾಗುವುದು.
ಜಿ.ಪ್ರಭು
ಜಿಪಂ ಸಿಇಒ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net