

ತುಮಕೂರು: ಜಿಲ್ಲೆಯಲ್ಲಿ ಗುರುತಿಸಲಾದ 40 ಬ್ಲಾಕ್ ಸ್ಪಾಟ್ಗಳ 100 ಮೀಟರ್ ಅಂತರದಲ್ಲಿ ಎಚ್ಚರಿಕೆ ಸೂಚನಾ ಫಲಕ ಅಳವಡಿಸಬೇಕು ಎಂದು ಜಿಲ್ಲಾಧಿಕಾರಿ ಶುಭಕಲ್ಯಾಣ್ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ರಸ್ತೆ ಸುರಕ್ಷತೆ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಪೊಲೀಸ್ ಇಲಾಖೆ ವತಿಯಿಂದ ಗುರುತಿಸಲಾದ 40 ಬ್ಲಾಕ್ ಸ್ಪಾಟ್ಗಳನ್ನೂ ಗುರುತಿಸಿ ಸಂಬಂಧಪಟ್ಟ ಇಲಾಖೆಗಳಿಗೆ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಲಾಗಿದ್ದು, ಇದುವರೆಗೂ ಯಾವುದೇ ರೀತಿ ಕ್ರಮ ಕೈಗೊಂಡಿಲ್ಲ, ಇದಕ್ಕೆ ಸಂಬಂಧ ಪಟ್ಟಂತೆ 40 ಬ್ಲಾಕ್ ಸ್ಪಾಟ್ಗಳಲ್ಲಿ ಅಪಘಾತ ಸಂಭವಿಸಿದರೆ ಸಂಬಂಧ ಪಟ್ಟ ಇಲಾಖೆ ಎಕ್ಸಿಕ್ಯೂಟಿವ್ ಇಂಜಿನಿಯರ್ಗಳೇ ನೇರ ಹೊಣೆ ಎಂದರು.
ಲೋಕೋಪಯೋಗಿ ಇಲಾಖೆ, ಪಂಚಾಯ್ ರಾಜ್ ಇಲಾಖೆ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳು ರಸ್ತೆ ಸುರಕ್ಷತೆ ಬಗ್ಗೆ ಹೆಚ್ಚು ಗಮನ ಹರಿಸಬೇಕು, ರಸ್ತೆಗಳಲ್ಲಿ ಅನಗತ್ಯವಾಗಿ ಹಾಕಿರುವ ಸ್ಪೀಡ್ ಬ್ರೇಕಸ್ ಗಳನ್ನು ತೆರವುಗೊಳಿಸಿ, ಅವಶ್ಯಕತೆ ಇರುವ ಕಡೆ ಮಾತ್ರ ಸ್ಪೀಡ್ ಬ್ರೇಕರ್ಸ್ ಅಳವಡಿಸಬೇಕು ಎಂದರು.
ಪೋಲೀಸ್ ಇಲಾಖೆ ಈಗಾಗಲೇ 40 ಬ್ಲಾಕ್ಸ್ಪಾಟ್ ಗಳನ್ನು ಗುರುತಿಸಿದ್ದು, ಇದುವರೆಗೆ ಎಫಿ್ಟು ಅಪಘಾತ ವಲಯಗಳಿಗೆ ಕ್ರಮಕೈಗೊಳ್ಳಲಾಗಿದೆ ಎಂಬ ಮಾಹಿತಿ ಸಂಬಂಧ ಪಟ್ಟ ಅಧಿಕಾರಿಗಳು ವರದಿ ನೀಡುವಂತೆ ಸೂಚನೆ ನೀಡಿದರು. ಹೈವೇಗಳಲ್ಲಿ ಅಪಘಾತ ಸಂಭವಿಸಿದಾಗ ಆಂಬುಲೆನ್ಸ್ ಹಾಗೂ ಕ್ರೇನ್ ಸೇವೆಗಳು ತಕ್ಷಣ ಕಾರ್ಯನಿರ್ವಹಿಸಬೇಕು, ಹೈವೆಗಳಲ್ಲಿ ಅಪಘಾತ ಸಂಭವಿಸಿದಾಗ ಸಾರ್ವಜನಿಕರು ತುರ್ತು ಸಂದರ್ಭದಲ್ಲಿ 1033 ಎಂಬ ಸಹಾಯವಾಣಿ ಕರೆಮಾಡಿ ಮಾಹಿತಿ ನೀಡಬೇಕು, ಸಹಾಯವಾಣಿ ದಿನದ 24 ಗಂಟೆ ಸಾರ್ವಜನಿಕರ ಸೇವೆಗೆ ಸಿದ್ಧರಾಗಿರಬೇಕು ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್ ಮಾತನಾಡಿ, ಜಿಲ್ಲೆಯ 40 ಬ್ಲಾಕ್ ಸ್ಪಾಟ್ಗಳಿಗೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಬೇಕು, ಅವಶ್ಯಕವಾದ ಬೆಳಕಿನ ವ್ಯವಸ್ಥೆ, ಪೇಂಟಿಂಗ್ ರಸ್ತೆಯ ಮಧ್ಯದಲ್ಲಿ ಬೆಳೆದಿರುವ ಅನಗತ್ಯ ಗಿಡಗಳನ್ನು ತೆರವುಗೊಳಿಸಲು ಕ್ರಮಕೈಗೊಳ್ಳಬೇಕು ಎಂದು ತಿಳಿಸಿದರು.
ಹೈವೇ ಹಾಗೂ ಇತರ ರಸ್ತೆಗಳಲ್ಲಿ ಕಾನೂನುಬಾಹಿರವಾಗಿ ನಿರ್ಮಿಸಲಾದ ಸ್ಪೀಡ್ ಬ್ರೇಕರ್ಸ್, ಸೂಚನಾ ಫಲಕಗಳ ಕೊರತೆ ಹಾಗೂ ಇತರೆ ಕಾರಣಗಳಿಂದಾಗಿ ಅಪಘಾತ ಸಂಭವಿಸಿ ಪ್ರಾಣಹಾನಿ ಸಂಭವಿಸಿದರೆ, ಸಂಬಂಧಪಟ್ಟ ಇಲಾಖೆ ಎಕ್ಸಿಕ್ಯೂಟಿವ್ ಇಂಜಿನಿಯರ್ಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.
ಸಭೆಯಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಪ್ರಸಾದ್, ಲೋಕೋಪಯೋಗಿ ಇಲಾಖೆ ಇಇ ಜಿ.ರಾಜು, ಪಂಚಾಯತ್ ರಾಜ್ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ಹನುಮಂತಪ್ಪ ಇದ್ದರು.