

ತುಮಕೂರು: ಪ್ರಸ್ತುತ ಸ್ಫರ್ಧಾತ್ಮಕ ಜಗತ್ತಿನಲ್ಲಿ ಕಂಪ್ಯೂಟರ್ ಜ್ಞಾನ ಮತ್ತು ಅದರ ಬಳಕೆ ಅನಿವಾರ್ಯ ಎನ್ನಿಸಿದ್ದು ವಿದ್ಯಾಭ್ಯಾಸದ ಸಮಯದಿಂದಲೇ ವಿದ್ಯಾರ್ಥಿಗಳು ಕಂಪ್ಯೂಟರ್ ಜ್ಞಾನ ಪಡೆದುಕೊಳ್ಳಬೇಕಿದೆ ಎಂದು ತುಮಕೂರು ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ.ಕೆ.ಪ್ರಸನ್ನಕುಮಾರ್ ಹೇಳಿದರು.
ತುಮಕೂರು ವಿವಿ ವಿಜ್ಞಾನ ಕಾಲೇಜು ಕಂಪ್ಯೂಟರ್ ವಿಜ್ಞಾನ ವಿಭಾಗ ಸೋಮವಾರ ಆಯೋಜಿಸಿದ್ದ ಕೃತಕ ಬುದ್ಧಿಮತ್ತೆ ಕುರಿತ ಒಂದು ದಿನದ ರಾಷ್ಟ್ರೀಯ ಕಾರ್ಯಗಾರ ಉದ್ಘಾಟಿಸಿ ಮಾತನಾಡಿ, ಪ್ರತಿಯೊಂದು ವಿಭಾಗಗಳಲ್ಲಿಯೂ ತಂತ್ರಜ್ಞಾನ ಬಳಕೆ ಅವಶ್ಯಕವಾಗಿದೆ. ಎಲ್ಲಾ ಕಚೇರಿಗಳಲ್ಲಿಯೂ ಕಂಪ್ಯೂಟರ್, ಲ್ಯಾಪ್ಟಾಪ್ ನೋಡುತ್ತಿರುತ್ತೇವೆ, ಇಂತಹ ಯುಗಕ್ಕೆ ತಂತ್ರಜ್ಞಾನದ ಅರಿವು ಮುಂಚೂಣಿಯಲ್ಲಿರಬೇಕು ಎಂದರು.
ಸಂಪನ್ಮೂಲ ವ್ಯಕ್ತಿಗಳಾದ ಡಾ.ಆನಂದಕುಮಾರ್ ಸುಬ್ರಮಣಿನಾಥನ್ ಮಾತನಾಡಿ, ತಂತ್ರಜ್ಞಾನ ಕ್ಷೇತ್ರ ಕಿರಿದಾದುದಲ್ಲ. ಅದರಲ್ಲಿ ನೀವು ಕಲಿಯಬೇಕಾದ ಕ್ಷೇತ್ರವನ್ನು ಮೊದಲು ಆಯ್ಕೆ ಮಾಡಿಕೊಳ್ಳಿ. ಆಸಕ್ತಿ ಇಟ್ಟು ಕಲಿತರೆ ಯಾವುದೂ ಕಫ್ಟಿವಾಗುವುದಿಲ್ಲ. ಯಾವುದೇ ಕಲಿಕೆಯಾದರೂ ಜೀವನವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವ ಸಾಧನವೆಂಬುದನ್ನು ನೆನಪಿಟ್ಟುಕೊಳ್ಳಿ ಇಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಎಸ್ಎಸ್ಐಟಿ ಕಾಲೇಜು ಕಂಪ್ಯೂಟರ್ ವಿಭಾಗದ ಮುಖ್ಯಸ್ಥೆ ಡಾ.ಎಸ್.ರೇಣುಕಲತಾ ಮಾತನಾಡಿ, ವಿದ್ಯಾರ್ಥಿಗಳಿಗೆ ಪಠ್ಯಕ್ಕಿಂತ ಪಠ್ಯೇತರ ಜ್ಞಾನ ಅವಶ್ಯಕ. ಈ ನಿಟ್ಟಿನಲ್ಲಿ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಜ್ಞಾನ ಒದಗಿಸಿಕೊಡುವ ಕಾರ್ಯನಿರ್ವಹಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ವಿವಿ ವಿಜ್ಞಾನ ಕಾಲೇಜು ಪ್ರೊ.ಪ್ರಕಾಶ್ ಎಂ.ಶೇಟ್, ಡಾ.ಬಿ.ಎಲ್.ಮುಕುಂದಪ್ಪ, ಡಾ.ಆಂಥೋನಿನಾಥ್ ಅಮರನಾಥನ್ ಹಾಗೂ ಡಾ.ಆರ್.ರಮಣಿ ಮತ್ತಿತರರು ಇದ್ದರು.