ಮೈಸೂರು ದಸರಾ ಜಂಬೂ ಸವಾರಿಯಲ್ಲಿ ಎಚ್ ಎಎಲ್, ಸೋಲಾರ್ ಪಾರ್ಕ್ ಸ್ತಬ್ಧಚಿತ್ರ

29Tmk_Dasara_Tabloo11
Published on

ತುಮಕೂರು: ವಿಶ್ವ ಭೂಪಟದಲ್ಲಿ ಜಿಲ್ಲೆಯ ಛಾಪನ್ನು ಮೂಡಿಸಲಿರುವ ಗುಬ್ಬಿ ತಾಲೂಕು ಬಿದರೆಹಳ್ಳ ಕಾವಲ್‌ನ ಎಚ್‌ಎಎಲ್ ಹೆಲಿಕ್ಯಾಪ್ಟರ್ ಉತ್ಪಾದನಾ ಘಟಕದ ಸ್ತಬ್ಧಚಿತ್ರವು ಈ ಬಾರಿಯ ಮೈಸೂರು ದಸರಾ ಮೆರವಣಿಗೆಯಲ್ಲಿ ಗಮನಸೆಳೆಯಲಿದೆ.

ಕಳೆದ ಎರಡು ವರ್ಷಗಳಿಂದ ಕರೊನಾದಿಂದಾಗಿ ಕಳೆಗುಂದಿದ್ದ ಮೈಸೂರು ದಸಾರ ಈ ಬಾರಿ ತನ್ನ ಗತವೈಭವನ್ನು ಮರಳಿ ಪಡೆದಿದ್ದು ಅ.5ರಂದು ನಡೆಯಲಿರುವ ವಿಶ್ವವಿಖ್ಯಾತ ಮೈಸೂರು ದಸಾರ ಜಂಬೂ ಸವಾರಿಯಲ್ಲಿ ಎಚ್‌ಎಎಲ್ ಹೆಲಿಕ್ಯಾಪ್ಟರ್ ಘಟಕ ಹಾಗೂ ಏಷ್ಯಾದಲ್ಲೇ ಅತಿ ದೊಡ್ಡ ಪಾವಗಡದ ಸೌರಪಾರ್ಕ್ನ ಸ್ತಬ್ಧಚಿತ್ರ ಆಕರ್ಷಣೀಯ ಎನಿಸಲಿದೆ.

2018ರಲ್ಲಿ ಶತಮಾನದ ಸಂತ ಶಿವಕುಮಾರ ಶ್ರೀಗಳ ಸ್ತಬ್ಧಚಿತ್ರ ನಿರ್ಮಿಸಿದ್ದ ತಿಪಟೂರು ಕೃಷ್ಣ ನೇತೃತ್ವದ 18 ಕಲಾವಿದರ ತಂಡವೇ ಹಗಲಿರುಳು ಎಚ್‌ಎಎಲ್ ಹೆಲಿಕ್ಯಾಪ್ಟರ್ ಘಟಕ ಸ್ತಬ್ಧಚಿತ್ರ ನಿರ್ಮಾಣದಲ್ಲಿ ಶ್ರಮಿಸುತ್ತಿದೆ.

ದೇಶದ ಹೆಮ್ಮೆಯ ಎಚ್‌ಎಎಲ್ ಸಂಸ್ಥೆಯು ಯುದ್ಧವಿಮಾನ, ಹೆಲಿಕಾಪ್ಟರ್ ಉತ್ಪಾದನಾ ಘಟಕವು ಗುಬ್ಬಿ ತಾಲೂಕು ಬಿದರೆಹಳ್ಳ ಕಾವಲ್‌ನಲ್ಲಿ ಇನ್ನೇನು ಲೋಕಾರ್ಪಣೆಗೆ ಸಿದ್ಧಗೊಂಡಿದೆ.

ಜನವರಿ 3, 2016ರಂದು ಈ ಘಟಕದ ಶಂಕುಸ್ಥಾಪನೆಯನ್ನು ನೆರವೇರಿಸಲಾಗಿತ್ತು. ಹೆಲಿಕ್ಯಾಪ್ಟರ್ ತಯಾರಿಕಾ ಘಟಕವು 610 ಎಕರೆಯ ಜಾಗ ಪ್ರದೇಶದಲ್ಲಿದ್ದು ಇಡೀ ದೇಶದಲ್ಲಿ ಅತಿದೊಡ್ಡ ಹೆಲಿಕ್ಯಾಪ್ಟರ್ ಉತ್ಪಾದನಾ ಘಟಕ ಇದಾಗಲಿದೆ. 5 ಸಾವಿರ ಕೋಟಿ ರೂ., ಬಂಡಾವಳವನ್ನು ಎಚ್‌ಎಎಲ್ ಈ ಘಟಕದ ಮೇಲೆ ಹೂಡಲಾಗುತ್ತಿದೆ.

ಪಾವಗಡದಲ್ಲಿ 13 ಸಾವಿರ ಎಕರೆ ಪ್ರದೇಶದಲ್ಲಿ ಸುಮಾರು 12 ಸಾವಿರ ಕೋಟಿ ವೆಚ್ಚದಲ್ಲಿ 2050 ಮೆಗಾವ್ಯಾಟ್ ಸೌರವಿದ್ಯುತ್ ಉತ್ಪಾದಿಸುವ ಏಷ್ಯಾದಲ್ಲೇ ಅತಿದೊಡ್ಡ ಸೋಲಾರ್ ಪಾರ್ಕ್ ಯೋಜನೆ ಇದಾಗಿದ್ದು ಸ್ತಬ್ದಚಿತ್ರದಲ್ಲಿ ಮೂಡಿಬರುತ್ತಿರುವುದು ವಿಶೇಷವೆನಿಸಿದೆ.

ತಿಪಟೂರು ಕೃಷ್ಣ ನೇತೃತ್ವದ ಕಲಾವಿದರ ತಂಡ ನಿರ್ಮಿಸಿರುವ ಸ್ತಬ್ಧಚಿತ್ರ 4ನೇ ಬಾರಿ ಮೈಸೂರು ದಸಾರದಲ್ಲಿ ಪಾಲ್ಗೊಳ್ಳುತ್ತಿರುವ ವಿಶೇಷವೆನಿಸಿದೆ. 2014ರಲ್ಲಿ ಅರಳಗುಪ್ಪೆಯ ಶ್ರೀ ಚನ್ನಕೇಶವ ಸ್ವಾಮಿ ದೇವಸ್ಥಾನದ ಸ್ತಬ್ಧ ಚಿತ್ರಕ್ಕೆ ವಿಭಾಗೀಯಮಟ್ಟದ ಪ್ರಥಮ ಬಹುಮಾನ ಬಂದಿತ್ತು.

2017ರಲ್ಲಿ ಯಡಿಯೂರು ಸಿದ್ದಲಿಂಗೇಶ್ವರ ಸ್ವಾಮಿ ದೇವಾಸ್ಥಾನ ಸ್ತಬ್ಧ ಚಿತ್ರಕ್ಕು ಬಹಮಾನ ಸಿಕ್ಕಿತ್ತು. 2018ರಲ್ಲಿ ಶತಮಾನದ ಸಂತ ಶಿವಕುಮಾರ ಶ್ರೀಗಳ ಸ್ತಬ್ಧಚಿತ್ರ ಸಾಕಷ್ಟು ಹೆಸರು ಪಡೆದಿತ್ತು. 2019ರಲ್ಲಿ ಸ್ತಬ್ದಚಿತ್ರದ ನಿರ್ಮಾಣದ ಕಾರ್ಯಾದೇಶ ಕೊಟ್ಟು ಹಿಂಪಡೆಯಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net