ತುಮಕೂರು ವಿವಿ ಘಟಿಕೋತ್ಸವ ದಿಢೀರ್ ಮುಂದೂಡಿಕೆ; ಗೌರವ ಡಾಕ್ಟರೇಟ್ ಗೆ 9 ಹೆಸರು ಶಿಫಾರಸು

tumkur-vv
Published on

ತುಮಕೂರು: ತುಮಕೂರು ವಿವಿ 16ನೇ ವಾರ್ಷಿಕ ಘಟಿಕೋತ್ಸವದ ದಿನಾಂಕ ಮುಂದೂಡಿಕೆಯಾಗಿದೆ. ಆ.5ರಂದು ನಿಗದಿಯಾಗಿದ್ದ ಘಟಿಕೋತ್ಸವ ಆ.7ರಂದು ನಡೆಯಲಿದೆ ಎಂದು ವಿವಿ ಪರಿಕ್ಷಾಂಗ ಕುಲಸಚಿವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದ ವಿವಿ ಘಟಿಕೋತ್ಸವ ಸಮಾರಂಭ ಬರೋಬ್ಬರಿ 6 ತಿಂಗಳು ತಡವಾಗಿ ನಡೆಯುತ್ತಿದ್ದು ಯಾರಿಗೆ ಗೌರವ ಡಾಕ್ಟರೇಟ್ ಸಿಗಲಿದೆ ಎಂಬ ಬಗ್ಗೆ ತುಮಕೂರು ವಿವಿ ಹಾಗೂ ಜಿಲ್ಲೆಯ ಶೈಕ್ಷಣಿಕ ವಲಯದಲ್ಲಿ ಕುತೂಹಲ ಮೂಡಿಸಿದೆ.

ಇತ್ತೀಚೆಗೆ ನಡೆದಿದ್ದ ವಿವಿ ಸಿಂಡಿಕೇಟ್ ಸಭೆಯಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ 9 ಸಾಧಕರನ್ನು ಗೌರವ ಡಾಕ್ಟರೇಟ್‌ಗೆ ಶಿಫಾರಸು ಮಾಡಲಾಗಿದೆ ಎನ್ನಲಾಗಿದ್ದು ವಿವಿ ವತಿಯಿಂದ ನಡೆಸಲಾಗುತ್ತಿರುವ ಮಧ್ಯಾಹ್ನದ ದಾಸೋಹಕ್ಕೆ ನೆರವು ನೀಡಿರುವ ದಾನಿಗಳಿಗೂ ಮಣೆಯಾಕಿದ್ದಾರೆ ಎಂಬ ಗುಸುಗುಸು ಕೇಳಿಬರುತ್ತಿದೆ.

ಮಾಜಿ ಸಂಸದೆ, ಹಿರಿಯ ಕಲಾವಿದೆ ಬಿ.ಜಯಶ್ರೀ, ಚಿತ್ರನಿರ್ದೇಶಕ ಟಿ.ಎಸ್.ನಾಗಾಭರಣ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವವರನ್ನು ಆಯ್ಕೆ ಮಾಡಿದೆ.

ತುಮಕೂರಿನ ವೃಕ್ಷ ಮಿತ್ರ ಖ್ಯಾತಿಯ ನಿವೃತ್ತ ಪ್ರಾಧ್ಯಾಪಕ ಪ್ರೊ.ಸಿದ್ಧಪ್ಪ, ಕ್ರೀಡಾಪಟು ನಾಗಾನಂದಸ್ವಾಮಿ, ದಾನಿ ರಮೇಶ್‌ಬಾಬು ಸೇರಿದಂತೆ ಒಟ್ಟು 9 ಸಾಧಕರ ಹೆಸರನ್ನು ವಿವಿ ಸಿಂಡಿಕೇಟ್ ಸಭೆಯಲ್ಲಿ ಒಪ್ಪಿ ಶಿಫಾರಸು ಮಾಡಲಾಗಿದೆ.

ಜೆಎನ್‌ಯು ಕುಲಪತಿ ಘಟಿಕೋತ್ಸವ ಭಾಷಣ:
ವಿವಿ ಆವರಣದ ಡಾ.ಶಿವಕುಮಾರಸ್ವಾಮೀಜಿ ಸಭಾಂಗಣದಲ್ಲಿ ನಡೆಯಲಿರುವ ಘಟಕೋತ್ಸವದಲ್ಲಿ ಕಲಾಧಿಪತಿಗಳೂ ಆದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಭಾಗವಹಿಸುವರು. ನವದೆಹಲಿಯ ಜವಾಹರ್‌ಲಾಲ್ ನೆಹರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಸಾಂತಿಶ್ರೀ ಧೂಳಿಪುಡಿ ಪಂಡಿತ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net