ತುಮಕೂರಿನಲ್ಲಿ ರಾಜ್ಯ ಹಿರಿಯರ ಒಲಿಂಪಿಕ್ಸ್​ ಕ್ರೀಡಾಕೂಟ

dvg-dasara-sports-6.jpg
Published on

ತುಮಕೂರು: ಕರ್ನಾಟಕ ರಾಜ್ಯ 2025--&26ನೇ ಸಾಲಿನ ಹಿರಿಯರ ಒಲಿಂಪಿಕ್ಸ್​ ಕ್ರೀಡಾಕೂಟಕ್ಕೆ ತುಮಕೂರು ಜಿಲ್ಲೆ ಆತಿಥ್ಯ ವಹಿಸಲಿರುವ ಹಿನ್ನೆಲೆಯಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾಡಳಿತಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ ಸೂಚಿಸಿದ್ದಾರೆ.

ಸಚಿವರ ಸೂಚನೆ ಹಿನ್ನೆಲೆಯಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ಶುಭಕಲ್ಯಾಣ್​ ಅಧಿಕಾರಿಗಳೊಂದಿಗೆ ನಗರದಲ್ಲಿ ಲಭ್ಯವಿರುವ ವಿವಿಧ ಕ್ರೀಡಾಂಗಣಗಳಿಗೂ ಭೇಟಿ ನೀಡಿ ಯಾವ ಕ್ರೀಡೆಗಳನ್ನು ಯಾವ ಕ್ರೀಡಾಂಗಣದಲ್ಲಿ ಆಯೋಜಿಸಬಹುದು ಎಂಬುದನ್ನು ಪರಿಶೀಲಿಸಿ ಸಲಹೆ ನೀಡಿದರು.

ಬಹು ವರ್ಷಗಳ ನಂತರ ತುಮಕೂರು ಜಿಲ್ಲೆ ಮತ್ತೊಮ್ಮೆ ಕ್ರೀಡಾ ಚಟುವಟಿಕೆಗಳ ಕೇಂದ್ರ ಬಿಂದುವಾಗುತ್ತಿದ್ದು, ಮುಂದಿನ ವರ್ಷ ಜನವರಿ 15 ರಿಂದ 22ರ ವರೆಗೆ ಏಳು ದಿನಗಳ ಕಾಲ ಜಿಲ್ಲೆಯಲ್ಲಿ ರಾಜ್ಯ ಹಿರಿಯರ ಒಲಿಂಪಿಕ್ಸ್​ ಕ್ರೀಡಾಕೂಟ ಆಯೋಜಿಸಲಾಗುತ್ತಿದೆ ಎಂದರು.

ರಾಜ್ಯ ಒಲಿಂಪಿಕ್ಸ್​ ಸಂಸ್ಥೆಯ ಅಧಿಕಾರಿಗಳು ಹಾಗೂ ಆಯೋಜನಾ ಸಮಿತಿಯ ಸದಸ್ಯರು ನಗರದಲ್ಲಿನ ವಿಶ್ವವಿದ್ಯಾಲಯ, ಮಹಾತ್ಮ ಗಾಂಧಿ ಕ್ರೀಡಾಂಗಣ ಸೇರಿದಂತೆ ವಿವಿಧ ಕ್ರೀಡಾಂಗಣಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕ್ರೀಡಾಂಗಣಗಳಲ್ಲಿ ಮೂಲಭೂತ ಸೌಲಭ್ಯಗಳು, ಕ್ರೀಡಾಪಟುಗಳ ವಸತಿ ವ್ಯವಸ್ಥೆ ಹಾಗೂ ಪ್ರೇಕ್ಷಕರ ಸೌಲಭ್ಯಗಳನ್ನೂ ವೀಕ್ಷಿಸಲಾಗಿದೆ ಎಂದರು.

ರಾಜ್ಯ ಹಿರಿಯರ ಒಲಿಂಪಿಕ್ಸ್​ ಕ್ರೀಡಾಕೂಟದಲ್ಲಿ 27 ಕ್ರೀಡೆಗಳಿದ್ದು, ಅದರಲ್ಲಿ 23 ಕ್ರೀಡೆಗಳು ತುಮಕೂರು ಜಿಲ್ಲೆಯ ವಿವಿಧ ಕ್ರೀಡಾಂಗಣಗಳಲ್ಲಿ ನಡೆಯಲಿವೆ. ಉಳಿದ ಕ್ರೀಡೆಗಳು ರಾಜ್ಯ ರಾಜಧಾನಿಯಲ್ಲಿ ಆಯೋಜನೆಗೊಳ್ಳಲಿವೆ. ಕ್ರೀಡಾಕೂಟದ ವೇಳೆ ಅಥ್ಲೆಟಿಕ್ಸ್​, ಕಬಡ್ಡಿ, ವಾಲಿಬಾಲ್​, ಬ್ಯಾಡ್ಮಿಂಟನ್​, ಟೇಬಲ್​ ಟೆನ್ನಿಸ್​, ಸೇರಿದಂತೆ ಅನೇಕ ವಿಭಾಗಗಳಲ್ಲಿ ಹಿರಿಯ ಕ್ರೀಡಾಪಟುಗಳು ಪ್ರತಿಭೆ ಪ್ರದರ್ಶಿಸಲಿದ್ದಾರೆ ಎಂದರು.

ತುಮಕೂರು ಜಿಲ್ಲೆಯ ಕ್ರೀಡಾ ಪರಂಪರೆ, ಉತ್ತಮ ಸೌಲಭ್ಯಗಳು ಮತ್ತು ಸಂಘಟನಾ ಸಾಮರ್ಥ್ಯದಿಂದಾಗಿ ಈ ಮಹತ್ವದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದೆ. ಹಿರಿಯ ಕ್ರೀಡಾಪಟುಗಳ ಶಕ್ತಿಯು ಹಾಗೂ ಉತ್ಸಾಹವು ಯುವ ಪೀಳಿಗೆಗೆ ಪ್ರೇರಣೆಯಾಗಲಿದೆ ಎಂದರು.

ಜಿಪಂ ಸಿಇಒ ಜಿ. ಪ್ರಭು, ಮಹಾನಗರ ಪಾಲಿಕೆ ಆಯುಕ್ತೆ ಬಿ.ವಿ.ಅಶ್ವಿಜ, ಕರ್ನಾಟಕ ಒಲಂಪಿಕ್ಸ್​ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅನಂತರಾಜ್​, ಸದಸ್ಯರಾದ ಶ್ರೀಪ್ರಕಾಶ್​, ದಿಲೀಪ್​, ಶಶಿವರ್ಧನ್​ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net