

ತುಮಕೂರು: ಸ್ವಂತ ಕ್ಯಾಂಪಸ್ ಹೊಂದುವ 20 ವರ್ಷಗಳ ತುಮಕೂರು ವಿವಿ ಕನಸು ನನಸಾಗಿದೆ. ತುಮಕೂರು ತಾಲೂಕು ಬಿದಿರುಕಟ್ಟೆ ಗ್ರಾಮದ 240 ಎಕರೆ ಜಾಗದಲ್ಲಿ ಹೊಸ ಕ್ಯಾಂಪಸ್ `ಜ್ಞಾನಸಿರಿ'ಗೆ ಉದ್ಘಾಟನೆ ಭಾಗ್ಯ ಸಿಕ್ಕಿದೆ.
2017ರಲ್ಲಿ ಜ್ಞಾನಸಿರಿ ನಿರ್ಮಾಣ ಕಾಮಗಾರಿ ಆರಂಭವಾಗಿದ್ದು ಈಗ ಬಹುತೇಕ ಪೂರ್ಣಗೊಂಡಿದ್ದು ಜ.29ರಂದು ಸಿಎಂ ಸಿದ್ದರಾಮಯ್ಯ ನಗರದ ವಿವಿ ಕ್ಯಾಂಪಸ್ ಸಭಾಂಗಣದಲ್ಲಿಯೇ ನೂತನ ಕ್ಯಾಂಪಸ್‌ಗೆ ಚಾಲನೆ ನೀಡಲಿದ್ದಾರೆ.
ಶೈಕ್ಷಣಿಕ ಭವನ, ವಿವಿ ಮುಖ್ಯಧ್ವಾರ, ಸ್ನಾತಕೋತ್ತರ ವಿದ್ಯಾರ್ಥಿನಿಯರ ವಸತಿನಿಲಯ, ಸ್ನಾತಕೋತ್ತರ ವಿದ್ಯಾರ್ಥಿ ನಿಲಯ, ಸಂಶೋಧನ ವಿದ್ಯಾರ್ಥಿನಿಲಯಕ್ಕೆ ಹಾಗೂ ಪಶ್ಚಿಮ ಹಾಗೂ ಉತ್ತರ ದ್ವಾರ ನಿರ್ಮಾಣವಾಗಿದ್ದು ಮುಂದಿನ ಶೈಕ್ಷಣಿಕ ವರ್ಷದಿಂದಲೇ ಹೊಸ ಕ್ಯಾಂಪಸ್‌ಗೆ ತರಗತಿಗಳು ಶಿಫ್ಟ್ ಆಗಲಿವೆ.
ಸೋಮವಾರ ವಿವಿ ಆವರಣದಲ್ಲಿರುವ ಡಾ.ಶಿವಕುಮಾರಸ್ವಾಮೀಜಿ ಸಭಾಂಗಣದಲ್ಲಿ ಸಿಎಂ ಸಿದ್ದರಾಮಯ್ಯ ಜ್ಞಾನಸಿರಿ ಕ್ಯಾಂಪಸ್ ಲೋಕಾರ್ಪಣೆ ಮಾಡಲಿದ್ದಾರೆ.
ಕೇಂದ್ರ ಸಚಿವ ಎ.ನಾರಾಯಣಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ, ಸಚಿವ ಕೆ.ಎನ್.ರಾಜಣ್ಣ, ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ, ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಸೇರಿದಂತೆ ಜನಪ್ರತಿನಿಧಿಗಳು, ಹಿರಿಯ ಅಧಿಕಾರಿಗಳು ಭಾಗವಹಿಸುವರು.
ಜ್ಞಾನಸಿರಿಯಲ್ಲಿ ಶೈಕ್ಷಣಿಕ ಚಟುವಟಿಕೆಗಳಿಗೆ ಅಗತ್ಯವಿರುವ ಶೈಕ್ಷಣಿಕ ಭವನಕ್ಕೆ ಸಿಎಂ ಚಾಲನೆ ನೀಡಲಿದ್ದು ವಿಜ್ಞಾನ ವಿಷಯದ ಕನಿಷ್ಟ 10 ವಿಭಾಗಗಳು ಮುಂದಿನ ಏಪ್ರಿಲ್‌ನಿಂದ ಶಿಫ್ಟ್ ಆಗಲಿವೆ.
ವಿದ್ಯಾರ್ಥಿನಿಲಯಗಳನ್ನು ಉನ್ನತ ಶಿಕ್ಷಣ ಸಚಿವರಾಗಿದ್ದ ಡಾ.ಅಶ್ವತ್‌ನಾರಾಯಣ ಉದ್ಘಾಟಿಸಿದ್ದರು. ಜ.29ರಂದು ಸಿಎಂ ಸಿದ್ದರಾಮಯ್ಯ 40ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಶೈಕ್ಷಣಿಕ ಭವನ ಉದ್ಘಾಟಿಸಲಿದ್ದಾರೆ. ನಿರ್ಮಾಣ ಹಂತದಲ್ಲಿರುವ ವಿಜ್ಞಾನ ಕೇಂದ್ರ, ಸ್ಫರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ ಹಾಗೂ ಕಲಾ ಭವನ ಕೂಡ ಶೀಘ್ರದಲ್ಲಿಯೇ ಬಳಕೆಗೆ ಸಿದ್ಧವಾಗಲಿವೆ.
ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಈಗ ಉದ್ಘಾಟನೆ ನೆರವೇರಿಸಿ, ಕಾಮಗಾರಿ ಮುಗಿದ ಕೂಡಲೇ ತರಗತಿಗಳನ್ನು ಅಲ್ಲಿಗೆ ವರ್ಗಾಹಿಸಲು ವಿವಿ ಸಿದ್ಧವಾಗಿದೆ.
ಜ.29ರಂದು ವಿವಿ ಆವರಣದಲ್ಲಿಯೇ ನಡೆಯುವ ಸರಳ ಸಮಾರಂಭದಲ್ಲಿ ಕ್ಯಾಂಪಸ್‌ಗೆ ಸಿಎಂ ಸಿದ್ದರಾಮಯ್ಯ ಅವರು ಚಾಲನೆ ನೀಡುವರು. ಮುಂದಿನ ಶೈಕ್ಷಣಿಕ ವರ್ಷದಿಂದಲೇ ವಿಜ್ಞಾನ ವಿಷಯದ ಎಲ್ಲಾ ವಿಭಾಗಗಳನ್ನು ಜ್ಞಾನಸಿರಿಗೆ ಸ್ಥಳಾಂತರಿಸಲಾಗುವುದು.
ಪ್ರೊ.ಎಂ.ವೆಂಕಟೇಶ್ವರಲು
ಕುಲಪತಿ