ಐಟಿಬಿಟಿಯಲ್ಲಿ ಕನ್ನಡಿಗರಿಗೆ ಆದ್ಯತೆ

ಸರ್ಕಾರದಿಂದ ಪ್ರಯತ್ನ ನಡೆದಿದೆ ಎಂದ ಕೃಷ್ಣಬೈರೇಗೌಡ
GBA Minister KrishneByregowda
ಕೃಷ್ಣಬೈರೇಗೌಡ
Published on: 

ತುಮಕೂರು: ರಾಜ್ಯದ ಐಟಿ-ಬಿಟಿ ಕ್ಷೇತ್ರದಲ್ಲಿ ಕನ್ನಡಿಗರಿಗೆ ಹೆಚ್ಚಿನ ಉದ್ಯೋಗಾವಕಾಶಗಳು ದೊರಕಿಸಿಕೊಡುವ ನಿಟ್ಟಿನಲ್ಲಿ ಸಿಎಂ ಡಿ.ಕೆ.ಶಿವಕುಮಾರ್​ ಮುಂದಡಿಯಿಟ್ಟಿದ್ದಾರೆ ಎಂದು ಗ್ರೇಟರ್​ ಬೆಂಗಳೂರು ಅಭಿವೃದ್ಧಿ ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣಬೈರೇಗೌಡ ಹೇಳಿದರು.

ಕನ್ನಡ ರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಐಟಿ-ಬಿಟಿ ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿ ಕನ್ನಡ ಭಾಷಿಕರು ಕಡಿಮೆ ಸಂಖ್ಯೆಯಲ್ಲಿದ್ದಾರೆ. ಇಂತಹ ಸನ್ನಿವೇಶಗಳಲ್ಲಿ ಕನ್ನಡಿಗರಿಗೆ ಹೆಚ್ಚಿನ ಉದ್ಯೋಗಾವಕಾಶ ಸಿಗುಬೇಕು ಅನ್ನುವ ಒತ್ತಡ ಒಂದು ಕಡೆ ಇದ್ದರೆ, ಆ ವಲಯಗಳಲ್ಲಿ ಕನ್ನಡ ಭಾಷೆಗೆ ಅವಕಾಶನೇ ಕಡಿಮೆ ಆಗಿರುವಂತದ್ದು ಆತಂಕಕ್ಕೆ ಕಾರಣ. ಎಲ್ಲೋ ಒಂದು ಕಡೆ ನಮ್ಮ ಭಾಷೆಯನ್ನ ಮರೆತು ಬೇರೆ ಭಾಷೆಗೆ ಶರಣಾಗುವಂತಹ ಅವಶ್ಯಕತೆ ಇಲ್ಲ. ಉದ್ಯೋಗದಲ್ಲಿ ಆದ್ಯತೆ ದೊರಕಿಸಿಕೊಡುವ ನಿಟ್ಟಿನಲ್ಲಿ ಸರ್ಕಾರದ ಪ್ರಯತ್ನ ಸಾಗಿದೆ ಎಂದು ತಿಳಿಸಿದರು.

ನಮ್ಮ ಸರ್ಕಾರ ಯಾವ ಕನ್ನಡ ಶಾಲೆಗಳನ್ನು ಮುಚ್ಚುತ್ತಿಲ್ಲ. ಇಡೀ ಶಾಲೆಯಲ್ಲಿ ಇಬ್ಬರು ಮೂವರು ಮಕ್ಕಳಿದ್ದಾರೆ. ಹತ್ತು ಮಕ್ಕಳಿಗಿಂತ ಸರ್ಕಾರಿ ಶಾಲೆಗಳು ರಾಜ್ಯದಲ್ಲಿ ಸಾವಿರಾರು ಇವೆ ಎಂದು ಸಚಿವ ಕೃಷ್ಣಭೈರೇಗೌಡ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಜಿಎಸ್​ಟಿ ಆದಾಯ ಕಡಿತ: ಕೇಂದ್ರ ಸರ್ಕಾರವು ಜಿಎಸ್​ಟಿ ವ್ಯವಸ್ಥೆಯಲ್ಲಿ ಬದಲಾವಣೆ ತಂದ ನಂತರ ರಾಜ್ಯದ ಆದಾಯ ಕಡಿತಗೊಂಡಿದೆ. ದೇಶದಲ್ಲೇ ಕರ್ನಾಟಕವು ಹೆಚ್ಚಿನ ಪ್ರಮಾಣದಲ್ಲಿ ಜಿಎಸ್​ಟಿ ತೆರಿಗೆ ಪಾವತಿಸುವ ರಾಜ್ಯಗಳಲ್ಲಿ ಒಂದಾಗಿದೆ. ಬೆಂಗಳೂರು ನಗರವು ಅತಿ ಹೆಚ್ಚು ಆದಾಯ ತೆರಿಗೆ ಸಂಗ್ರಹವಾಗುವ ನಗರಗಳಲ್ಲಿ ಎರಡನೇ ಸ್ಥಾನದಲ್ಲಿದ್ದರೂ, ರಾಜ್ಯಕ್ಕೆ ದೊರೆಯುವ ತೆರಿಗೆಯ ಪಾಲು ನಿರೀಕ್ಷಿತ ಮಟ್ಟದಲ್ಲಿಲ್ಲ ಎಂದು ಕೃಷ್ಣಬೈರೇಗೌಡ ತಿಳಿಸಿದರು.

ಕೇಂದ್ರವು ಅಭಿವೃದ್ಧಿಯಲ್ಲಿ ಹಿಂದುಳಿದಿರುವ ರಾಜ್ಯಗಳಿಗೂ ಅಗತ್ಯ ನೆರವು ನೀಡಬೇಕು. ಆದರೆ, ಕರ್ನಾಟಕದಿಂದ ಸಂಗ್ರಹವಾಗುವ ತೆರಿಗೆ ಹಣದ ಸಮರ್ಪಕ ಪಾಲು ರಾಜ್ಯಕ್ಕೆ ದೊರೆಯುವುದು ಅತ್ಯಗತ್ಯ. ಇತರ ರಾಜ್ಯಗಳ ಅಭಿವೃದ್ಧಿಗೆ ಕರ್ನಾಟಕದ ತೆರಿಗೆ ಹಣವನ್ನು ವ್ಯಯಿಸಲಾಗುತ್ತಿದೆ. ಹೆದ್ದಾರಿಗಳ ನಿಮಾರ್ಣ ಸೇರಿದಂತೆ ದೇಶದ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ರಾಜ್ಯದ ತೆರಿಗೆ ಆದಾಯ ಬಳಕೆಯಾಗುತ್ತಿದೆ. ಕರ್ನಾಟಕ ಆರ್ಥಿಕವಾಗಿ ಬಲಿಷ್ಠವಾದರೆ ದೇಶದ ಆರ್ಥಿಕ ಬೆಳವಣಿಗೆಗೂ ಹೆಚ್ಚಿನ ಶಕ್ತಿ ದೊರೆಯುತ್ತದೆ. ರಾಜ್ಯವು ಪಾವತಿಸುವ ತೆರಿಗೆಗೆ ಅನುಗುಣವಾಗಿ ಹೆಚ್ಚಿನ ಪಾಲು ದೊರೆಯಬೇಕು. ಇದರಿಂದ ಕರ್ನಾಟಕಕ್ಕೆ ನ್ಯಾಯ ಸಿಕ್ಕಂತಾಗುವುದರ ಜತೆಗೆ ದೇಶದ ಅಭಿವೃದ್ಧಿಗು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.

ಭಾಷೆ ಮತ್ತು ಸಂಸ್ಕತಿಯ ಆಧಾರದಲ್ಲಿ ಜನರನ್ನು ವಿಭಜಿಸುವ ಬದಲು ಎಲ್ಲ ಭಾಷೆ ಹಾಗೂ ಸಂಸ್ಕೃತಿಗಳಿಗೆ ಸಮಾನ ಗೌರವ ನೀಡಬೇಕು. ಪರಸ್ಪರ ಗೌರವ ಮತ್ತು ಸಹಬಾಳ್ವೆಯಿಂದ ಮಾತ್ರ ಎಲ್ಲರೂ ಒಗ್ಗಟ್ಟಿನಿಂದ ಬದುಕಲು ಸಾಧ್ಯ ಎಂದರು.

ಇದೇ ಸಂದರ್ಭದಲ್ಲಿ ಸಚಿವ ಡಾ. ಜಿ. ಪರಮೇಶ್ವರ್​ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಶೀಘ್ರ ಗುಣಮುಖರಾಗಿ ಸಾರ್ವಜನಿಕ ಸೇವೆಗೆ ಮರಳಲಿದ್ದಾರೆ ಎಂದು ತಿಳಿಸಿದರು.