ಜಿಲ್ಲಾಧಿಕಾರಿ ಕಚೇರಿ ಮುಂದೆ ತೆಂಗು ಬೆಳೆಗಾರರ ಅಹೋರಾತ್ರಿ ಧರಣಿ

RRR
Published on

ತುಮಕೂರು: ಕೊಬ್ಬರಿ ಬೆಲೆ ಭಾರಿ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಆತಂಕಗೊAಡಿರುವ ರೈತ ಸಮುದಾಯ ಮೈಚಳಿ ಬಿಟ್ಟು ಬೀದಿಗಿಳಿದಿದೆ. ನಗರದ ಬಿಜಿಎಸ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೂ ಮೆರವಣಿಗೆ ನಡೆಸಿ ಆಹೋರಾತ್ರಿ ಧರಣಿ ಆರಂಭಿಸಿದೆ.

ಲೋಕಸಭಾ ಚುನಾವಣಾ ಹೊಸ್ತಿನಲ್ಲಿಯಾದರೂ ಕೊಬ್ಬರಿ ಬೆಲೆ ಕನಿಷ್ಟ ಬೆಂಬಲ 15ಸಾವಿರಕ್ಕೆ ಹೆಚ್ಚಿಸಬಹುದು ಎಂಬ ಕೇಂದ್ರ ಸರ್ಕಾರದ ಮೇಲಿನ ಭರವಸೆ ಹುಸಿಯಾಗಿದೆ. ಕೊಟ್ಟ 12 ಸಾವಿರ ರೂ.ಗೆ ಕೊಂಡುಕೊಳ್ಳಲು ರಾಜ್ಯ ಸರ್ಕಾರ ಮೀನಾಮೇಷ ಎಣಿಸುತ್ತಿರುವುದು ರೈತರ ಆತಂಕ ಹೆಚ್ಚಿಸಿದೆ.

ಜಿಲ್ಲೆಯ ವಿವಿಧೆಡೆಗಳಿಂದ ಆಗಮಿಸಿದ್ದ ನೂರಾರು ರೈತರು ಸೋಮವಾರ ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿಯಲ್ಲಿ ಭಾಗವಹಿಸಿದ್ದು ಸರ್ಕಾರಕ್ಕೆ ಬಿಸಿಮುಟ್ಟಿಸಲಿದ್ದಾರೆ.

ಕೊಬ್ಬರಿ ಬೆಲೆಯಲ್ಲಿ ಭಾರಿ ಕುಸಿತ ಉಂಟಾಗಿದ್ದು ಸಂಕಷ್ಟದಲ್ಲಿರುವ ರೈತರ ನೆರವಿಗೆ ಸರ್ಕಾರ ಕೂಡಲೇ ಬರಬೇಕು. ಕೊಬ್ಬರಿಗೆ ಕನಿಷ್ಟ ಮೂರು ಸಾವಿರ ಪ್ರೋತ್ಸಾಹಧನ ನೀಡಿ ಕೂಡಲೇ ಖರೀದಿಸಬೇಕು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಉಪಾಧ್ಯಕ್ಷ ಕೆಂಕೆರೆ ಸತೀಶ್ ಆಗ್ರಹಿಸಿದರು.

ಕೇಂದ್ರ ಸರ್ಕಾರ ಈಗಾಗಲೇ ನಿಗದಿಗೊಳಿಸಿರುವ 12 ಸಾವಿರ ರೂ. ಎಂಎಸ್‌ಪಿ ಜತೆಗೆ ರಾಜ್ಯ ಸರ್ಕಾರ 3 ಸಾವಿರ ರೂ. ಸೇರಿಸಿ ನಾಪೆಡ್ ಮೂಲಕ ಕೊಬ್ಬರಿ ಖರೀದಿಸಬೇಕು, ಖರೀದಿ ಕೇಂದ್ರ ಆರಂಭಿಸುವರೆಗೂ ಧರಣಿ ನಡೆಯಲಿದೆ ಎಂದರು.

ರೈತರು, ಕಾರ್ಮಿಕರು, ಸೈನಿಕರು ಉಳಿದರೆ ಮಾತ್ರ ದೇಶದ ಅಭಿವೃದ್ಧಿ. ಹೀಗಿರುವಾಗ ಸರ್ಕಾರಗಳು ರೈತರನ್ನು ಕಡೆಗಣಿಸುತ್ತಲೇ ಬರುತ್ತಿವೆ. ಕೊಬ್ಬರಿಗೆ ಬೆಂಬಲ ಬೆಲೆ ಹೆಚ್ಚು ಮಾಡಬೇಕು ಎಂದು ನಿರಂತರವಾಗಿ ಹೋರಾಟ ಮಾಡುತ್ತಿದ್ದರೂ ಸರ್ಕಾರಗಳು ಸಕಾರಾತ್ಮಕವಾಗಿ ಸ್ಪಂದಿಸಲಿಲ್ಲ. ಸಮರ್ಪಕ ನಿರ್ಧಾರ ಪ್ರಕಟಿಸುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದರು.

ವಿದೇಶಗಳಿAದ ಕೊಬ್ಬರಿ ಎಣ್ಣೆ ಹಾಗೂ ಪೌಡರ್ ಆಮದು ನಿಲ್ಲಿಸದ ಕಾರಣ ಕೊಬ್ಬರಿ ಬೆಲೆ ಕುಸಿಯಲು ಕಾರಣವಾಗಿದೆ. ಸರ್ಕಾರಗಳಿಗೆ ತೆಂಗು ಬೆಳೆಗಾರರ ಹಿತಕಾಯುವ ಕಾಳಜಿಯಿಲ್ಲ ಎಂದು ಹರಿಹಾಯ್ದರು.

ಅರಸಿಕೆರೆಯಿಂದ ಬೆಂಗಳೂರಿಗೆ ಪಾದಯಾತ್ರೆ ಮಾಡಿ ತೆಂಗು ಬೆಳೆಗಾರರು ಸಿಎಂಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ತೆಂಗು ಬೆಳೆಗಾರರ ಪರವಾಗಿ ಜಿಲ್ಲೆಯ ಯಾವೊಬ್ಬ ಶಾಸಕರೂ ಅಧಿವೇಶನದಲ್ಲಿ ದನಿ ಎತ್ತಲಿಲ್ಲ ಎಂದರು.

ಜಿಲ್ಲಾಧ್ಯಕ್ಷ ಕೆ.ಎಸ್.ಧನಂಜಯಾರಾಧ್ಯ ಮಾತನಾಡಿ, ಕೊಬ್ಬರಿಗೆ ವೈಜ್ಞಾನಿಕ ಬೆಲೆ ನಿಗದಿಮಾಡಿ ಸರ್ಕಾರ ಖರೀದಿ ಮಾಡಿ ತೆಂಗು ಬೆಳೆಗಾರರಿಗೆ ನ್ಯಾಯ ಒದಗಿಸದಿದ್ದರೆ ಆಹೋರಾತ್ರಿ ಧರಣಿ ಸತ್ಯಾಗ್ರಹ ಮಡುವುದಾಗಿ ಎಚ್ಚರಿಕೆ ನೀಡಿದರು.

ಕೊಬ್ಬರಿ ಕನಿಷ್ಟ ಬೆಂಬಲ ಬೆಲೆಯನ್ನು ಕೇವಲ 250 ರೂ. ಹೆಚ್ಚಿಸಿ 12 ಸಾವಿರ ರೂ. ನೀಡಿರುವುದು ತೆಂಗು ಬೆಳೆಗಾರರಿಗೆ ಯಾವುದೇ ಪ್ರಯೋಜನವಾಗಿಲ್ಲ. ಈಗ ಎಲ್ಲಾ ದಿನಬಳಕೆ ಪದಾರ್ಥಗಳ ಬೆಲೆ ಶೇ.30ರಷ್ಟು ಹೆಚ್ಚಾಗಿದೆ. ಹೀಗಿರುವಾಗ ಅದೇ ಪ್ರಮಾಣದಲ್ಲಿ ಕೊಬ್ಬರಿಗೂ ಬೆಲೆ ಹೆಚ್ಚಿಸಿದರೆ ಕ್ವಿಂಟಾಲ್‌ಗೆ 16 ಸಾವಿರ ರೂ. ನೀಡಬೇಕು ಎಂದರು.

ರೈತ ಸಂಘದ ಜಿಲ್ಲಾ ಗೌರವಾಧ್ಯಕ್ಷ ಕೆ.ವಿ.ಲೋಕೇಶ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಶಿವರತ್ನಮ್ಮ, ಮುಖಂಡರಾದ ಸಣ್ಣದ್ಯಾಮೇಗೌಡ, ಮಲ್ಲಿಕಾರ್ಜುನಯ್ಯ, ಸಿದ್ದರಾಜು, ಸರ್ವಮಂಗಳ, ಶಾಂತಕ್ಕ, ದೇವಮ್ಮ, ರೇಣುಕಮ್ಮ, ನಾಗೇಂದ್ರ, ರಾಜಣ್ಣ ಮೊದಲಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net