

ತುಮಕೂರು: ಅಧಿಕಾರಕ್ಕಾಗಿ ಅಲ್ಲ, ಚುನಾವಣೆಗೆ ಸ್ಫರ್ಧಿಸಬೇಕು ಎಂಬ ಕಾರಣಕ್ಕೆ ಕಾಂಗ್ರೆಸ್ ಬಿಟ್ಟು ಅನ್ಯ ಪಕ್ಷಕ್ಕೆ ಪಕ್ಷಾಂತರ ಮಾಡಿದ ನನಗೆ ವೈಯಕ್ತಿಕವಾಗಿ ಮುಜುಗರ ತಂದಿದೆ ಹಾಗಾಗಿ, ಸಾರ್ವಜನಿಕವಾಗಿ ಕ್ಷಮೆ ಕೇಳಲು ಬಯಸುತ್ತೇನೆ ಎಂದು ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಭಾವುಕರಾದರು.
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ಗೆ ವಾಪಸಾದ ಎಸ್‌ಪಿಎಂ, ನನ್ನ ಮಾತೃಪಕ್ಷ ಕಾಂಗ್ರೆಸ್‌ಗೆ ಸೇರ್ಪಡೆಯಾಗುತ್ತಿರುವುದು ಸಮಾಧಾನ ತಂದಿದೆ. ಗೌರವದಿಂದ ಬರಮಾಡಿಕೊಂಡಿರುವ ನಾಯಕರಿಗೆಲ್ಲಾ ನಾನು ಋಣಿ ಎಂದು ಹೇಳಿದರು.
ಮಾಜಿ ಸಂಸದರನ್ನು ಕಾಂಗ್ರೆಸ್ ಮುಖಂಡರೆಲ್ಲರೂ ಒಗ್ಗಟ್ಟಾಗಿಯೇ ಸ್ವಾಗತಿಸಿದ್ದು ತುಮಕೂರು ಜಿಲ್ಲೆಯ ಮುಖಂಡರು ಸೂಚಿಸುವ ಅಭ್ಯರ್ಥಿಯನ್ನೇ ಕಣಕ್ಕಿಳಿಸುವುದಾಗಿ ಸಿಎಂ ಸಿದ್ದರಾಮಯ್ಯ ಘೋಷಿಸಿದರು.
ಕಾಂಗ್ರೆಸ್‌ಗೆ ಜಿಲ್ಲೆಯ ಮಟ್ಟಿಗೆ ಹೈಕಮಾಂಡ್ ಎನ್ನಿಸಿರುವ ಡಾ.ಜಿ.ಪರಮೇಶ್ವರ ಕೂಡ ಎಸ್.ಪಿ.ಮುದ್ದಹನುಮೇಗೌಡ ಅವರೇ ಅಭ್ಯರ್ಥಿಯಾದರೂ ಗೆಲುವಿಗೆ ನಾವೆಲ್ಲರೂ ಪಣತೊಡಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡುವ ಮೂಲಕ ಅಭ್ಯರ್ಥಿಯಾರಾಗಬಹುದು ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.
ಕುಣಿಗಲ್ ಶಾಸಕ ಡಾ.ಎಚ್.ಡಿ.ರಂಗನಾಥ್ ಸಹಿತ ಎಸ್‌ಪಿಎಂ ಆಪ್ತ ಬಳಗದಲ್ಲಿರುವ ಸಚಿವ ಕೆ.ಎನ್.ರಾಜಣ್ಣ, ಎಸ್.ಆರ್.ಶ್ರೀನಿವಾಸ್, ವೆಂಟಕರಮಣಪ್ಪ, ಡಾ.ರಫೀಕ್‌ಅಹ್ಮದ್, ಷಫಿಅಹ್ಮದ್, ಜಿಲ್ಲಾಧ್ಯಕ್ಷ ಚಂದ್ರಶೇಖರಗೌಡ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ತುಮಕೂರು ಕ್ಷೇತ್ರದಲ್ಲಿ ರಣಕಹಳೆ ಮೊಳಗಿಸಿದರು.