ಆನ್ ಲೈನ್ ಔಷಧ ವ್ಯಾಪರ ವಿರೋಧಿಸಿ ಮೆಡಿಕಲ್ ಶಾಪ್ ಬಂದ್
ತುಮಕೂರಿನಲ್ಲಿ ಔಷಧ ವ್ಯಾಪಾರಿಗಳು ಎದುರಿಸುತ್ತಿರುವ ಸಂಕಷ್ಟಗಳ ಬಗ್ಗೆ ಕೇಂದ್ರ ಸರ್ಕಾರದ ಗಮನ ಸೆಳೆಯುವ ಸಲುವಾಗಿ ಅಖಿಲ ಭಾರತ ಔಷಧ ವ್ಯಾಪಾರಿಗಳ ಸಂಘ ಕರೆ ನೀಡಿರುವ ಮುಷ್ಕರ ಬೆಂಬಲಿಸಿ ನಗರದ ಟೌನ್ಹಾಲ್ ವೃತ್ತದಲ್ಲಿ ಜಿಲ್ಲಾ ಔಷದ ವ್ಯಾಪಾರದ ಸಂಘದ ಅಧ್ಯಕ್ಷ ಎನ್. ಎಸ್. ಜವಹರ್ ಪಂಡಿತ್ ನೇತೃತ್ವದಲ್ಲಿ
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಬಂದ್ಗೆ ಕರೆಕೊಟ್ಟಿದ್ದ ಅಖಿಲ ಭಾರತ ಔಷಧ ವ್ಯಾಪಾರಿಗಳ ಸಂಘ
ಜಿಲ್ಲಾ ಔಷಧ ವ್ಯಾಪಾರ ಸಂಘದ ಪ್ರತಿಭಟನೆ
ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಲು ಆಗ್ರಹ
ತುಮಕೂರು: ಔಷಧ ವ್ಯಾಪಾರಿಗಳು ಎದುರಿಸುತ್ತಿರುವ ಬಿಕ್ಕಟ್ಟು, ಸಮಸ್ಯೆಗಳನ್ನು ನಿವಾರಣೆ ಮಾಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ಅಖಿಲ ಭಾರತ ಔಷಧ ವ್ಯಾಪಾರಿಗಳ ಸಂಘ ದೇಶಾದ್ಯಂತ ಕರೆ ನೀಡಿರುವ ಮುಷ್ಕರ ಬೆಂಬಲಿಸಿ ನಗರವು ಸೇರಿದಂತೆ ಜಿಲ್ಲೆಯ ಎಲ್ಲಾ ಔಷದ ವ್ಯಾಪಾರಿಗಳು ವ್ಯಾಪಾರ ವಹಿವಾಟು ಬಂದ್ ಮಾಡಿ ಬೆಂಬಲಿಸಿದರು. ಮೆಡ್ಪ್ಲಸ್ ಮತ್ತು ಅಪೋಲೋ ಮೆಡಿಕಲ್ ಸ್ಟೋರ್ಗಳನ್ನು ಹೊರತುಪಡಿಸಿ ಉಳಿದಂತೆ ಎಲ್ಲಾ ಖಾಸಗಿ ಔಷಧಿ ಅಂಗಡಿಗಳು ಬುಧವಾರ ಬೆಳಗ್ಗೆ 6ಕ್ಕೆ ಮುಚ್ಚಿದ್ದು ಗುರುವಾರ ಬೆಳಗ್ಗೆ 6ವರೆಗೆ ಬಂದ್ ಆಗಿರಲಿವೆ.
ನಗರದ ಟೌನ್ಹಾಲ್ ವೃತ್ತದಲ್ಲಿ ಜಿಲ್ಲಾ ಔಷದ ವ್ಯಾಪಾರದ ಸಂಘದ ಅಧ್ಯಕ್ಷ ಎನ್. ಎಸ್. ಜವಹರ್ ಪಂಡಿತ್ ನೇತೃತ್ವದಲ್ಲಿ ಸಮಾವೇಶಗೊಂಡ ಔಷಧ ವ್ಯಾಪಾರಿಗಳ ಸಂಘದ ಪದಾಧಿಕಾರಿಗಳು, ಆನ್ಲೈನ್ ಮೂಲಕ ಔಷಧ ವ್ಯಾಪಾರ ನಿಲ್ಲಿಸಬೇಕು. ಕೇಂದ್ರ ಸರ್ಕಾರ ಕರೊನಾ ಸಮಯದಲ್ಲಿ ಹೊರಡಿಸಿದ್ದ ಆದೇಶಗಳನ್ನು ಹಿಂಪಡೆಯಬೇಕು. ಕಾರ್ಪೊರೇಟ್ ಕಂಪನಿಗಳಿಂದ ನಡೆಯುತ್ತಿರುವ ಡಿಸ್ಕೌಂಟ್ ವ್ಯಾಪಾರ ನಿಲ್ಲಿಸಿ ದೇಶದಲ್ಲಿ ಆರೋಗ್ಯಕರ ವ್ಯಾಪಾರದ ವಾತಾವರಣ ಸೃಷ್ಟಿಸುವಂತೆ ಘೋಷಣೆಗಳನ್ನು ಕೂಗಿದರು.
ಈ ವೇಳೆ ಪ್ರತಿಭಟನಾನಿರತರನ್ನು ಉದ್ದೇಶಿಸಿ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಎನ್.ಎಸ್. ಜವಹರ್ ಪಂಡಿತ್, ಔಷಧ ವ್ಯಾಪಾರವು ಅನಿರೀಕ್ಷಿತ ಸಂಕಷ್ಟಗಳನ್ನು ಎದುರಿಸುತ್ತಿದೆ, ಇದನ್ನು ಸರಿಪಡಿಸಲು ಸರ್ಕಾರದ ಮೇಲೆ ಒತ್ತಡ ಹೇರುವುದು ಅತ್ಯಗತ್ಯವಾಗಿದೆ. ಹಾಗಾಗಿ ಇಂದು ಔಷಧ ವ್ಯಾಪಾರ ಬಂದ್ ಮಾಡಿ ಮುಷ್ಕರ ನಡೆಸಲಾಗುತ್ತಿದೆ. ಸರ್ಕಾರ ಅಮೆಜಾನ್, ಸ್ವಿಗ್ಗಿ, ಫ್ಲಿಪ್ಕಾರ್ಟ್ ಸೇರಿದಂತೆ ಹಲವು ಆನ್ಲೈನ್ ವೇದಿಕೆಗಳಿಗೆ ಔಷಧ ಮಾರಾಟ ಲೈಸೆನ್ಸ್ ನೀಡಿದೆ. ಆನ್ಲೈನ್ ಮೂಲಕ ಔಷಧಗಳು ಸುಲಭವಾಗಿ ಯುವ ಜನತೆಗೆ ತಲುಪುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಆನ್ಲೈನ್ ಮೂಲಕ ನಡೆಯುತ್ತಿರುವ ಔಷಧ ವ್ಯಾಪಾರವನ್ನು ತಕ್ಷಣ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ಡ್ರಗ್ಸ್ ಆ್ಯಂಡ್ ಕಾಸ್ಮೆಟಿಕ್ಸ್ ಆಕ್ಟ್ ಹಾಗೂ ಔಷಧ ಬೆಲೆ ನಿಯಂತ್ರಣ ಕಾನೂನುಗಳಡಿ ಔಷಧ ವ್ಯಾಪಾರಿಗಳಿಗೆ ಶೇ. 16 ರಷ್ಟು ಲಾಭಾಂಶ ನಿಗದಿಯಾಗಿದ್ದು, ಖರ್ಚು ವೆಚ್ಚ ಹೆಚ್ಚುತ್ತಿರುವ ಹಿನ್ನೆಲೆ ಅಂತರವನ್ನು ಹೆಚ್ಚಿಸಬೇಕು. ಮೂಲ ಕಂಪನಿಗಳ ಔಷಧಗಳಿಗೆ ಹೋಲುವಂತೆ ನಕಲಿ ಔಷಧ ತಯಾರಿಸಿ ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತಿದ್ದು, ಇವು ಆರೋಗ್ಯಕ್ಕೆ ಗಂಭೀರ ಹಾನಿ ಉಂಟು ಮಾಡುತ್ತಿವೆ. ಇಂತಹ ಔಷಧಗಳಿಂದ ಕಿಡ್ನಿ, ಹೃದಯ ಸೇರಿದಂತೆ ಹಲವು ಅಂಗಾಂಗಗಳಿಗೆ ಹಾನಿಯಾಗುವ ಸಾಧ್ಯತೆ ಇದೆ. ಸ್ಪೂರಿಯಸ್ ಡ್ರಗ್ಸ್ಗಳ ನಿಯಂತ್ರಣ ಹಾಗೂ ಸುರಕ್ಷಿತ ಔಷಧ ವಿತರಣೆಗಾಗಿ ಕೇಂದ್ರ ಸರ್ಕಾರ ಕಠಿಣ ಮತ್ತು ಸರಳ ಕಾನೂನನ್ನು ಕೇಂದ್ರ ಸರ್ಕಾರ ಜಾರಿಗೆ ತರಬೇಕು. ಔಷಧ ವ್ಯಾಪಾರಿಗಳು ಸಾರ್ವಜನಿಕರಿಗೆ ಮತ್ತು ರೋಗಿಗಳಿಗೆ ತೊಂದರೆ ನೀಡುವ ಉದ್ದೇಶ ಹೊಂದಿಲ್ಲ, ಆದರೆ ತಮ್ಮ ಅಸ್ತಿತ್ವ ಮತ್ತು ಸಮಾಜದ ಹಿತದೃಷ್ಟಿಯಿಂದ ಈ ಹೋರಾಟ ಅನಿವಾರ್ಯವಾಗಿದೆ ಎಂದರು.
ಔಷಧ ವ್ಯಾಪಾರಿಗಳ ಮುಷ್ಕರದ ಮಾಹಿತಿ ತಿಳಿಯದ ರೋಗಿಗಳು ಹಾಗೂ ಸಾರ್ವಜನಿಕರು ಮೆಡಿಕಲ್ ಸ್ಟೋರ್ಗಳಿಗೆ ಔಷಧಿ ಖರೀದಿಗಾಗಿ ತೆರಳಿ ಬಾಗಿಲು ಬಂದ್ ಆಗಿರುವುದನ್ನು ವಾಪಸ್ಸಾಗುತ್ತಿದ್ದ ದೃಶ್ಯಗಳು ಕಂಡು ಬಂದವು.
ಪ್ರತಿಭಟನೆಯಲ್ಲಿ ಸಂಘದ ಉಪಾಧ್ಯಕ್ಷ ರಂಗಸ್ವಾಮಿ, ಪ್ರಧಾನ ಕಾರ್ಯದರ್ಶಿ ವಿಜಯ್, ಜಂಟಿ ಕಾರ್ಯದರ್ಶಿ ನಾರಾಯಣಮೂರ್ತಿ, ಗೋಪಾಲ್, ರಾಮಚಂದ್ರ, ಶ್ಯಾಮ್ ಸುಂದರ್, ಸಿದ್ದಲಿಂಗ ಸ್ವಾಮಿ ಸೇರಿದಂತೆ ಔಷಧ ವ್ಯಾಪಾರಿಗಳು ಪಾಲ್ಗೊಂಡಿದ್ದರು.