

ತುಮಕೂರು: ಜಿಲ್ಲೆಯೆಲ್ಲೆಡೆ ಆಕ್ರೋಶಕ್ಕೆ ಕಾರಣವಾಗಿರುವ ಮಾಗಡಿ, ರಾಮನಗಕ್ಕೆ ನೀರು ಕೊಂಡೊಯ್ಯುವ ಹೇಮಾವತಿ ಲಿಂಕ್ ಕೆನಾಲ್ ಯೋಜನೆ ಬಗ್ಗೆ ಪತ್ರಕರ್ತರು ಪದೇಪದೇ ಪ್ರಶ್ನೆಗಳನ್ನು ಕೇಳಿದರೂ ಅದನ್ನು ಕೇಳಿಸಿಕೊಂಡರೂ ಕೇಳಿಸದಂತೆ ಡಿ.ಕೆ.ಶಿವಕುಮಾರ್ ಜಾಣಕಿವುಡು ಪ್ರದರ್ಶಿಸಿದರು.
ಗುಬ್ಬಿ ತಾಲೂಕಿನಲ್ಲಿಯೇ ನಡೆದ ಕಾರ್ಯಕ್ರಮ ವೇದಿಕೆಯಲ್ಲಿ ಅವಕಾಶವಿದ್ದರೂ ಶಾಸಕರೂ ಈ ಬಗ್ಗೆ ಸೊಲ್ಲೆತ್ತದರಿಂದ ಡಿಕೆ ಉತ್ಸಾಹ ಇಮ್ಮಡಿಗೊಂಡಿತ್ತು.
ಆದರೂ, ಪತ್ರಕರ್ತರು ಪಟ್ಟುಬಿಡದೇ ಪದೇಪದೇ ಅದೇ ಪ್ರಶ್ನೆಯನ್ನು ಕೇಳಿದ್ದರಿಂದ ಅನಿವಾರ್ಯವಾಗಿ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್, "ಯಾವ ಪುಲಿನೂ ಇಲ್ಲ, ದರಿನೂ ಇಲ್ಲ. ಸರ್ವರಿಗೂ ಸಮಬಾಳು, ಸಮಪಾಲು' ಎಂದರು.
ಡಿ.ಕೆ.ಶಿವಕುಮಾರ್ ಜತೆ ವೇದಿಕೆ ಹಂಚಿಕೊಂಡ ಸ್ಥಳಿಯ ಶಾಸಕ ಎಸ್.ಆರ್.ಶ್ರೀನಿವಾಸ್ ಅಪ್ಪಿತಪ್ಪಿಯೂ ಲಿಂಕ್ ಕೆನಾಲ್ ಯೋಜನೆ ಬಗ್ಗೆ ತುಟಿಬಿಚ್ಚಲಿಲ್ಲ, ಇನ್ನೂ ಹಿರಿಯ ಶಾಸಕ ಟಿ.ಬಿ.ಜಯಚಂದ್ರ ಲಿಂಕ್ ಕೆನಾಲ್ ಯೋಜನೆಗೆ ಪರೋಕ್ಷವಾಗಿ ಬೆಂಬಲ ಸೂಚಿಸಿದ್ದು ಜಿಲ್ಲೆಯ ಜನರಿಗೆ ಅಚ್ಚರಿಯ ಜತೆಗೆ ಅಘಾತವನ್ನು ತಂದಿತು.
ವೇದಿಕೆಯಲ್ಲಿ ಮಾತನಾಡಿದ ಟಿ.ಬಿ.ಜಯಚಂದ್ರ, ಹೇಮಾವತಿ ನಾಲೆಯಿಂದ ಜಿಲ್ಲೆಯ ಪಾಲಿನ 24 ಟಿಎಂಸಿ ನೀರು ಈವರೆಗೂ ಎಂದೂ ಹರಿದಿಲ್ಲ ಈ ನೀರು ಜಿಲ್ಲೆಗೆ ಹರಿದರೆ ಕುಣಿಗಲ್, ಮಾಗಡಿ ಮಾತ್ರವಲ್ಲ ಮುಂದಿನ ಭಾಗಕ್ಕೂ ನೀರು ತೆಗೆದುಕೊಂಡು ಹೋಗಬಹುದು ಎಂದು ಡಿ.ಕೆ.ಶಿವಕುಮಾರ್ ಅವರನ್ನು ಮೆಚ್ಚಿಸುವ ಮಾತುಗಳನ್ನಾಡಿದರು.