

ತುಮಕೂರು: ಕನಿಷ್ಟ ಬೆಂಬಲ ಯೋಜನೆಯಡಿ ಖರೀದಿಸುತ್ತಿರುವ ರಾಗಿ ಮಿತಿಯನ್ನು ಮಾರ್ಪಾಡು ಮಾಡಿ ಸರ್ಕಾರ ಆದೇಶಿಸಿದೆ. ಪ್ರತಿ ರೈತರಿಂದ ಪ್ರತಿ ಒಂದು ಎಕರೆಗೆ 10 ಕ್ವಿಂಟಾಲ್ನಂತೆ ಗರಿಷ್ಟ 20 ಕ್ವಿಂಟಾಲ್ ರಾಗಿ ಖರೀದಿಸಲು ನೀಡಿದ್ದ ಆದೇಶದಲ್ಲಿ ಮಾರ್ಪಾಡು ಮಾಡಲಾಗಿದೆ.
ಆಹಾರ, ನಾಗರೀಕ ಸರಬರಾಜು, ಗ್ರಾಹಕರ ವ್ಯವಹಾರಗಳ ಮತ್ತು ಕಾನೂನು ಮಾಪನಶಾಸ್ತ್ರ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ಏ.15ರಂದು ಹೊರಡಿಸಿರುವ ಹೊಸ ಮಾರ್ಪಾಡು ಆದೇಶದಲ್ಲಿ ಈವರೆಗೂ ರಾಗಿ ಮಾರಾಟ ಮಾಡದ ರೈತರಿಗೆ ಅನುಕೂಲವಾಗುತ್ತಿದೆ.
ಪ್ರತಿ ಎಕರೆಗೆ 10 ಕ್ವಿಂಟಾಲ್ ರಾಗಿಯಂತೆ ಗರಿಷ್ಟ 30 ಕ್ವಿಂಟಾಲ್ ರಾಗಿ ಖರೀದಿಗೆ ಅನುಮತಿ ನೀಡಲಾಗಿದ್ದು ಜಿಲ್ಲೆಯಲ್ಲಿ ಶೇ.60ರಷ್ಟು ರೈತರಿಗೆ ಇದರ ಅನುಕೂಲವಾಗಲಿದೆ.
ಕನಿಷ್ಟ ಬೆಂಬಲ ಯೋಜನೆಯಡಿ ಒಂದು ಕ್ವಿಂಟಾಲ್ ರಾಗಿಗೆ 4290 ರೂ. ಬೆಂಬಲ ಬೆಲೆಯನ್ನು ನಿಗಧಿಪಡಿಸಲಾಗಿದೆ. ರಾಗಿ ಖರೀದಿ ಪ್ರಕ್ರಿಯೆ ಕಾರ್ಯ ಈಗಾಗಲೇ ಚಾಲ್ತಿಯಲ್ಲಿದ್ದು ಜಿಲ್ಲೆಯಲ್ಲಿ 17261 ರೈತರು 2.67ಲಕ್ಷ ಕ್ವಿಂಟಾಲ್ ರಾಗಿಯನ್ನು ಮಾರಾಟ ಮಾಡಿದ್ದಾರೆ. ಇನ್ನುಳಿದ 35503ರೈತರಿಗೆ ಮಾತ್ರ ಈ ಗರಿಷ್ಟ ಮಿತಿ ಹೆಚ್ಚಳದ ಲಾಭ ಸಿಗಲಿದೆ.
ಕನಿಷ್ಟ ಬೆಂಬಲ ಬೆಲೆ ಯೋಜನೆಯಲ್ಲಿ ರೈತರಿಂದ ಖರೀದಿಸುತ್ತಿರುವ ರಾಗಿ ಮಿತಿಯನ್ನು 20 ಕ್ವಿಂಟಾಲ್ನಿಂದ 50 ಕ್ವಿಂಟಾಲ್ಗೆ ಹೆಚ್ಚಿಸಲಾಗಿದೆ ಎಂದು ಬಜೆಟ್ ಅಧಿವೇಶನದ ಸಂದರ್ಭದಲ್ಲಿ ವಿಧಾನಸಭೆಯಲ್ಲಿ ಸಚಿವ ಕೆ.ಎಚ್.ಮುನಿಯಪ್ಪ ಉತ್ತರ ನೀಡಿದ್ದರೂ ಮಾರ್ಪಾಡು ಸುತ್ತೋಲೆ ಬರಲು ತಡವಾಗಿರುವುದು ಈವರೆಗೂ ರಾಗಿ ಮಾರಿದ ರೈತರಿಗೆ ಅನನುಕೂಲವಾಗಿದೆ.
ಮಾರ್ಚ್ ಮೊದಲ ವಾರದಿಂದಲೇ ಜಿಲ್ಲೆಯಲ್ಲಿ ರಾಗಿ ಖರೀದಿ ಆರಂಭಿಸಲಾಗಿದ್ದು ರಾಗಿ ಮಾರಿದ ರೈತನ ಖಾತೆಗೆ ಹಣ ಜಮಾ ಮಾಡಲಾಗುತ್ತಿದೆ.
ರೈತರಿಂದ ರಾಗಿ ಖರೀದಿ ಮಿತಿಯನ್ನು ಗರಿಷ್ಟ 30 ಕ್ವಿಂಟಾಲ್ಗೆ ಹೆಚ್ಚಿಸಿ ಸರ್ಕಾರ ಆದೇಶಿಸಿದ್ದು ಇನ್ನು ಮುಂದೆ ಮಾರಾಟ ಮಾಡುವ ರೈತರಿಗೆ ಈ ಸೌಲಭ್ಯ ಸಿಗಲಿದೆ. ನೋಂದಣಿ ಪ್ರಕ್ರಿಯೆ ಈಗಾಗಲೇ ಮುಕ್ತಾಯವಾಗಿರುವ ಹಿನ್ನೆಲೆಯಲ್ಲಿ ರೈತರು ಖರೀದಿ ಕೇಂದ್ರದಲ್ಲಿಯೇ ತಿಳಿಸಿ ಗರಿಷ್ಟ ಮಿತಿಯಲ್ಲಿ ಮಾರಾಟ ಮಾಡಲು ಅವಕಾಶ ಸಿಗಲಿದ್ದು ಸೋಮವಾರದಿಂದ ತಾಂತ್ರಿಕ ಅಡಚಣೆಗಳು ಸರಿಯಾಗಲಿವೆ. ಮಂಟೇಸ್ವಾಮಿ ಜಂಟಿ ನಿರ್ದೇಶಕ, ಆಹಾರ ಇಲಾಖೆ