

ತುಮಕೂರು: ಎಲ್ಲೆಲ್ಲೂ ವಿದ್ಯಾರ್ಥಿಗಳ ದಂಡು... ಸುತ್ತೆಲ್ಲ ಹಸಿರು ಗಿಡಮರ... ಆಗಾಗ ತುಂತುರು ಮಳೆ... ವಿಜ್ಞಾನಕೇಂದ್ರದ ಆವರಣದಲ್ಲಿ ಕುತೂಹಲದ ಕಣ್ಣುಗಳು... ತುಂಬಿತುಳುಕಿದ ಶೈಕ್ಷಣಿಕ ಭವನ... ವಿದ್ಯಾರ್ಥಿನಿಲಯ, ಕಲಾಭವನಗಳಲ್ಲಿ ಚುರುಕಿನ ಓಡಾಟ... ವಾವ್, ಎಷ್ಟೊಂದು ಸುಂದರ ವಾತಾವರಣ... ಎಲ್ಲರ ಬಾಯಲ್ಲೂ ಅದೇ ಉದ್ಗಾರ
ಇದು ಬಿದರಕಟ್ಟೆಯಲ್ಲಿರುವ ತುಮಕೂರು ವಿಶ್ವವಿದ್ಯಾನಿಲಯದ ನೂತನ ಕ್ಯಾಂಪಸ್ ಱಜ್ಞಾನಸಿರಿಯಲ್ಲಿ ಶುಕ್ರವಾರ ಕಂಡುಬಂದ ದೃಶ್ಯ. ನೂತನ ಕ್ಯಾಂಪಸ್ನ ಪರಿಚಯ ಮಾಡಿಕೊಡುವ ಉದ್ದೇಶದಿಂದ ನಗರ ಕ್ಯಾಂಪಸ್ನಲ್ಲಿರುವ ಎಲ್ಲ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರಿಗೆ ಜ್ಞಾನಸಿರಿಗೆ ಭೇಟಿನೀಡುವ ಅವಕಾಶವನ್ನು ಕಲ್ಪಿಸಲಾಗಿತ್ತು.
ಭೌತಶಾಸ್ತ್ರ, ಸಾವಯವ ರಸಾಯನಶಾಸ್ತ್ರ, ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರ, ಆಹಾರ ವಿಜ್ಞಾನ, ಗಣಿತಶಾಸ್ತ್ರ, ಸೂಕ್ಷ್ಮಾಣುಜೀವಶಾಸ್ತ್ರ, ಜೈವಿಕ ತಂತ್ರಜ್ಞಾನ, ಜೀವರಸಾಯನಶಾಸ್ತ್ರ, ಕಂಪ್ಯೂಟರ್ ವಿಜ್ಞಾನ, ಡೇಟಾ ಸೈನ್ಸ್ ಹಾಗೂ ಎಂಸಿಎ ವಿಭಾಗಗಳು ಈಗಾಗಲೇ ಜ್ಞಾನಸಿರಿಗೆ ಕ್ಯಾಂಪಸ್ಗೆ ಸ್ಥಳಾಂತರಗೊಂಡಿದ್ದು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ. ನಗರ ಕ್ಯಾಂಪಸ್ನಲ್ಲಿರುವ ಸುಮಾರು ಇಪ್ಪತ್ತು ವಿಭಾಗಗಳ ವಿದ್ಯಾರ್ಥಿಗಳು ಜ್ಞಾನಸಿರಿಗೆ ಭೇಟಿನೀಡಿ ಸಂಭ್ರಮಪಟ್ಟರು.