ಸೋಮಣ್ಣ ಸ್ಫರ್ಧೆಗೆ ಯಾರ ವಿರೋಧವೂ ಇಲ್ಲ ಎಂದ ಬಿವೈವಿ!; ಮಾಜಿ ಸಚಿವ ಜೆಸಿಎಂಗೆ ಬಿಗ್ ಶಾಕ್?

Somanna
Published on

ತುಮಕೂರು: ಮಾಜಿ ಸಚಿವ ವಿ.ಸೋಮಣ್ಣ ತುಮಕೂರು ಲೋಕಸಭಾ ಕ್ಷೇತ್ರದಿಂದ ಸ್ಫರ್ಧಿಸಲು ಯಾರ ವಿರೋಧವೂ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರತಿಕ್ರಿಯಿಸುವ ಮೂಲಕ ರಾಜಕೀಯ ವಲಯದಲ್ಲಿ ಕುತೂಹಲ ಹೆಚ್ಚಿಸಿದರು.

ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಕೇಂದ್ರದ ವರಿಷ್ಠರು ಒಪ್ಪಿಗೆ ಸೂಚಿಸಿದರೆ ನಮ್ಮದೇನು ಅಭ್ಯಂತರ ಇಲ್ಲ.ಸೋಮಣ್ಣ ಎಲ್ಲರಿಗಿಂತ ಹಿರಿಯರಿದ್ದಾರೆ, ಪಕ್ಷ ಒಗ್ಗಟ್ಟಾಗಿ ತೀರ್ಮಾನ ಮಾಡುತ್ತದೆ ಎಂದರು.

ತುಮಕೂರು ಲೋಕಸಭಾ ಕ್ಷೇತ್ರದಿಂದ ಸೋಮಣ್ಣ ಸ್ಪರ್ಧಿಸುವುದಕ್ಕೆ ಯಾರ ವಿರೋಧವೂ ಇಲ್ಲ, ವಿರೋಧವಿದೆ ಎಂಬುದೆಲ್ಲಾ ಮಾಧ್ಯಮಗಳ ಸೃಷ್ಟಿ. ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿಯೂ ಯಾರು ಸ್ಪರ್ಧೆ ಮಾಡಬೇಕು ಎಂಬುದನ್ನು ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ಕೇಂದ್ರದ ವರಿಷ್ಠರು ತೀರ್ಮಾನಿಸುತ್ತಾರೆ ಎಂದರು.

ಮಾಜಿ ಸಚಿವ ಜೆಸಿಎಂಗೆ ಬಿಗ್ ಶಾಕ್!?:

ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ವಿ.ಸೋಮಣ್ಣ ಹೆಸರು ಕಳೆದ ಒಂದೆರಡು ದಿನದಿಂದ ಮುಂಚೂಣಿಗೆ ಬಂದಿರುವುದು ಚಿಕ್ಕನಾಯಕನಹಳ್ಳಿ ಕ್ಷೇತ್ರದ ಮಾಜಿ ಶಾಸಕರೂ ಆದ ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಹಾಗೂ ಅವರ ಅಭಿಮಾನಿಗಳಿಗೆ ಬಿಗ್‌ಶಾಕ್ ಎನ್ನಿಸಿದೆ.


ಶಿವಮೊಗ್ಗದಲ್ಲಿ ಜ.15ರಂದು ಆಯೋಜಿಸಿದ್ದ ಶ್ರೀಸಿದ್ದರಾಮ ಜಯಂತಿ ಕಾರ್ಯಕ್ರಮದ ನಂತರ ನೊಳಂಬ ಲಿಂಗಾಯತ ಸಮುದಾಯದ ಜೆ.ಸಿ.ಮಾಧುಸ್ವಾಮಿ ಅವರೇ ತುಮಕೂರು ಕ್ಷೇತ್ರದಲ್ಲಿ ಅಭ್ಯರ್ಥಿಯಾಗಲಿದ್ದಾರೆ ಎಂಬ ಮಾತು ಬಲವಾಗಿ ಕೇಳಿಬಂದಿತ್ತು. ಜೆಸಿಎಂ ಬೆಂಬಲಕ್ಕಿದ್ದಾರೆ ಎನ್ನಲಾಗಿದ್ದ ವಿಜಯೇಂದ್ರ ಕೂಡ ಸೋಮಣ್ಣ ಸ್ಫರ್ಧೆಗೆ ವಿರೋಧವಿಲ್ಲ ಎಂದು ಪ್ರತಿಕ್ರಿಯಿಸಿರುವುದು ಜಿಲ್ಲೆಯಲ್ಲಿ ಸಂಸದ ಜಿ.ಎಸ್.ಬಸವರಾಜು ಬಣದ ಕೈ ಮೇಲಾದಂತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net