

ತುಮಕೂರು: ಎರಡು ಸಮುದಾಯದ ನಡುವಿನ ಗಲಾಟೆಯಲ್ಲಿ ಮನನೊಂದು ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಪಾವಗಡದ ಕನುಮನಚರ್ಲು ನಿವಾಸಿ ಸೀನ(33) ಚಿಕಿತ್ಸೆ ಫಲಕಾರಿಯಾಗದ ಭಾನುವಾರ ಮೃತಪಟ್ಟಿದ್ದಾರೆ.
ಪಾವಗಡ ಭೋವಿ ಕಾಲೋನಿಯಲ್ಲಿ ಎರಡು ಸಮುದಾಯಗಳ ನಡುವೆ ಕ್ಷುಲ್ಲಕ ಕಾರಣಕ್ಕೆ ಆರಂಭವಾಗಿದ್ದ ಗಲಾಟೆಯಲ್ಲಿ ಮಾತಿಗೆ ಮಾತು ಬೆಳೆದಿತ್ತು. ಕಾಲೋನಿಯ ಸೀನ ಕೂಡ ಗಲಾಟೆಯಲ್ಲಿ ಭಾಗಿಯಾಗಿದ್ದರಿಂದ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದರು.
ತೀವ್ರವಾದ ಸುಟ್ಟಗಾಯಗಳಿಂದ ಅಸ್ವಸ್ಥರಾಗಿದ್ದ ಸೀನನನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ಮೂರು ದಿನಗಳ ಹಿಂದೆಯೇ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಮೃತರಾಗಿದ್ದಾರೆ.
ಸಾವಿಗೆ ಕಾರಣರಾದ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಬೇಕು ಎಂದು ಆಗ್ರಹಿಸಿ ಭೋವಿ ಕಾಲೋನಿ ಜನರು ಪಾವಗಡ ಪೊಲೀಸ್ ಠಾಣೆ ಮುಂಭಾಗ ಮೃತದೇಹವಿಟ್ಟು ಪ್ರತಿಭಟನೆಗೆ ಮುಂದಾಗಿದ್ದು ವಿವಾದ ಬುಗಿಲೆದ್ದಿದೆ. ಪಾವಗಡ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿದೆ.