

ತುಮಕೂರು: ಕಳೆದೆರಡು ದಿನಗಳಿಂದಲೂ ಜಿಲ್ಲೆಯಲ್ಲಿ ಭರಣಿ ಮಳೆಯ ಆರ್ಭಟ ಮುಂದುವರಿದಿದ್ದು ಏ.26ರಿಂದ 30ರ ವರೆಗೂ ತುಂತುರು ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಸೋಮವಾರ ಮದ್ಯಾಹ್ನ ಸುರಿದ ಬಿರಿಗಾಳಿ ಸಹಿತ ಭಾರಿ ಮಳೆಗೆ ನಗರದ ಹಲವೆಡೆ ಮರಗಳು ಮತ್ತು ಲೈಟ್ ಕಂಬಗಳು ಧರೆಗುರುಳಿದವು, ನಗರದ ಜಿಲ್ಲಾಸ್ಪತ್ರೆ ಆವರಣದಲ್ಲಿ ಮರದ ಕೆಳೆಗೆ ನಿಂತಿದ್ದ ಆಂಬುಲೆನ್ಸ್ ಸಹಿತ 9 ಕಾರುಗಳು ಮತ್ತು ಒಂದು ಆಂಬುಲೆನ್ಸ್ ಮೇಲೆ ಮರಗಳು ಉರುಳಿಬಿದ್ದು ಕಾರುಗಳೆಲ್ಲವೂ ಜಖಂಗೊಂಡಿವೆ.
ಕೆ.ಲಕ್ಕಪ್ಪ ವೃತ್ತದ ಸಮೀಪದ ಆರ್ಯನ್ ಶಾಲೆಯ ಮೇಲ್ಛಾವಣೆ ಶೀಟುಗಳು ಬಿರುಗಾಳಿಗೆ ಹಾರಿಬಂದು ವಿನಾಯಕ ನಗರದ ಲೈಟ್ ಕಂಬದ ಮೇಲೆ ಬಿದ್ದಿದೆ. ಬಿ.ಹೆಚ್.ರಸ್ತೆ ಸಿದ್ದಗಂಗಾ ಮಹಿಳಾ ಕಾಲೇಜಿನ ಒಳಭಾಗದ ಮರಗಳು ಬಿ.ಹೆಚ್.ರಸ್ತೆ ಕಡೆ ಉರುಳಿ ಸಂಪೂರ್ಣ ಕಾಂಪೌಂಡ್ ಹಾನಿಯಾಗಿದೆ. ವಾಹನ ಸವಾರಕ್ಕೆ ಅಡಚಣೆಯಾಗಿದ್ದ ಮರಗಳನ್ನು ರಸ್ತೆಯಿಂದ ತೆರವುಗೊಳಿಸಲು ಮಹಾನಗರ ಪಾಲಿಕೆ ಸಿಬ್ಬಂದಿ ಹಾಗೂ ಪೊಲೀಸರು ಕೆಲವು ಕಾಲ ಹರಸಾಹಸಪಟ್ಟರು.
ಆಸ್ಪತ್ರೆಯ ಬಳಿ ನಿಂತಿದ್ದ ಮಾರುತಿ 800 ಕಾರು ಮೇಲೆ ವಿದ್ಯುತ್ ಕಂಬ ಬಿದ್ದಿದ್ದು ಇಬ್ಬರು ಪವಾಡದ ರೀತಿಯಲ್ಲಿ ಯಾವುದೇ ಅನಾವುತ ಸಂಭವಿಸದೆ ಬಚಾವಾಗಿದ್ದಾರೆ. ಅವರ ಅದೃಷ್ಟ ಚೆನ್ನಾಗಿತ್ತು, ಆಯಸ್ಸು ಇತ್ತು ಅನ್ನಿಸುತ್ತದೆ, ಇದರಿಂದ ಕಾರಿನಲ್ಲಿದ್ದ ಆ ಇಬ್ಬರೂ ಯಾವುದೇ ತೊಂದರೆಯಾಗದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಭಾನುವಾರ ರಾತ್ರಿ ಕೂಡ ಜಿಲ್ಲೆಯ ಬಹುತೇಕ ಭಾಗದಲ್ಲಿ ಮಳೆಯಾಗಿದೆ. ತುಮಕೂರು ನಗರದಲ್ಲಿ 5.4ಸೆಮೀ ತಾಲೂಕು ಬೆಳ್ಳಾವಿಯಲ್ಲಿ 4.9 ಸೆಮೀ ಮಳೆಯಾಗಿದೆ, ಹೆಬ್ಬೂರಿನಲ್ಲಿ 4.3ಸೆ.ಮೀ, ಊರ್ಡಿಗೆರೆ 13.1ಮಿಮೀ, ಹಿರೇಹಳ್ಳಿ 13.2ಮಿಮೀ ಹಾಗೂ ನೆಲಹಾಳ್ನಲ್ಲಿ 12ಮಿಮೀ ಮಳೆ ಸರಿದಿದೆ. ಪಾವಗಡ ತಾಲೂಕು ಅರಸೀಕೆರೆಯಲ್ಲಿ 35.4ಮಿಮೀ, ವೈ.ಎನ್.ಹೊಸಕೋಟೆ 30.8 ಮಿಮೀ ಮಳೆಯಾಗಿದೆ.