

ತುಮಕೂರು: ತುಮಕೂರು ಜಿಲ್ಲೆಯ ವ್ಯಾಪಕ ವಿರೋಧದ ನಡುವೆಯೂ ರಾಮನಗರ ಜಿಲ್ಲೆಗೆ ಪೈಪ್‌ಲೈನ್ ಮೂಲಕ ಹೇಮಾವತಿ ನೀರು ತೆಗೆದುಕೊಂಡು ಹೋಗುವ `ಲಿಂಕ್‌ಕೆನಾಲ್'ಕಾಮಗಾರಿಗೆ ಇಂದು ಅಧಿಕೃತ ಚಾಲನೆ ಸಿಗಲಿದೆ.
ರಾಮನಗರ ಜಿಲ್ಲೆಯ ಪಾಲಿನ ಹೇಮಾವತಿ ನೀರನ್ನು ಸ್ವಾಭಾವಿಕವಾಗಿಯೇ ಚಾನಲ್ ಮೂಲಕ ತೆಗೆದುಕೊಂಡು ಹೋಗಬೇಕು ಎಂಬ ಜಿಲ್ಲೆಯ ಜನರ ಮನವಿಗೆ ಸೊಪ್ಪುಹಾಕದ ಡಿಸಿಎಂ ಡಿ.ಕೆ.ಶಿವಕುಮಾರ್ ಬರೋಬ್ಬರಿ 986 ಕೋಟಿ ರೂ. ವೆಚ್ಚದ ಕಾಮಗಾರಿಗೆ ಕ್ಯಾಬಿನೆಟ್‌ನಲ್ಲಿ ಅನುಮತಿ ಪಡೆದು ಶುಂಕುಸ್ಥಾಪನೆಗೆ ಮುಂದಾಗಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ, ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್, ಟಿ.ಬಿ.ಜಯಚಂದ್ರ ಸೇರಿದಂತೆ ಎಲ್ಲಾ ಮುಖಂಡರ ಮನವಿಗೂ ಸೊಪ್ಪು ಹಾಕದ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹಠವಿಡಿದು ಯೋಜನೆಗೆ ಸಚಿವ ಸಂಪುಟದ ಒಪ್ಪಿಗೆ ಪಡೆದಿದ್ದಾರೆ.
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ಲಾಭ ಪಡೆಯಲು ಡಿ.ಕೆ.ಸಹೋದರರು ಕಾಮಗಾರಿ ಆರಂಭದ ಸಮಾರಂಭವನ್ನು ಅದ್ಧೂರಿಯಾಗಿಯೇ ಆಯೋಜಿಸಿದ್ದ ಇಂದು ಕುಣಿಗಲ್ ಪಟ್ಟಣದಲ್ಲಿ ಖುದ್ದು ಸಿಎಂ ಸಿದ್ದರಾಮಯ್ಯನವರೇ ಲಿಂಕ್ ಕೆನಾಲ್ ಸೇರಿದಂತೆ ವಿವಿಧ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ.
ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಆಡಳಿತಾತ್ಮಕ ಅನಮೋದನೆ ನೀಡಿದ್ದ ಹೇಮಾವತಿ ಎಕ್ಸ್ಪ್ರೆಸ್ ಕೆನಾಲ್ ಯೋಜನೆಯನ್ನು ಬಿಎಸ್‌ವೈ ನೇತೃತ್ವದ ಬಿಜೆಪಿ ಸರ್ಕಾರ 2019ರಲ್ಲಿ ರದ್ದುಗೊಳಿಸಿತ್ತು.
ಅನಿರೀಕ್ಷಿತ ರಾಜಕೀಯ ಬೆಳವಣಿಗೆಯಲ್ಲಿ ಜೆ.ಸಿ.ಮಾಧುಸ್ವಾಮಿ ಕಾನೂನು ಸಚಿವರಾದ ಹಿನ್ನೆಲೆಯಲ್ಲಿ ರಾಮನಗರಕ್ಕೆ ಕೊಂಡೊಯ್ಯುವ ಡಿ.ಕೆ.ಶಿವಕುಮಾರ್ ಹಾಗೂ ಸಂಸದ ಡಿ.ಕೆ.ಸುರೇಶ್ ಮಹತ್ವಾಕಾಂಕ್ಷೆಗೆ ಬ್ರೇಕ್ ಬಿದ್ದಿತ್ತು.
ಪರಮೇಶ್ವರ್ ಕೂಡ ಡಿಸಿಎಂ ಆಗಿದ್ದಾಗ ಎಕ್ಸ್ಪ್ರೆಸ್ ಕೆನಾಲ್‌ಗೆ ಜಿಲ್ಲೆಯ ಎಲ್ಲಾ ಶಾಸಕರು ವಿರೋಧವ್ಯಕ್ತಪಡಿಸಿದ್ದರು. ಹಾಗಾಗಿ, ಈ ಯೋಜನೆ ಕೈಬಿಟ್ಟು ಅದಕ್ಕೆ ನಿಗದಿಯಾಗಿದ್ದ 614 ಕೋ.ರೂ., ಹಾಗೂ ಹೇಮೆ ನಾಲಾ ಆಧುನೀಕರಣಕ್ಕೆ ನಿಗದಿಯಾಗಿದ್ದ 400 ಕೋಟಿ ರೂ., ಹಣವನ್ನು ಗೆ ನಿಗದಿಯಾಗಿದ್ದ ಒಟ್ಟು 1014 ಕೋ.ರೂ., ಹಣವನ್ನು ಸಂಪುಟಸಭೆಗೆ ತಂದು ತುಮಕೂರು ಶಾಖಾ ನಾಲೆ ಆಧುನೀಕರಣ ಹಾಗೂ ಅಭಿವೃದ್ಧಿಗೆ ಬಳಸಿಕೊಳ್ಳಲು ನಿರ್ಧರಿಸಲಾಗಿತ್ತು. ಆದರೆ, ಇದೇ ಪರಮೇಶ್ವರ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಸಂದರ್ಭದಲ್ಲಿ ಜಿಲ್ಲೆಯ ರೈತರ ಪಾಲಿಗೆ ಮರಣ ಶಾಸನವಾಗಲಿದೆ ಎಂಬ ಈ ಯೋಜನೆಗೆ ಒಪ್ಪಿಗೆ ಸಿಕ್ಕಿದೆ.
ಹೇಮಾವತಿ ನೀರು ಹಂಚಿಕೆಯಲ್ಲಿ ಜಿಲ್ಲೆಯ ಪಾಲಿನ ನೀರು 25 ಟಿಎಂಸಿ ಪಡೆಯಲು ಅಡ್ಡಿಯಾಗಬಹುದಾದ ಈ ಬಿಳೆಯಾನೆಯಂತಾಗಿರುವ ಎಕ್ಸ್ಪ್ರೆಸ್ ಕೆನಾಲ್ ಯೋಜನೆ ರೈತರ ಪಾಲಿಗೆ ಮರಣ ಶಾಸನವಾದರೂ ಅಚ್ಚರಿಯಿಲ್ಲ.
ಈ ಯೋಜನೆಗೆ ಆರಂಭದಿAದಲೂ ವಿರೋಧವಿದ್ದು ಜಿಲ್ಲೆಯ ಜನಪ್ರತಿನಿಧಿಗಳು ಮೌನಕ್ಕೆ ಶರಣಾಗಿರುವ ಅಚ್ಚರಿ ಮೂಡಿಸಿದೆ. ಸಚಿವರಾದ ಡಾ.ಜಿ.ಪರಮೇಶ್ವರ, ಕೆ.ಎನ್.ರಾಜಣ್ಣ, ಸಂಸದ ಜಿ.ಎಸ್.ಬಸವರಾಜು, ಹಿರಿಯ ಶಾಸಕರಾದ ಟಿ.ಬಿ.ಜಯಚಂದ್ರ, ಎಸ್.ಆರ್.ಶ್ರೀನಿವಾಸ್, ಎಂ.ಟಿ.ಕೃಷ್ಣಪ್ಪ, ಕೆ.ಷಡಕ್ಷರಿ ಸಹಿತ ಯಾರೊಬ್ಬರೂ ಯೋಜನೆಯನ್ನು ವಿರೋಧಿಸದಿರುವುದು ರೈತರ ಆತಂಕ ಹೆಚ್ಚಿಸಿದೆ.