ಪ್ರತಿಷ್ಠಿತ `ಸಿದ್ಧಗಂಗಾಶ್ರೀ' ಪ್ರಶಸ್ತಿಗೆ ಇಸ್ರೋ ಮಾಜಿ ಅಧ್ಯಕ್ಷ ಕಿರಣ್‌ಕುಮಾರ್ ಆಯ್ಕೆ

AS Kiran Kumar Former Chairman-ISRO
Published on

ತುಮಕೂರು: ಶ್ರೀಸಿದ್ಧಗಂಗಾ ಮಠದ ಹಳೆಯ ವಿದ್ಯಾರ್ಥಿಗಳ ಹಾಗೂ ಹಿತೈಷಿಗಳ ಸಂಘದ ವತಿಯಿಂದ ಕೊಡಮಾಡುವ ಪ್ರತಿಷ್ಠಿತ 2022-23ನೇ ಸಾಲಿನ ಸಿದ್ಧಗಂಗಾಶ್ರೀ ಪ್ರಶಸ್ತಿಗೆ ಶ್ರೇಷ್ಠ ಭೌತವಿಜ್ಞಾನಿ ಹಾಗೂ ಭಾರತೀಯ ಅಂತರಿಕ್ಷ ಸಂಶೋಧನ ಸಂಸ್ಥೆ (ಇಸ್ರೋ) ಮಾಜಿ ಅಧ್ಯಕ್ಷ ಎ.ಎಸ್.ಕಿರಣ್‌ಕುಮಾರ್ ಅವರನ್ನು ಆಯ್ಕೆ ಮಾಡಲಾಗಿದೆ.

ವಿಜ್ಞಾನ ಕ್ಷೇತ್ರದಲ್ಲಿ ಅನನ್ಯ ಸೇವೆಯನ್ನು ಸಲ್ಲಿಸಿದ ಎ.ಎಸ್.ಕಿರಣ್‌ಕುಮಾರ್ ಅವರ ಜೀವಮಾನ ಸಾಧನೆಯನ್ನು ಗುರುತಿಸಿ ಪ್ರಶಸ್ತಿ ನೀಡಲಾಗುತ್ತಿದೆ. ಪ್ರಶಸ್ತಿ 1 ಲಕ್ಷ ರೂ. ನಗದು, ಅಭಿನಂದನಾ ಪತ್ರ ಹಾಗೂ ಸ್ಮರಿಣಿಕೆ ಒಳಗೊಂಡಿದೆ.

ಜತೆಗೆ ಪೂಜ್ಯ ಶ್ರೀಗಳ ಹೆಸರಿನ `ಸಿದ್ಧಗಂಗಾ ಶಿವಕುಮಾರಶ್ರೀ' ಪ್ರಶಸ್ತಿಯನ್ನು ಸಾಹಿತ್ಯ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿನ ಸೇವೆ ಗುರುತಿಸಿ ದಾವಣಗೆರೆ ಸಿದ್ಧಗಂಗಾ ವಿದ್ಯಾಸಂಸ್ಥೆಯ ಮುಖ್ಯಸ್ಥರಾದ ಜಸ್ಟಿನ್ ಡಿ'ಸೀಜಾ ಹಾಗೂ ಹಿರಿಯ ಜನಪ ವಿದ್ವಾಂಸ ಬೆಂಗಳೂರಿನ ಡಾ.ಬಿ.ಎಸ್.ಸ್ವಾಮಿ ಅವರಿಗೆ ನೀಡಲಾಗುತ್ತಿದೆ, ಪ್ರಶಸ್ತಿ 15 ಸಾವಿರ ರೂ. ನಗದು ಅಭಿನಂದನಾ ಪತ್ರ ಹಾಗೂ ಸ್ಮರಿಣಿಕೆ ಒಳಗೊಂಡಿದೆ.

ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ನೀಡಲಾಗುವ `ಸಂಘಸಿರಿ' ಪ್ರಶಸ್ತಿಗೆ ನಾಲ್ವರು ಗಣ್ಯರನ್ನು ಆಯ್ಕೆ ಮಾಡಲಾಗಿದೆ. ಹಾಸನದ ಸುಶೀಲ ಸೋಮಶೇಖರ್, ಮೈಸೂರಿನ ಡಾ.ವಚನ ಕುಮಾರಸ್ವಾಮಿ, ಬೆಂಗಳೂರಿನ ಉದ್ಯಮಿ ಎ.ನಂಜಪ್ಪ ಮತ್ತು ಪ್ರಗತಿ ಪರ ರೈತ ಹೊಸಕೋಟೆಯ ಟಿ.ಮಂಜುನಾಥ್ ಅವರನ್ನು ಆಯ್ಕೆಮಾಡಲಾಗಿದೆ.

ಸಿದ್ಧಗಂಗಾ ಮಠದಲ್ಲಿ ಡಿ.17ರಂದು ಶ್ರೀಸಿದ್ಧಲಿಂಗಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ಜರುಗುವ ಹಳೆಯ ವಿದ್ಯಾರ್ಥಿಗಳ ಹಾಗೂ ಹಿತೈಷಿಗಳ ಸಂಘದ 67ನೇ ಸರ್ವಸದಸ್ಯರ ವಾರ್ಷಿಕ ಮಹಾಧಿವೇಶನದಲ್ಲಿ ಪ್ರಶಸ್ತಿ ಪ್ರದಾನ ಮಾಡುತ್ತಿದೆ.
ಕೆ.ಎಚ್.ಶಿವರುದ್ರಯ್ಯ
ಕಾರ್ಯದರ್ಶಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net