

ತುಮಕೂರು: ತುಮಕೂರು ನಗರದ ರೈಲ್ವೆ ನಿಲ್ದಾಣಕ್ಕೆ ದಿಢೀರ್ ಭೇಟಿಕೊಟ್ಟ ರೈಲ್ವೆ ಸಚಿವ ವಿ.ಸೋಮಣ್ಣಗೆ ಮೂಲಭೂತ ಸೌಕರ್ಯಗಳ ಕೊರತೆ ದರ್ಶನವಾಗಿದೆ.
ನಿಲ್ದಾಣದ ಶೌಚಾಲಯದ ದುರ್ವಾಸನೆ, ದುಸ್ಥಿತಿ ಪರಿಸ್ಥಿತಿ ಕಂಡ ಸಚಿವ ಸೋಮಣ್ಣ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು.
ಸಚಿವರ ಕ್ಷೇತ್ರದ ನಿಲ್ದಾಣದಲ್ಲಿಯೇ ಈ ಸ್ಥಿತಯಾದರೆ ಗತಿಯೇನು, ಶೌಚಾಲಯವನ್ನು ಸ್ವಚ್ಛವಾಗಿಡಬೇಕು, ತುಮಕೂರು ಬಗ್ಗೆ ಅಭಿಮಾನ ಮೂಡುವಂತೆ ರೈಲ್ವೆ ನಿಲ್ದಾಣದಲ್ಲಿ ಉತ್ತಮ ವಾತಾವರಣ ಕಲ್ಪಿಸಿ, ಸ್ವಚ್ಛತೆ ಕಾಪಾಡಬೇಕು ಎಂದು ಹೇಳಿದರು.
ನಗರದಿಂದ ಬೆಂಗಳೂರಿಗೆ ಹೆಚ್ಚುವರಿ ರೈಲು ಹಾಗೂ ಹೆಚ್ಚುವರಿ ಜನರಲ್ ಬೋಗಿಗಳ ವ್ಯವಸ್ಥೆ ಮಾಡುವುದೂ ಸೇರಿದಂತೆ ವಿವಿಧ ಬೇಡಿಕೆಗಳ ಬಗ್ಗೆ ರೈಲ್ವೆ ಪ್ರಯಾಣಿಕರ ವೇದಿಕೆ ಪದಾಧಿಕಾರಿಗಳು ಸಚಿವರಿಗೆ ಮನವಿ ಮಾಡಿದರು.
ರೈಲ್ವೆ ಇಲಾಖೆಯಿಂದ ನಗರ ವ್ಯಾಪ್ತಿಯಲ್ಲಿ ರೈಲ್ವೆ ಹಳಿಯ ಎರಡೂ ಕಡೆ ತಡೆಗೋಡೆ ನಿರ್ಮಿಸಲಾಗುತ್ತಿದೆ. ಇದರಿಂದ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ನಾಗರೀಕರು ಹಳಿ ದಾಟಿ ಹೋಗಲು ತೊಂದರೆಯಾಗಿದೆ ಎಂದು ಅಳಲು ತೋಡಿಕೊಂಡರು.
ಶಾಂತಿ ನಗರ ಸುತ್ತಮುತ್ತಲ ನಿವಾಸಿಗಳು ತಮ್ಮ ದಿನನಿತ್ಯದ ವ್ಯವಹಾರಗಳಿಗೆ ದೂರದ ರಸ್ತೆಯಲ್ಲಿ ಬಳಸಿಕೊಂಡು ಓಡಾಡುವಂತಾಗಿದೆ. ಈ ಭಾಗದಲ್ಲಿ ರೈಲ್ವೆ ಅಂಡರ್ ಪಾಸ್ ಅಥವಾ ಸ್ಕೆÊವಾಕರ್ ನಿರ್ಮಾಣ ಮಾಡಿ ಪಾದಚಾರಿಗಳ ಓಡಾಟಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ರೈಲ್ವೆ ನಿಲ್ದಾಣದಲ್ಲಿ ಒಳಚರಂಡಿ ಸಮಸ್ಯೆಯಿದ್ದು ಪ್ರಯಾಣಿಕರು ದುರ್ವಾಸನೆಯಿಂದ ಪ್ರಯಾಣಿಕರು ಯಾತನೆ ಅನುಭವಿಸುವಂತಾಗಿದೆ. ಈ ಸಮಸ್ಯೆ ನಿವಾರಿಸಬೇಕು. ವ್ಯವಸ್ಥಿತವಾದ ವಾಹನ ಪಾರ್ಕಿಂಗ್ ವ್ಯವಸ್ಥೆ ಮಾಡಬೇಕು. ನಿಲ್ದಾಣದಲ್ಲಿ ಪ್ರಯಾಣಿಕರ ತಂಗುದಾಣ, ಮಿನಿ ಆರೋಗ್ಯ ಕೇಂದ್ರ ಸ್ಥಾಪನೆ ಮಾಡಿ ಅಗತ್ಯ ಸೌಲಭ್ಯ ಒದಗಿಸಬೇಕು ಎಂದು ಸಾರ್ವಜನಿಕರು ಮನವಿ ಮಾಡಿದರು.
ತುಮಕೂರು ನಗರ ರೈಲು ನಿಲ್ದಾಣವನ್ನು ಹೈಟೆಕ್ ನಿಲ್ದಾಣವಾಗಿ ಅಭಿವೃದ್ಧಿಪಡಿಸಿ, ಸುಸಜ್ಜಿತ ಸೌಲಭ್ಯ ಒದಗಿಸುವುದಾಗಿ ಸಚಿವ ವಿ.ಸೋಮಣ್ಣ ನಾಗರೀಕರಿಗೆ ಭರವಸೆ ನೀಡಿದರು.
ಶಾಸಕ ಜಿ.ಬಿ.ಜ್ಯೋತಿಗಣೇಶ್, ಜಿಲ್ಲಾ ಬಿಜಿಪಿ ಅಧ್ಯಕ್ಷ ರವಿಶಂಕರ್ ಹೆಬ್ಬಾಕ, ಮಾಜಿ ಸಚಿವ ಸೊಗಡು ಶಿವಣ್ಣ, ಜಿಲ್ಲಾಧಿಕಾರಿ ಶುಭಕಲ್ಯಾಣ್, ಜಿಪಂ ಸಿಇಒ ಜಿ.ಪ್ರಭು, ಮಾಜಿ ಶಾಸಕ ನೆ.ಲ.ನರೇಂದ್ರಬಾಬು ಮತ್ತಿತರರು ಇದ್ದರು.