

ತುಮಕೂರು: ಶಿರಾ, ಮಧುಗಿರಿ, ಭೈರೇನಹಳ್ಳಿ ವಿಭಾಗದ 52 ಕಿಮೀ ಚತುಷ್ಪಥ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಒಂದು ಸಾವಿರ ಕೋಟಿ ರೂ. ಮೀಸಲಿಟ್ಟಿದೆ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.
ಮಂಗಳವಾರ ದೆಹಲಿಯಲ್ಲಿ ಸಚಿವ ನಿತಿನ್ ಗಡ್ಕರಿ ಭೇಟಿ ಮಾಡಿದ ಸಚಿವ ವಿ.ಸೋಮಣ್ಣ ತುಮಕೂರು ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಚಿವ ಗಡ್ಕರಿ ಅವರೊಂದಿಗೆ ಚರ್ಚಿಸಿದ್ದಾರೆ.
ತುಮಕೂರು-, ಶಿವಮೊಗ್ಗ ಹೆದ್ದಾರಿ 206ರಲ್ಲಿ ತುಮಕೂರು ನಗರ ಹಾಗೂ ಮಲ್ಲಸಂದ್ರದಲ್ಲಿ ಬೈಪಾಸ್ ನಿಮಾರ್ಣದ ಅಗತ್ಯತೆ ಬಗ್ಗೆ ಕೇಂದ್ರ ಭೂಸಾರಿಗೆ ಸಚಿವರ ಜೊತೆ ಚರ್ಚೆ ನಡೆಸಲಾಗಿದ್ದು ಬೈಪಾಸ್ ನಿಮಾರ್ಣ ಮಾಡುವುದರಿಂದ ಸಾರಿಗೆ ದಟ್ಟಣೆ ಹಾಗೂ ಅಪಘಾತಗಳು ಕಡಿಮೆಯಾಗುವ ಬಗ್ಗೆ ವಿವರಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 206ರ ತುಮಕೂರು ನಗರ 12.30 ಕಿಮೀ, ಗುಬ್ಬಿ ಪಟ್ಟಣ 8.5 ಕಿಮೀ ಇಲ್ಲಿ ಸಾರಿಗೆ ದಟ್ಟಣೆ ತಗ್ಗಿಸುವ ಪ್ರಸ್ತಾವನೆಯನ್ನು ಸಚಿವ ನಿತಿನ್ ಗಡ್ಕರಿಯವರ ಮುಂದಿಟ್ಟು ಇದಕ್ಕೂ ಅನುಮೋದನೆ ನೀಡುವಂತೆ ಸಚಿವ ಸೋಮಣ್ಣ ಮನವಿಗೆ ಸ್ಪಂದಿಸಿದ ಭೂಸಾರಿಗೆ ಸಚಿವರು ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.