

ತುಮಕೂರು: ನಗರದ ಶೆಟ್ಟಿಹಳ್ಳಿ ಗೇಟ್ ಅಂಡರ್ ಪಾಸ್ ಸುತ್ತಮುತ್ತಲ ಪ್ರದೇಶಗಳ ನಿವಾಸಿಗಳು ರೈಲ್ವೆ ಹಳಿ ದಾಟಿ ಮತ್ತೊಂದು ಪ್ರದೇಶಕ್ಕೆ ಹೋಗಿಬರಲು ತೊಂದರೆಯಾಗಿದ್ದು ಶೀಘ್ರದಲ್ಲಿಯೇ ಪಾದಚಾರಿ ಮಾರ್ಗ ನಿರ್ಮಾಣ ಮಾಡಲಾಗುವುದು ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ಭರವಸೆ ನೀಡಿದರು.
ಸ್ಥಳಕ್ಕೆ ಭೇಟಿ ನೀಡಿ ಸಾರ್ವಜನಿಕರಿಂದ ಸಮಸ್ಯೆ ಆಲಿಸಿದ ಅವರು, ಅಧಿಕಾರಿಗಳೊಂದಿಗೆ ಚರ್ಚಿಸಿ ಈ ಪ್ರದೇಶದಲ್ಲಿ ತಾಂತ್ರಿಕವಾಗಿ ಸೂಕ್ತವಾದ ಜಾಗದಲ್ಲಿ ಪಾದಚಾರಿಗಳ ಸಂಚಾರಕ್ಕಾಗಿ ಅಂಡರ್‌ಪಾಸ್ ನಿರ್ಮಾಣ ಮಾಡಲು ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದರು.
ಅಂಡರ್ ಪಾಸ್‌ನಲ್ಲಿ ವಾಹನ ಸಂಚಾರದ ಒತ್ತಡವಿದೆ, ಇಲ್ಲಿ ಪಾದಚಾರಿಗಳು ಸುರಕ್ಷಿತವಾಗಿ ಸಂಚರಿಸಲಾಗುತ್ತಿಲ್ಲ. ಶಾಲಾ ಮಕ್ಕಳು, ವಯೋವೃದ್ಧರು ಅಂಡರ್‌ಪಾಸ್‌ನಲ್ಲಿ ಓಡಾಡಲಾಗುತ್ತಿಲ್ಲ. ಹೀಗಾಗಿ ದೈನಂದಿನ ಕೆಲಸಕಾರ್ಯಗಳಿಗೆ ರೈಲ್ವೆಹಳಿ ದಾಟಿ ಇನ್ನೊಂದು ಭಾಗಕ್ಕೆ ಹೋಗಿಬರುವುದು ತೊಂದರೆಯಾಗಿದೆ ಎಂದು ನಾಗರೀಕರು ಶಾಸಕರಲ್ಲಿ ಸಮಸ್ಯೆ ಹೇಳಿಕೊಂಡರು.
ರೈಲ್ವೆ ಇಲಾಖೆ ಹಾಗೂ ನಗರ ಪಾಲಿಕೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಈ ಭಾಗದ ಸೂಕ್ತವಾದ ಸ್ಥಳದಲ್ಲಿ ಉಪ್ಪಾರಹಳ್ಳಿ ಮೇಲ್ಸೇತುವೆ ಬಳಿ ನಿರ್ಮಿಸಿರುವ ಅಂಡರ್‌ಪಾಸ್ ಮಾದರಿಯಲ್ಲಿ ಇಲ್ಲಿಯೂ ಪಾದಚಾರಿ ಮಾರ್ಗ ನಿರ್ಮಾಣ ಮಾಡಲು ಕ್ರಮ ತೆಗೆದುಕೊಳ್ಳುವುದಾಗಿ ಶಾಸಕರು ಹೇಳಿದರು.
ಅಂಡರ್‌ಪಾಸ್‌ನಲ್ಲಿರುವ ಫುತ್‌ಪಾತ್ ಸುಸಜ್ಜಿತಗೊಳಿಸಿ ಗ್ರಿಲ್ ಅಳವಡಿಸಿ, ಪಾದಚಾರಿಗಳು ಸುರಕ್ಷಿತವಾಗಿ ಓಡಾಡಲು ಅನುಕೂಲ ಮಾಡಿಕೊಡುವುದಾಗಿಯೂ ಶಾಸಕ ಜ್ಯೋತಿಗಣೇಶ್ ಭರವಸೆ ನೀಡಿದರು.
ನಗರ ಪಾಲಿಕೆ ಮಾಜಿ ಸದಸ್ಯರಾದ ವಿಷ್ಣುವರ್ಧನ್, ಸಿ.ಎನ್.ರಮೇಶ್, ಮಲ್ಲಿಕಾರ್ಜುನ್, ಮುಖಂಡರಾದ ದೇವರಾಜು, ದೊಡ್ಡಯ್ಯ, ಶೈಲಾ ನಾಗರಾಜು, ಮರಳಿ, ಪುಟ್ಟರಾಜು, ಮೂರ್ತಿ, ಹೆಚ್‌ಎಂಎಸ್ ಕುಮಾರ್, ಹೆಚ್‌ಎಂಟಿ ಜಗದೀಶ್, ಚಂದ್ರಶೇಖರ್, ನಗರಪಾಲಿಕೆ ಕಾರ್ಯಪಾಲಕ ಇಂಜಿನಿಯರ್ ವಿನಯ್ ಇದ್ದರು.