

ತುರುವೇಕೆರೆ: ಮಾಯಸಂದ್ರ ಹೋಬಳಿ ಕೆರೆವರಗೆರೆಹಳ್ಳಿ ರೈತ ಹರೀಶ್ ಎಂಬುವವರ ತೋಟದಲ್ಲಿಕಾಣಿಸಿಕೊಂಡ ಚಿರತೆ, ಜನರ ಕೂಗಾಟಕ್ಕೆ ಬೆದರಿ ತೆಂಗಿನ ಮರವೇರಿದ್ದ ಘಟನೆ ಗುರುವಾರ ನಡೆದಿದೆ.
ಹರೀಶ್ ತೋಟದಲ್ಲಿ ಹಸು ಮೇಯಿಸುತ್ತಿದ್ದ ವೇಳೆ ಬಹು ಎತ್ತರದ ತೆಂಗಿನ ಮರದಿಂದ ಕೆಳಗೆ ಇಳಿಯುತಿದ್ದು ಚಿರತೆಯನ್ನು ಕಂಡು ಭಯಗೊಂಡು ಕೂಗಾಡಿದ್ದಾರೆ. ಅಕ್ಕಪಕ್ಕದ ತೋಟದವರು ಸ್ಥಳಕ್ಕೆ ಧಾವಿಸಿ ಚಿರತೆ ಓಡಿಸಲು ಗದ್ದಲ ಮಾಡಿದ್ದಾರೆ.
ಆತಂಕಗೊಂಡ ಚಿರತೆ ಅಡ್ಡಾದಿಡ್ಡಿ ಓಡಾಡಿ ಶುರುಮಾಡಿ ಅಂತಿಮವಾಗಿ ಎತ್ತರದ ತೆಂಗಿನ ಮರ ಏರಿ ಕುಳಿತಿದೆ. ಕೂಡಲೇ ಗ್ರಾಮಸ್ಥರು ಅರಣ್ಯ ಇಲಾಖೆಗೆ ಕರೆ ಮಾಡಿ ವಿಷಯ ಮುಟ್ಟಿಸಿದ್ದಾರೆ, ಸ್ಥಳಕ್ಕೆ ಬಂದ ಇಬ್ಬರು ಸಿಬ್ಬಂದಿಗಳು ಜನರಿಗೆ ಗದ್ದಲ ಮಾಡದಂತೆ ಮನವರಿಕೆ ಮಾಡಿಕೊಟ್ಟು ದೂರ ಕಳುಹಿಸಲು ಪ್ರಯತ್ನಿಸಿದರೂ ಆಗದೆ ಸ್ಥಳದಲ್ಲಿಯೇ ಬೀಡು ಬಿಟ್ಟಿದ್ದಾರೆ.
ಘಟನೆಯಿಂದ ಗ್ರಾಮಸ್ಥರಲ್ಲಿ ಭಯ ಸೃಷ್ಟಿಯಾಗಿದ್ದು ಚಿರತೆಯನ್ನು ಕೂಡಲೇ ಸೆರೆಹಿಡಿಯಬೇಕೆಂದು ಒತ್ತಾಯಿಸಿದ್ದಾರೆ.