

ತುಮಕೂರು: ದೇಶದ ಮಹಾನಗರಗಳಲ್ಲೇ ಪ್ರಪ್ರಥಮ ಎನಿಸಿರುವ "ಔಟ್ಡೋರ್ ಎಲ್ಇಡಿ ಡಿಸ್ಪ್ಲೇ ಬೋರ್ಡ್' ಲೋಕಾರ್ಪಣೆಗೆ ತುಮಕೂರು ನಗರ ಸಜ್ಜಾಗಿದೆ. ಮಹಾನಗರ ಪಾಲಿಕೆ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ನಗರದ ಹೃದಯಭಾಗ ಡಾ.ಶ್ರೀ ಶಿವಕುಮಾರ ಸ್ವಾಮೀಜಿ ವೃತ್ತದಲ್ಲಿ 6.73 ಕೋಟಿ ರೂ., ವೆಚ್ಚದಲ್ಲಿ ನಿರ್ಮಿಸಿರುವ ಎಲ್ಇಡಿ ಡಿಸ್ಪ್ಲೇ ಬೋರ್ಡ್ನ್ನು ನ.14 ರಂದು ಸಂಜೆ 6ಕ್ಕೆ ಡಿಸಿಎಂ ಡಾ.ಜಿ.ಪರಮೇಶ್ವರ ಉದ್ಘಾಟಿಸುವರು.
ಮಾಜಿ ಪ್ರಧಾನಿ ಪಂಡಿತ್ ಜವಹರ ಲಾಲ್ ನೆಹರು ಜನ್ಮದಿನವಾದ ಮಕ್ಕಳ ದಿನಾಚರಣೆ (ನ.14)ಯಂದು "ಎಸ್ಎಸ್ ಸ್ಕ್ವೇರ್!' ಉದ್ಘಾಟನೆ ಸಮಾರಂಭಕ್ಕೆ ಜಿಲ್ಲಾಡಳಿತ ಸಮರೋಪಾದಿಯಲ್ಲಿ ಸಿದ್ಧತೆ ನಡೆಸಿದೆ. ಈ ಮಧ್ಯೆ "ನ್ಯೂಯಾರ್ಕ್ ಟೈಮ್ಸ್ ಸ್ಕ್ವೇರ್' ಮಾದರಿಯ ಈ ಯೋಜನೆ "ಹೆಸರು' ದೊಡ್ಡಮಟ್ಟದ ವಿವಾದ ಸೃಷ್ಟಿಸಿದ ಹಿನ್ನೆಲೆ ಸಿದ್ದಗಂಗಾ ಮಠದ ಮಕ್ಕಳ ಸಮ್ಮುಖದಲ್ಲೇ ಸಮಾರಂಭವನ್ನು ಆಯೋಜಿಸಿ ಕಳೆದ 2 ತಿಂಗಳಿನಿಂದ ಎದ್ದಿರುವ ಎಲ್ಲಾ ಗೊಂದಲಕ್ಕೆ ಇತಿಶ್ರೀ ಹಾಡಲು ತೆರೆಮರೆಯಲ್ಲಿ ಸಿದ್ಧತೆ ನಡೆದಿದೆ.
7 ಕೋಟಿ ವೆಚ್ಚದ ಯೋಜನೆ: ದೇಶದಲ್ಲೇ ಪ್ರಪ್ರಥಮ ಎನಿಸಿದ "ಔಟ್ಡೋರ್ ಎಲ್ಇಡಿ ಡಿಸ್ಪ್ಲೇ ಬೋರ್ಡ್'ಅಳವಡಿಸುವ ಯೋಜನೆಯನ್ನು 6.73 ಕೋಟಿ ರೂ., ವೆಚ್ಚದ ಈ ಯೋಜನೆಯನ್ನು ಸ್ಯಾಮ್ಸನ್ ಎಲೆಕ್ಟ್ರಾನಿಕ್ಸ್ ಆ್ಯಂಡ್ ಟ್ರಾನ್ಸ್ ಾಮರ್ಮೇಷನ್ ಪೆವೇಟ್ ಲಿಮಿಟೆಡ್ ವಹಿಸಿಕೊಂಡಿದ್ದು ಇದರ ನಿರ್ಮಾಣ, ನಿರ್ವಹಣೆ, ಕಾರ್ಯಾಚರಣೆ ಹೊಣೆಯನ್ನು ಹೊತ್ತಿದೆ. ಎಲ್ಲಾ ಪರೀಾರ್ಥ ಚಾಲನೆ ಬಳಿಕ ಎಲ್ಇಡಿ ಡಿಸ್ಪ್ಲೇ ಬೋರ್ಡ್ ಅನ್ನು ಮಹಾನಗರ ಪಾಲಿಕೆಗೆ ಹಸ್ತಾಂತರಿಸಲಾಗಿದೆ.
710 ಅಡಿ ಬೃಹತ್ ಎಲ್ಇಡಿ ಪರದೆಯನ್ನು 20 ಅಡಿ ಎತ್ತರದ ಬೃಹತ್ ಪೋಲ್ಗಳನ್ನು ಅಳವಡಿಸಿ ಅಳವಡಿಸಲಾಗಿದೆ. 20 ಅಡಿ ಎತ್ತರದ ಬೃಹತ್ ಎಲೆಕ್ಟ್ರಾನಿಕ್ ಡಿಸ್ ಪ್ಲೇ ಬೋರ್ಡ್ (ಎಲ್ಇಡಿ) ಐಪಿ68 ವಾಟರ್್ರೂಪ್ ಎಲ್ಇಡಿ ಇದಾಗಿದೆ. ಎಲ್ಲ ದಿಕ್ಕುಗಳಿಗೆ ಕಾಣುವಂತೆ ಈ ಎಲ್ಇಡಿ ಪರದೆ ಇದ್ದು ಸರ್ಕಾರಿ ಯೋಜನೆಗಳು, ಪ್ರವಾಸಿ ಸ್ಥಳಗಳು ಹೀಗೆ ಜಾಹೀರಾತುಗಳನ್ನು ಡಿಸ್ಪ್ಲೇ ಬೋರ್ಡ್ನಲ್ಲಿ ಪ್ರದರ್ಶಿಸಲಾಗುವುದು. ಇದು ಪಾಲಿಕೆಗೆ ಭವಿಷ್ಯದಲ್ಲಿ ಆದಾಯದ ಮೂಲವಾಗಲಿದೆ.
ರಂಜಿಸಲಿರುವ ನವೀನ್ ಸಜ್ಜು, ಚಿಕ್ಕಣ್ಣ
ಎಲ್ಇಡಿ ಡಿಸ್ಪ್ಲೋ ಬೋರ್ಡ್ ಉದ್ಘಾಟನೆ ಸಮಾರಂಭವನ್ನು ಒಂದು "ಇವೆಂಟ್' ರೀತಿಯಲ್ಲಿ ಆಯೋಜಿಸುತ್ತಿರುವ ಜಿಲ್ಲಾಡಳಿತ ಜನಾಕರ್ಷಣೆಗೆ ಹಾಸ್ಯನಟ ಚಿಕ್ಕಣ್ಣ, ಕನ್ನಡ ಚಿತ್ರರಂಗದ ಹಿನ್ನೆಲೆ ಗಾಯಕ ನವೀನ್ ಸಜ್ಜು ಆಹ್ವಾನಿಸಿ ಸಮಾರಂಭವನ್ನು ವರ್ಣಮಯಗೊಳಿಸಲು ಸಿದ್ಧತೆ ಮಾಡಿಕೊಂಡಿದೆ. ಈ ಇವೆಂಟ್ಗೆ ಜನರನ್ನು ಸೆಳೆಯಲು ವಿಐಪಿ ಪಾಸ್ಗಳನ್ನು ವಿತರಿಸುವ ಐಡಿಯಾ ಜಿಲ್ಲಾಡಳಿತ ಮಾಡಿರುವುದು ಗಮನಾರ್ಹವೆನಿಸಿದೆ.
ಪಾಲಿಕೆಗೆ ಆದಾಯದ ಮೂಲ
6.73 ಕೋಟಿ ರೂ., ವೆಚ್ಚದಲ್ಲಿ ನಿರ್ಮಿಸಿರುವ ಈ ಎಲ್ಇಡಿ ಪರದೆಯಲ್ಲಿ ಮುಖ್ಯವಾಗಿ ಪಾಲಿಕೆಗೆ ಆದಾಯ ತರುವ ಖಾಸಗಿ ಜಾಹೀರಾತುಗಳು ಹಾಗೂ ಸರ್ಕಾರದ ಕಾರ್ಯಕ್ರಮ, ಯೋಜನೆಗಳ ಮಾಹಿತಿಯನ್ನು ಬಿತ್ತರಿಸಲಾಗುವುದು. ಇದು ಪಾಲಿಕೆಗೆ ಆದಾಯ ಮೂಲವಾಗಿದ್ದು, ಈ ಜಾಹೀರಾತು ಆದಾಯವನ್ನು ನಗರದ ಇತರೆ ಮೂಲಸೌಲಭ್ಯ ಅಭಿವೃದ್ಧಿಗೆ ಬಳಸಲು ನಿರ್ಧರಿಸಲಾಗಿದೆ.
ಶ್ರೀಮಠದ ಮಕ್ಕಳ ಸಮ್ಮುಖ
ಮಕ್ಕಳ ದಿನಾಚರಣೆಯಂದು ಈ ಲೋಕಾರ್ಪಣೆ ಕಾರ್ಯಕ್ರಮ ಆಯೋಜಿಸುತ್ತಿರುವುದು ಮತ್ತೊಂದು ವಿಶೇಷ. ಈ ಯೋಜನೆಯ "ಹೆಸರು' ಆರಂಭದಿಂದಲೇ ವಿವಾದ ಎಬ್ಬಿಸಿತ್ತು. ಹಾಗಾಗಿ, ಸಿದ್ದಗಂಗಾ ಮಠದ ಮಕ್ಕಳ ಸಮ್ಮುಖದಲ್ಲೇ ಉದ್ಘಾಟನೆ ನೆರವೇರಿಸಬೇಕೆಂಬ ಹಂಬಲ ಡಿಸಿಎಂ ಡಾ.ಜಿ.ಪರಮೇಶ್ವರ ಅವರದ್ದಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ ಎನ್ನಲಾಗಿದೆ.
ಔಟ್ಡೋರ್ ಎಲ್ಇಡಿ ಡಿಸ್ಪ್ಲೇ ಬೋರ್ಡ್ ಇದು ನಗರದ "ಐಕಾನ್' ಆಗಲಿದೆ. ಡಿಸ್ಪ್ಲೇ ಬೋರ್ಡ್ನಲ್ಲಿ ತುಮಕೂರು ಜಿಲ್ಲೆಯ ಪ್ರವಾಸಿ ತಾಣಗಳು ಹಾಗೂ ಪ್ರಮುಖ ಸ್ಥಳಗಳ ಮಾಹಿತಿ, ಸರ್ಕಾರದ ಜನಪರ ಯೋಜನೆಗಳನ್ನು ಬಿತ್ತರಿಸಲಾಗುವುದು. ಅಲ್ಲದೆ, ಸ್ವಚ್ಛತೆ ಮತ್ತು ತ್ಯಾಜ್ಯ ನಿರ್ವಹಣೆ ಕುರಿತ ಮಾಹಿತಿ, ಸಂಚಾರ ನಿಯಮಗಳು ಹಾಗೂ ರಸ್ತೆ ಸುರಕ್ಷತಾ ಸಂದೇಶಗಳನ್ನು ಸಹ ಹಾಕಲಾಗುವುದು. ಡಿಸ್ಪ್ಲೇ ಬೋರ್ಡ್ನಲ್ಲಿ ಆದಾಯ ತರುವ ಜಾಹೀರಾತುಗಳನ್ನು ಪ್ರದರ್ಶಿಸಲಾಗುವುದು.
ಬಿ.ಶುಭ, ಮಹಾನಗರ ಪಾಲಿಕೆ ಅಯುಕ್ತೆ
ಬಿಸಿಎಂ ಎಲ್ಇಡಿ ಸ್ಕ್ರೀನ್ ಅನಾನವರಣ
ಹಿಂದುಳಿದ ವರ್ಗದ ಇಲಾಖೆಯ ಯೋಜನೆಗಳನ್ನು ಜನರಿಗೆ, ವಿದ್ಯಾರ್ಥಿಗಳಿಗೆ ತಿಳಿಸುವ ನಿಟ್ಟಿನಲ್ಲಿ 1.25 ಕೋ.ರೂ., ವೆಚ್ಚದಲ್ಲಿ ತುಮಕೂರು ವಿಶ್ವವಿದ್ಯಾಲಯ ಮುಂಭಾಗದ ಸ್ಕೆ$ವಾಕ್ ಬಳಿ ನಿರ್ಮಿಸಿರುವ 20 ಬೈ 11 ಅಡಿ ಎಲ್ಇಡಿ ಸ್ಕ್ರೀನ್ ಅನ್ನು ಸಹ ಈ ಸಂದರ್ಭದಲ್ಲೇ ಅನಾವರಣಗೊಳಿಸಲಾಗುತ್ತಿದೆ.