

ತುಮಕೂರು: ಟಿಕೆಟ್ ಘೋಷಣೆಯ ನಂತರ ಜಿಲ್ಲೆಯೆಲ್ಲೆಡೆ ಉಂಟಾಗಿರುವ ಡ್ಯಾಮೇಜ್ ಕಂಟ್ರೋಲ್‌ಗೆ ಮುಂದಾಗಿರುವ ಕಾಂಗ್ರೆಸ್ ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಕಾಡುಗೊಲ್ಲ ಅಭ್ಯರ್ಥಿಗೆ ಟಿಕೆಟ್ ನೀಡುವುದು ಖಚಿತವಾಗಿದೆ.
ಕಾಡುಗೊಲ್ಲ ಸಮುದಾಯದ ನಿವೃತ್ತ ಇಂಜಿನಿಯರ್ ಟಿ.ಎಚ್.ಷಷ್ಮುಖಪ್ಪಗೆ ಟಿಕೆಟ್ ಖಚಿತವಾಗಿದ್ದು ಶೀಘ್ರದಲ್ಲಿಯೇ ಬಿಡುಗಡೆಯಾಗಲಿರುವ ಅಂತಿಮ ಪಟ್ಟಿಯಲ್ಲಿ ಹೆಸರು ಇರಲಿದೆ ಎನ್ನಲಾಗಿದೆ.
ಹೊಳಲ್ಕೆರೆ ಮೂಲದ 65 ವರ್ಷದ ಟಿ.ಎಚ್.ಷಷ್ಮುಖಪ್ಪ ನಿವೃತ್ತಿಯ ನಂತರ ತುಮಕೂರಿನಲ್ಲಿಯೇ ವಾಸವಿದ್ದಾರೆ. ಕಳೆದೈದು ವರ್ಷದಿಂದ ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡಿರುವ ಇವರನ್ನು ಕಾಂಗ್ರೆಸ್ ವರಿಷ್ಠ ಡಾ.ಜಿ.ಪರಮೇಶ್ವರ್ ಗುರುತಿಸಿ ಟಿಕೆಟ್ ಕೊಡಿಸುತ್ತಿದ್ದಾರೆ ಎನ್ನಲಾಗಿದೆ.
ಕಾಡುಗೊಲ್ಲರು ಗೆಲ್ಲಲು ಅವಕಾಶವಿರುವ ಶಿರಾ ಕ್ಷೇತ್ರದಲ್ಲಿ ಟಿಕೆಟ್‌ಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಾ.ಸಾಸಲು ಸತೀಶ್ ಅರ್ಜಿ ಸಲ್ಲಿಸಿದ್ದರು. ಆದರೆ, ಟಿಕೆಟ್ ನೀಡದ ಕಾಂಗ್ರೆಸ್ ವಿರುದ್ಧ ವ್ಯಕ್ತವಾಗಿದ್ದ ಕಾಡುಗೊಲ್ಲರ ಆಕ್ರೊಶವನ್ನು ತಣಿಸಲು ಪಕ್ಷಕ್ಕೆ ಶಕ್ತಿಯೇ ಇಲ್ಲದ ತುಮಕೂರು ಗ್ರಾಮಾಂತರದಲ್ಲಿ ಟಿಕೆಟ್ ಕೊಟ್ಟು ಕೈತೊಳೆದುಕೊಳ್ಳಲು ಮಾಸ್ಟರ್‌ಪ್ಲಾನ್ ಕಾಂಗ್ರೆಸ್ ರೂಪಿಸಿದೆ.