ಶಿಕ್ಷಣ ಉದ್ಯೋಗ, ಉನ್ನತ ಶಿಕ್ಷಣ, ಸ್ವಯಂ ಉದ್ಯೋಗಕ್ಕೆ ದಾರಿ

05Tmk_VV_Udyoga
Published on

ತುಮಕೂರು: ಶಿಕ್ಷಣ ಉದ್ಯೋಗ, ಉನ್ನತ ಶಿಕ್ಷಣ, ಸ್ವಯಂ ಉದ್ಯೋಗಕ್ಕೆ ದಾರಿದೀಪವಾಗಬೇಕೇ ಹೊರತು ನಿರುದ್ಯೋಗ ಸಮಸ್ಯೆ ಸೃಷ್ಟಿಸಬಾರದು ಎಂದು ವಿವಿ ಉದ್ಯೋಗಾಧಿಕಾರಿ, ಹಿರಿಯ ಪ್ರಾಧ್ಯಾಪಕ ಪ್ರೊ.ಕೆ.ಜಿ.ಪರಶುರಾಮ್ ಹೇಳಿದರು.

ವಿಶ್ವವಿದ್ಯಾಲಯ ಕಲಾ ಕಾಲೇಜಿನ ಉದ್ಯೋಗ ಮಾರ್ಗದರ್ಶನ ಮತ್ತು ನೇಮಕಾತಿ ಘಟಕ ಹಾಗೂ ಮ್ಯಾಜಿಕ್​ ಬಸ್​ ಇಂಡಿಯಾ ಫೌಂಡೇಶನ್​ ಸಹಯೋಗದಲ್ಲಿ ಆಯೋಜಿಸಿರುವ ಒಂದು ವಾರದ ವೃತ್ತಿ ಕೌಶಲ್ಯ ತರಬೇತಿ ಹಾಗೂ ಮಾರ್ಗದರ್ಶನ ಕಾರ್ಯಾಗಾರ ಹಾಗೂ ಪ್ರಶಿಕ್ಷಣ ಕಾರ್ಯಕ್ರಮವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣ ಅಂಕಪಟ್ಟಿಗೆ ಸೀಮಿತವಾಗದೆ ಉದ್ಯೋಗ ಜಗತ್ತಿಗೆ ಸೂಕ್ತವಾದ ಕೌಶಲ್ಯಗಳನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದರು.

ಪ್ರತಿ ವರ್ಷ ಪದವಿ ಪೂರ್ಣಗೊಳಿಸುತ್ತಿರುವ ಸಾವಿರಾರು ಮಂದಿಯಲ್ಲಿ ಉನ್ನತ ಶಿಕ್ಷಣದ ಮೆಟ್ಟಿಲೇರುತ್ತಿರುವವರ ಸಂಖ್ಯೆ ಬೆರಳೆಣಿಕೆಯಷ್ಟಿರುವುದು ಬೇಸರದ ಸಂಗತಿ. ಶಿಕ್ಷಣ ಉದ್ಯೋಗ, ಉನ್ನತ ಶಿಕ್ಷಣ, ಸ್ವಯಂ ಉದ್ಯೋಗಕ್ಕೆ ದಾರಿದೀಪವಾಗಬೇಕೇ ಹೊರತು ನಿರುದ್ಯೋಗ ಸಮಸ್ಯೆ ಸೃಷ್ಟಿಸಬಾರದು. ಶಿಕ್ಷಣವೆಂದರೆ ಜ್ಞಾನ ಮತ್ತು ಸಾಕ್ಷರತೆಗಾಗಿ ಹೋರಾಟ. ಶಿಕ್ಷಣವನ್ನು ಕೌಶಲ್ಯವಾಗಿ ಪರಿವರ್ತಿಸಿ ಪ್ರತಿಭೆಗಳ ಅನಾವರಣವಾಗಬೇಕು ಎಂದು ತಿಳಿಸಿದರು.

ಕೃತಕ ಬುದ್ಧಿಮತ್ತೆಯ ಸ್ಪರ್ಧಾಯುಗದಲ್ಲಿ ಉದ್ಯೋಗ ಬಯಸುವ ಕೌಶಲ್ಯಗಳಲ್ಲಿ ನಿಪುಣತೆ ಹಾಗೂ ಪರಿಣಿತಿ ಹೊಂದಿರಬೇಕು. ಮಾರುಕಟ್ಟೆ ಬಯಸುವ ಕೌಶಲ್ಯಗಳನ್ನು ಕರಗತ ಮಾಡಿಕೊಂಡು, ಉನ್ನತ ಹುದ್ದೆಯನ್ನು ಅಲಂಕರಿಸುವ ಪ್ರತಿಭೆ ನಮ್ಮದಾಗಬೇಕು ಎಂದು ವಿವಿ ಕಲಾ ಕಾಲೇಜಿನ ಪ್ರಭಾರ ಪ್ರಾಂಶುಪಾಲ ಡಾ.ಸಿ.ಎಂ.ರವಿ ಹೇಳಿದರು.

ಶೇ.60 ವಿದ್ಯಾರ್ಥಿನಿಯರಿಗೆ ಕೌಶಲ್ಯ ತರಬೇತಿ ನೀಡಿ ಉದ್ಯೋಗ ಪಡೆಯಲು ಸಹಕರಿಸುತ್ತೇವೆ. ಸಂವಹನ ಕಲೆ, ಬರೆವಣಿಗೆಯಂತಹ ಕೌಶಲ್ಯಗಳನ್ನು ಕಲಿಸುತ್ತೇವೆ ಎಂದು ಮ್ಯಾಜಿಕ್​ ಬಸ್​ ಇಂಡಿಯಾ ಫೌಂಡೇಶನ್​ ಕಾರ್ಯಕ್ರಮ ವ್ಯವಸ್ಥಾಪಕ ಅರವಿಂದ ಕ್ರಿಸ್ಟಿ ತಿಳಿಸಿದರು.

ಕಲಾ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಚಂದ್ರಮೌಳಿ, ಮ್ಯಾಜಿಕ್​ ಬಸ್​ ಇಂಡಿಯಾ ಫೌಂಡೇಶನ್​ ಕಾರ್ಯಕ್ರಮ ವ್ಯವಸ್ಥಾಪಕರಾದ ಧವನ್​ ಗೌಡ, ಕಿರಣ್​ ಚಿಂತಲಪುಡಿ ಉಪಸ್ಥಿತರಿದ್ದರು. ವಿವಿ ಕಲಾ ಕಾಲೇಜಿನ ಉದ್ಯೋಗ ಮಾರ್ಗದರ್ಶನ ಮತ್ತು ನೇಮಕಾತಿ ಘಟಕದ ಸಂಯೋಜಕ ಡಾ.ಕೆ.ವಿ. ಸಿಬಂತಿ ಪದ್ಮನಾಭ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಹ ಪ್ರಾಧ್ಯಾಪಕ ಡಾ.ವಿ.ಸುಬ್ರಹ್ಮಣ್ಯ ಶಮಾರ್ ನಿರೂಪಿಸಿದರು. ಉದ್ಯೋಗ ಮಾರ್ಗದರ್ಶನ ಮತ್ತು ನೇಮಕಾತಿ ಘಟಕದ ಸದಸ್ಯ ಜಿ.ಪ್ರಹ್ಲಾದ್​ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net