

ತುಮಕೂರು: ಬರವಣಿಗೆ ಹಾಗೂ ಬದುಕನ್ನು ಒಂದಾಗಿಸಿಕೊಂಡಿರುವ ಲೇಖಕರ ಸಂಖ್ಯೆ ಕಡಿಮೆಯಿದೆ, ಪ್ರಗತಿಪರ ಸೋಗಿನಲ್ಲಿ ಮನೆಗಳಲ್ಲಿ ಸಂಪ್ರದಾಯವಾದಿಗಳಾಗಿರುವ ಡೋಂಗಿ ಲೇಖಕರು ಎಷ್ಟು ಬರೆದರೂ ಅದು ನಿಲ್ಲಲಾಗದು ಎಂದು ಕಥೆಗಾರ ಎಸ್.ಗಂಗಾಧರಯ್ಯ ಅಭಿಪ್ರಾಯಪಟ್ಟರು.
ನಗರದ ಸರ್ಕಾರಿ ಪದವಿ ಕಾಲೇಜು ಸಭಾಂಗಣದಲ್ಲಿ ಶುಕ್ರವಾರ ಕನ್ನಡ ಪ್ರಾಧ್ಯಾಪಕ ಡಾ.ಶಿವಲಿಂಗಮೂರ್ತಿ ಅವರ ಕವನ ಸಂಕಲನ `ಲಾಳಿಬಿಟ್ಟ ಎಳೆ' ಬಿಡುಗಡೆಗೊಳಿಸಿ ಮಾತನಾಡಿದರು.
ಸೃತಿಗಳೊಂದಿಗೆ ನಾವು ಇದ್ದೇವೆ ಎಂದು ನಟಿಸುವ ಲೇಖಕ ಸಂಖ್ಯೆ ಹೆಚ್ಚಾಗಿದೆ, ನಡೆ, ನಡಿಯನ್ನು ಒಂದಾಗಿಸಿಕೊಂಡವರು ಕಟ್ಟಿಕೊಡುವ ಬರಹಗಳನ್ನು ಸಮಾಜದಲ್ಲಿ ಪ್ರಭಾವ ಬೀರುತ್ತವೆ ಎಂದರು.
ಜಾತಿ, ಸಂಪ್ರದಾಯದಸಂಕೋಲೆಗಳಿಂದ ಹೊರಗೆ ಬರದ ಬರಹಗಾರರ ಮಾತುಗಳಿಗೆ ಸಮಾಜ ಎಂದೂ ಮನ್ನಣೆ ನೀಡದು, ಅನುಭವಗಳ ಮೂಲಕ ನೈಜ ಅನುಭವ ಕಟ್ಟಿಕೊಡುವ ಲೇಖಕ ಓದುಗರ ಮನಸ್ಸಿನಲ್ಲಿ ಉಳಿಯುತ್ತಾರೆ ಎಂದರು.
ಸಾಹಿತ್ಯ ಮನುಷ್ಯನ ಆಲೋಚನಾ ಕ್ರಮವನ್ನು ಬದಲಾಯಿಸಬಲ್ಲದು, ಪ್ರಶ್ನಿಸದೇ ಏನನ್ನೂ ಒಪ್ಪಿಕೊಳ್ಳದೆ ವೈಜ್ಞಾನಿಕ ಚಿಂತನೆಯನ್ನು ಮೈಗೂಡಿಸಿಕೊಳ್ಳಲು ಸಾಕಷ್ಟು ಸಾಹಿತ್ಯಕಾರರು ಕಾರಣರಾಗಿದ್ದಾರೆ, 80ರ ದಶಕನ ಚಳವಳಿ, ಲೇಖಕರು ಒಂದು ತಲೆಮಾರನ್ನು ಜಾಗೃತಗೊಳಿಸಿದ್ದಾರೆ ಎಂದರು.
ಪುಸ್ತಕದ ಕುರಿತು ಲೇಖಕ ಜಿ.ವಿ.ಆನಂದಮೂರ್ತಿ ಮಾತನಾಡಿ, ಕಾವ್ಯ ಓದು ಗ್ರಹಿಕೆ ಹಾಗೂ ಲೋಕಜ್ಞಾನದ ಅರಿವನ್ನು ತೀವ್ರಗೊಳಿಸಲಿದೆ. ಮಾನವೀಯ ಸಂವೇದನೆಗಳನ್ನು ಜಗೃತಗೊಳಿಸುತ್ತದೆ, ಲೋಕದ ಹಿತ ಬಯಸುವುದೇ ಕಲೆ, ಸಾಹಿತ್ಯದ ಉದ್ದೇಶವಾಗಿದೆ ಎಂದರು.
ಪ್ರಸ್ತುತ ಆತ್ಮಹೀನ ಸಮಾಜ ಸೃಷ್ಟಿಯಾಗುತ್ತಿದೆ, ದೇಶದಲ್ಲಿ ಕ್ರೂರತೆ ಹೆಚ್ಚಗುತ್ತಿದೆ, ಇದಕ್ಕೆ ಮರುಕಪಡುವವರೇ ಇಲ್ಲದಂತಾಗಿದೆ, ನೈಜಮಾನವ ಸಮಾಜ ನಿರ್ಮಾಣಕ್ಕೆ ಎಲ್ಲ ವಿದ್ಯಾರ್ಥಿಗಳು ಸಾಹಿತ್ಯ ಚಟುವಟಿಗಳಲ್ಲಿ ಭಾಗವಹಿಸಬೇಕು ಎಂದರು.
ಲೇಖಕ ಡಾ.ಶಿವಲಿಂಗಮೂರ್ತಿ, ಪ್ರಾಚಾರ್ಯೆ ಪ್ರೊ.ಟಿ.ಆರ್.ಲೀಲಾವತಿ, ಸಾಂಸ್ಕೃತಿಕ ಸಮಿತಿ ಸಂಚಾಲಕ ಡಾ.ಜಿ.ತಿಪ್ಪೇಸ್ವಾಮಿ ಇದ್ದರು.