

ತುಮಕೂರು: ಸಾಮಾಜಿಕ ಸಮಸ್ಯೆಗಳ ಪತ್ತೆ ಹಾಗೂ ಅದರ ಪರಿಹಾರದ ಬಗ್ಗೆ ವೈಜ್ಞಾನಿಕ ಅಧ್ಯಯನ ಮೂಲಕ ಸಮಾಜಕಾರ್ಯ ಪ್ರಸ್ತುತ ಜಗತ್ತಿನ ಅಗತ್ಯದ ಕೋರ್ಸ್ ಎನ್ನಿಸಿಕೊಂಡಿದೆ ಎಂದು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಅಭಿಪ್ರಾಯಪಟ್ಟರು.
ತುಮಕೂರು ವಿವಿ ಡಾ.ಶಿವಕುಮಾರ ಸ್ವಾಮೀಜಿ ಸಭಾಂಗಣದಲ್ಲಿ ಸಮಾಜಕಾರ್ಯ ಅಧ್ಯಯನ ಹಾಗೂ ಸಂಶೋಧನಾ ವಿಭಾಗ, ನಿಮ್ಹಾನ್ಸ್ ಹಾಗೂ ಇಂಡಿಯನ್ ಸೊಸೈಟಿ ಆಫ್ ಪ್ರೊಪೇಷನಲ್ ಸೋಶಿಯಲ್ ವರ್ಕ್ ಸಹಯೋಗದಲ್ಲಿ `ಶಿಕ್ಷಣದಲ್ಲಿ ಸಮಾಜಕಾರ್ಯ' ವಿಷಯ ಕುರಿತ ಮೂರು ದಿನಗಳ ರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ವೃತ್ತಿಪರ ಸಮಾಜಕಾರ್ಯದ ಅಧ್ಯಯನದ ಮೂಲಕ ಸಾಕಷ್ಟು ಸಮಸ್ಯೆಗಳಿಗೆ ಪರಿಹಾರ ಸಿಗುವ ಸಾಧ್ಯತೆಯಿದೆ, ಈ ನಿಟ್ಟಿನಲ್ಲಿ ದೇಶದ ಎಲ್ಲಾ ಸಮಾಜ ಕಾರ್ಯಕರ್ತರು ಒಟ್ಟಾಗಿ ಸೇರುವ ಇಂತಹ ರಾಷ್ಟ್ರೀಯ ಸಮ್ಮೇಳನಗಳು ಸಹಾಯಕವಾಗಿವೆ ಎಂದರು.
ತುಮಕೂರು ವಿವಿ ದೇಶದ ಬಹುತೇಕ ಎಲ್ಲಾ ಸಂಪನ್ಮೂಲ ವ್ಯಕ್ತಿಗಳನ್ನು ತುಮಕೂರಿನಲ್ಲಿ ಸಮಾವೇಶಗೊಳಿಸಿದೆ, ಸಿದ್ಧಗಂಗಾ ಕ್ಷೇತ್ರದ ಸಾಮಾಜಿಕ ಕಾರ್ಯಗಳು ಸಮಾಜಕಾರ್ಯಕರ್ತರಿಗೆ ಪ್ರೇರಣೆಯಾಗಲಿ ಎಂದರು.
ಸಮಾಜಕಾರ್ಯ ಅಧ್ಯಯನದಿಂದಲೂ ಉದ್ಯೋಗ ಸಿಗಲಿದೆ ಎಂಬ ಭರವಸೆಯನ್ನು ಯುವ ವಿದ್ಯಾರ್ಥಿಗಳಿಗೆ ಮೂಡಿಸುವ ನಿಟ್ಟಿನಲ್ಲಿ ತುಮಕೂರು ವಿವಿ ಐತಿಹಾಸಿಕ ರಾಷ್ಟ್ರೀಯ ಸಮ್ಮೇಳನ ಆಯೋಜಿಸಿದೆ ಎಂದು ಶ್ಲಾಘಿಸಿದರು.
ಪದವಿಗಳು ಉದ್ಯೋಗ ಪಡೆಯಲು ಸೀಮಿತವಾಗದೆ, ಜೀವನದ ಮಾರ್ಗವಾಗಬೇಕು, ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ಮೂಡಿಸದ ಶಿಕ್ಷಣ ಉಪಯೋಗವಿಲ್ಲ ಎಂದರು.
ನಾನು ಸಚಿವನಲ್ಲ, ಸಮಾಜಕಾರ್ಯಕರ್ತ, ಸಮಾಜಕ್ಕೆ ಶಿಕ್ಷಣ ನೀಡುವ ಕಾರ್ಯವನ್ನು ಜನಪ್ರತಿನಿಧಿಗಳೂ ಮಾಡಬೇಕು ಆದರೆ, ವೃತ್ತಿಪರ ಸಮಾಜಕಾರ್ಯಕರ್ತರು ಪರಿಣಾಮಕಾರಿಯಾಗಿ ಈ ಕಾರ್ಯ ಮಾಡಬಲ್ಲರು ಹಾಗಾಗಿ, ಇಂತಹ ಸಮ್ಮೇಳನಗಳ ಸದುಪಯೋಗ ಪಡೆಯಬೇಕು ಎಂದು ಸಲಹೆ ನೀಡಿದರು.
ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು, ವಿಶ್ರಾಂತಿ ಕುಲಪತಿ ಪ್ರೊ.ವೈ.ಎಸ್.ಸಿದ್ದೇಗೌಡ, ಮುಂಬೈ ಟಿಐಎಸ್‌ಎಸ್ ನಿವೃತ್ತ ಪ್ರಾಧ್ಯಾಪಕಿ ಪ್ರೊ.ಮುರಳಿ ದೇಸಾಯಿ, ವಿಭಾಗದ ಮುಖ್ಯಸ್ಥ ಪ್ರೊ.ಕೆ.ಜಿ.ಪರಶುರಾಮ್,
ನಿಮ್ಹಾನ್ಸ್ ನಿವೃತ್ತ ಪ್ರಾಧ್ಯಾಪಕ ಐ.ಎ.ಶರೀಪ್, ಕುಲಸಚಿವೆ ನಯಿದಾ ಜಮ್ ಜಮ್ , ನಿಮ್ಹಾನ್ಸ್ ಪ್ರಾಧ್ಯಾಪಕ ಪ್ರೊ.ಎನ್.ಜನಾರ್ಧನ್, ತುಮಕೂರು ವಿವಿ ಪ್ರಾಧ್ಯಾಪಕ ಪ್ರೊ.ಬಿ.ರಮೇಶ್ ಇದ್ದರು.
1200 ಸಮಾಜಕಾರ್ಯಕರ್ತರ ಸಂಗಮ:
ದೇಶದ ಇತಿಹಾಸದಲ್ಲಿಯೇ ಇದೇ ಮೊದಲ ಭಾರಿಗೆ ದೇಶದೆಲ್ಲೆಡೆ ಇರುವ ವೃತ್ತಿಪರ ಸಮಾಜ ಕಾರ್ಯಕರ್ತರು ಒಂದೇ ವೇದಿಕೆಯಲ್ಲಿ ಸಮಾವೇಶಗೊಂಡಿದ್ದಾರೆ. ತುಮಕೂರು ವಿವಿ ಸಮಾಜಕಾರ್ಯ ವಿಭಾಗದ ಆಯೋಜಿಸಿರುವ ರಾಷ್ಟ್ರೀಯ ಸಮ್ಮೇಳನದಲ್ಲಿ ಹಿರಿಯ ಸಮಾಜ ಕಾರ್ಯಕರ್ತರು, ಪ್ರಾಧ್ಯಾಪಕರು, ಸಂಶೋಧನಾರ್ಥಿಗಳು, ವಿದ್ಯಾರ್ಥಿಗಳು ಸೇರಿ ಒಟ್ಟು 1200ಕ್ಕೂ ಹೆಚ್ಚು ಜನರು ಭಾಗವಹಿಸಿದ್ದಾರೆ.