

ಹಂದನೆಕೆರೆ: ಬೆಂಗಳೂರು ಕೃಷಿ ವಿವಿ, ಐಸಿಎಆರ್ ಕೊನೆಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಚಿಕ್ಕನಾಯಕನಹಳ್ಳಿ ತಾಲೂಕು ಮಟ್ಟದ ಸಿರಿಧಾನ್ಯಗಳ ಪಾಕ ಸ್ಪರ್ಧೆ, ಆಹಾರ ಮೇಳ ಮತಿಘಟ್ಟದಲ್ಲಿ ಆಯೋಜಿಸಲಾಗಿತ್ತು.
ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಗೋವಿಂದಗೌಡ ಮಾತನಾಡಿ, ಸಿರಿಧಾನ್ಯಗಳಿಂದ ಆರೋಗ್ಯಕ್ಕೆ ಸಾಕಷ್ಟು ಅನುಕೂಲತೆಗಳಿದ್ದು ಎಲ್ಲರೂ ಸಿರಿಧಾನ್ಯ ಬೆಳೆದು, ಬಳಸಲು ಉತ್ತೇಜಿಸಲು ಮೇಳ ಆಯೋಜಿಸಲಾಗಿದೆ ಎಂದರು.
ಕೃಷಿ ವಿಸ್ತರಣೆ ಅಧಿಕಾರಿ ಡಾ.ಎಂ.ವಿ.ದರ್ಶನ್ ಮಾತನಾಡಿ, ನಮ್ಮ ರಾಜ್ಯದಲ್ಲಿ ರಾಗಿ, ಸಜ್ಜೆ, ನವಣೆ, ಬರಗು, ಹಾರಕ, ಸಾಮೆ, ಊದಲು, ಕೊರಲೆಯಂತಹ ಸಿರಿಧಾನ್ಯಗಳನ್ನು ಹೆಚ್ಚು ಬಳಸಬೇಕು ಎಂದರು.
ಮೇಳದಲ್ಲಿ 35 ರೈತ ಮಹಿಳೆಯರು: ಸಿರಿಧಾನ್ಯ ಪಾಕ ಸ್ಫರ್ಧೆಯಲ್ಲಿ ತಾಲೂಕಿನ 35ಕ್ಕೂ ಹೆಚ್ಚು ರೈತ ಮಹಿಳೆಯರು ಭಾಗವಹಿಸಿ ತರಹೇವಾರಿ ತಿನಿಸುಗಳನ್ನು ತಯಾರಿಸಿದ್ದರು.
ರಾಗಿ ದೋಸೆ, ರಾಗಿ ಶಾವಿಗೆ, ರಾಗಿ ಹಲ್ವ, ರಾಗಿ ಲಡ್ಡು, ರಾಗಿ ಉಪ್ಪಿಟ್ಟು, ರಾಗಿ ಹುರಿಹಿಟ್ಟು, ರಾಗಿ ಪಡ್ಡು, ರಾಗಿ ಇಡ್ಲಿ, ರಾಗಿ ಪಕೋಡ, ರಾಗಿ ಹಾಲಬಾಯಿ, ರಾಗಿ ಮಿಟಾಯಿ, ಹಾರಕದ ಖಾರ, ಹಾರಕ ಲಡ್ಡು, ಸಿರಿಧಾನ್ಯಗಳ, ಹಪ್ಪಳ, ನವಣೆ ಚಕ್ಕುಲಿ, ನವಣೆ ಪಾಯಸ, ನವಣೆ ಪಲಾವ್, ಸಾಮೆ, ಲಡ್ಡು ಗಮನಸೆಳೆದವು.
ಕಾರ್ಯಕ್ರಮದಲ್ಲಿ ನಬಾರ್ಡ್ ಡಿಡಿಎಂ ಕೀರ್ತಿಪ್ರಭಾ, ಎನ್‌ಆರ್‌ಎಲ್‌ಎಂ ಅಧ್ಯಕ್ಷ ಗೌರಮ್ಮ, ಸಿಬ್ಬಂದಿಗಳಾದ ರಂಗಮ್ಮ, ಲಕ್ಷ್ಮೀಕಾಂತ, ರೈತ ಮುಖಂಡರಾದ ಗಂಗಾಧರಯ್ಯ ಮತ್ತಿತರರು ಇದ್ದರು.