

ತುಮಕೂರು: ನೀರುಗಂಟಿ(ನೀರು ಸರಬರಾಜು ನೌಕರರು)ಗಳ ಮುಷ್ಕರಿಂದ ನಗರದಲ್ಲಿ ಕಳೆದ 3 ದಿನಗಳಿಂದ ಜನರು ನೀರಿಗಾಗಿ ಪರದಾಡುವಂತಾಗಿದೆ.
ನೌಕರರು ಮುಷ್ಕರ ನಡೆಸುವ ಬಗ್ಗೆ ಮುಂಚಿತವಾಗಿಯೇ ತಿಳಿಸಿದ್ದರೂ ಪರ್ಯಾಯ ವ್ಯವಸ್ಥೆ ಮೂಲಕ ನೀರು ಸರಬರಾಜು ಮಾಡಲು ಪಾಲಿಕೆಗೆ ಸಾಧ್ಯವಾಗಲಿಲ್ಲ. ಬುಧವಾರ ನೌಕರರು ಮುಷ್ಕರ ವಾಪಸ್ ಪಡೆದು ಕೆಲಸಕ್ಕೆ ಹಾಜರಾಗುವರೆಗೂ ಜನರ ಗೋಳು ಕೇಳುವ ಕೆಲಸವನ್ನು ಸಂಬಂಧಪಟ್ಟ ಅಧಿಕಾರಿಗಳು ಮಾಡಲಿಲ್ಲ.
ನೀರಿನ ಸಮಸ್ಯೆ ಉಲ್ಭಣಗೊಂಡು ಜನಾಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ತಡವಾಗಿ ಎಚ್ಚೆತ್ತುಕೊಂಡ ಜಿಲ್ಲಾಧಿಕಾರಿ ಶುಭಕಲ್ಯಾಣ್ ಹಾಗೂ ಪಾಲಿಕೆ ಆಯುಕ್ತೆ ಬಿ.ವಿ.ಅಶ್ವಿಜಾ ಬುಧವಾರ ರಾತ್ರಿ ಮುಷ್ಕರ ವಾಪಸ್ ಪಡೆದ ನೀರುಗಂಟಿಗಳ ಜತೆ ಕೆಲವು ವಾರ್ಡ್ಗಳಿಗೆ ಭೇಟಿ ನೀಡಿ ಪರಿಶೀಲಿಸುವ ಶಾಸ್ತ್ರ ಮಾಡಿದರು.
ನಗರದ 26ನೇ ವಾರ್ಡ್ ಅಶೋಕ ನಗರಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿಗೆ ಸ್ಥಳಿಯ ನಿವಾಸಿಗಳು ಗೋಳು ಹೇಳಿಕೊಂಡರು, ಕಳೆದ ಒಂದು ವಾರದಿಂದಲೂ ನೀರು ಪೂರೈಕೆಯಾಗದೆ ಆಗಿರುವ ಕಷ್ಟದ ಬಗ್ಗೆ ವಿವರಿಸಿದರು. ನೀರುಗಂಟಿಗಳು ಮುಷ್ಕರ ನಡೆಸಿದರೆ ಪರ್ಯಾಯ ವ್ಯವಸ್ಥೆ ಮೂಲಕ ನೀರು ಬಿಡದ ಪಾಲಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳಿಯ ನಿವಾಸಿಗಳಿಂದ ನೀರಿನ ಸಮಸ್ಯೆ ಕುರಿತು ಅಹವಾಲುಗಳನ್ನು ಆಲಿಸಿದ ಜಿಲ್ಲಾಧಿಕಾರಿ, ತಕ್ಷಣದ ಪರಿಹಾರವಾಗಿ ಒಂದು ದಿನದ ಮಟ್ಟಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸ್ಥಳದಲ್ಲಿಯೇ ನಿರ್ದೇಶನ ನೀಡಿದರಾದರೂ ಎಲ್ಲಿಯೂ ನೀರು ಬರಲೇ ಇಲ್ಲ.
ನೀರು ಸರಬರಾಜು ನೌಕರರ ಮುಷ್ಕರದಿಂದ ನೀರಿನ ಸಮಸ್ಯೆ ಉಂಟಾಗಿದೆ, ಇನ್ನು ಮುಂದೆ ಎಂದಿನಂತೆ ನೀರು ಸರಬರಾಜು ಮಾಡಲಾಗುವುದು ಎಂದು ಭರವಸೆ ನೀಡಿದರು..
ಸ್ವಚ್ಛತೆ ಇಲ್ಲದಿರುವುದರಿಂದ ವಿಷಜಂತುಗಳ ಸಮಸ್ಯೆಯನ್ನು ಎದುರಿಸುತ್ತಿದ್ದು, ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕೆಂದು ನಿವಾಸಿಗಳು ಮನವಿ ಮಾಡಿದಾಗ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಕೂಡಲೇ ಜನರು ವಾಸಿಸುವ ಸ್ಥಳದ ಸುತ್ತಮುತ್ತ ಸ್ವಚ್ಛತಾ ಕಾರ್ಯ ಕೈಗೊಳ್ಳಬೇಕೆಂದು ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪಾಲಿಕೆ ಆಯುಕ್ತ ಬಿ.ವಿ. ಅಶ್ವಿಜ, ಕಾರ್ಯನಿರ್ವಾಹಕ ಇಂಜಿನಿಯರ್ ಸಂದೀಪ್ ಜತೆಗಿದ್ದರು.