ಇಲ್ಲಿ ತಯಾರಾಗಿದ್ದ 5 ಸಾವಿರ ಮುದ್ದೆಗಳು ಕೆಲವೇ ಗಂಟೆಗಳಲ್ಲಿ ಖಾಲಿ; ಹುಪ್ಸಾರಿಗೆ ಮುಗಿಬಿದ್ದ ಭಕ್ತರು

MUDDE
Published on

ತುಮಕೂರು: ಹುಳಿಯಾರು ಸಮೀಪದ ಪುರದಮಠದ ಕಾರ್ತಿಕೋತ್ಸವದಲ್ಲಿ ಮುದ್ದೆ ಜಾತ್ರೆ ಎಲ್ಲರ ಗಮನ ಸೆಳೆಯಿತು. ಸಾವಿರಾರು ಜನರು ಜಮಾಯಿಸಿದ್ದ ಮುದ್ದೆ ದಾಸೋಹಕ್ಕೆ ಸುತ್ತಮುತ್ತಲ ಹಳ್ಳಿಗಳಿಂದ ಜನರು ಆಗಮಿಸಿದ್ದರು.

ಬಡವ, ಶ್ರೀಮಂತ, ಮೇಲು, ಕೀಳು ಎಂಬ ಬೇದವಿಲ್ಲದೆ ಎಲ್ಲರೂ ಸರತಿಯಲ್ಲಿ ಬಂದು ರಾಗಿ ಮುದ್ದೆ, ಹುಪ್ಸಾರು ಊಟವನ್ನು ಚಪ್ಪರಿಸಿಕೊಂಡು ಸವಿದರು.

ಪುರದಮಠದಲ್ಲಿ ಪುರಾಣ ಪ್ರಸಿದ್ದ ಶ್ರೀಚನ್ನಬಸವೇಶ್ವರ ಸ್ವಾಮಿ ಕಾರ್ತಿಕ ಮಹೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಸೋಮವಾರ ನಡೆಯಿತು. ಕೃತಿಕೋತ್ಸವದ ಮುದ್ದೆ ಊಟ ಉತ್ಸವದಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿರುವುದರಿಂದ ಮುದ್ದೆ ಊಟ ಮಾಡಲೆಂದೆ ಅನೇಕರು ಬರುತ್ತಾರೆ, ಜತೆಯಾಗಿಯೇ ಮರ‍್ಮೂರು ಮುದ್ದೆ ತಿಂದು ಸಂಭ್ರಮಿಸಿದರು.

ಮುದ್ದೆಯ ಜತೆಗೆ ಇಲ್ಲಿನ ಸಾರೂ ಕೂಡ ಭಾರಿ ಖ್ಯಾತಿ ಪಡೆದಿದೆ. ತರಹೇವಾರಿ ತರಕಾರಿ, ಕಾಳು, ಕಾಯಿ ಹಾಕಿ ಮಾಡುವ ಸಾರಿಗೆ ಹುಳ್ಸೊಪ್ಪು ಎನ್ನುತ್ತಾರೆ. ಯಾರೋಬ್ಬರೂ ವೃತ್ತಿಪರ ಬಾಣಸಿಗರಲ್ಲದಿದ್ದರೂ ಇವರು ಮಾಡುವ ಈ ಹುಳ್ಸೋಪ್ಪಿನ ರುಚಿಗೆ ಮನ ಸೋಲದವರೇ ಇಲ್ಲ.

ತಟ್ಟೆತುಂಬ ಸಾರು ಹಾಕಿಸಿಕೊಂಡು ಭರ್ಜರಿ ಬೋಜನ ಮಾಡುತ್ತಾರೆ, ಅಷ್ಟೇ ಅಲ್ಲ ರಾತ್ರಿ ಸರತಿ ಸಾಲಿನಲ್ಲಿ ನಿಂತು ಮನೆಗೂ ಕೂಡ ಸಾರನ್ನು ಕೊಂಡೊಯ್ಯತ್ತಾರೆ. ಕೆಲವರಂತೂ ಮುಂಜಾನೆ ಈ ಸಾರಿಗೆ ರೊಟ್ಟಿ, ಚಾಪಾತಿ ಮಾಡಿಸಿಕೊಂಡು ತಿನ್ನುತ್ತಾರೆ.

ಕೃತಿಕೋತ್ಸವಕ್ಕೆ ಮುದ್ದೆ ಊಟ ನೀಡುವುದು ಕಳೆದ ಐದರು ದಶಕಗಳಿಂದಲೂ ನಡೆದುಕೊಂಡು ಬಂದ ಪ್ರತೀತಿ. ದೇವಸ್ಥಾನ ಸಮಿತಿಯಿಂದ ಕೃತಿಕೋತ್ಸವದ ದಿನ ಘೋಷಿಸಿದರೆ ಸಾಕು ಭಕ್ತರು ಸ್ವಯಂ ಪ್ರೇರಣೆಯಿಂದ ತಾವು ಬೆಳೆದ ದವಸ ಧಾನ್ಯ, ತರಕಾರಿ ಸೇರಿದಂತೆ ಇನ್ನಿತರ ವಸ್ತುಗಳನ್ನು ತಂದು ದೇವಸ್ಥಾನಕ್ಕೆ ಕೊಡುತ್ತಾರೆ. ಕೆಲವರು ಅಕ್ಕಿ, ಬೇಳೆಕಾಳು, ರಾಗಿ, ಎಣ್ಣೆ ಸೇರಿದಂತೆ ಮುದ್ದೆ ಸಾರಿಗೆ ಬೇಕಾದ ಎಲ್ಲಾ ಪದಾರ್ಥಗಳನ್ನೂ ಕೊಡಿಸಿರುತ್ತಾರೆ.

ಗ್ರಾಮದ ಜನರೆಲ್ಲಾ ಸೇರಿ ರಾಗಿಮುದ್ದೆ ಹಾಗೂ ಹುಳ್ಸೊಪ್ಪು ತಯಾರಿಸಿರುತ್ತಾರೆ ಆದರೆ, ಈ ಅಡಿಗೆ ತಯಾರಿಕೆಗೆ ಒಬ್ಬರ ಮೇಲುಸ್ತುವಾರಿ ಇಲ್ಲ. ಎಲ್ಲರೂ ಜವಾಬ್ದಾರಿಯೆಂದು ಭಾವಿಸಿ ಸೇವೆ ಸಲ್ಲಿಸುತ್ತಾರೆ. ಕಾಯಿ, ತರಕಾರಿ ಹೆಚ್ಚಿ ಕೊಡಲೊಂದು ತಂಡ, ಸಾರು, ಅನ್ನ, ಮುದ್ದೆ ಮಾಡುವವರದೊಂದು ತಂಡ, ಮುದ್ದೆ ಕಟ್ಟುವವರು, ಊಟಕ್ಕೆ ಬಡಿಸುವವರು ಹೀಗೆ ಎಲ್ಲರೂ ಒಬ್ಬರಾದಮೇಲೊಬ್ಬರಂತೆ ಬಂದು ಸೇವೆ ಸಲ್ಲಿಸುತ್ತಾರೆ.

ಸುತ್ತಳ್ಳಿಯಲ್ಲಿ ಮುದ್ದೆ ಜಾತ್ರೆಯೆಂದೇ ಪ್ರಸಿದ್ಧಿಯಾಗಿರುವುದರಿಂದ ಎರಡ್ಮೂರು ಕ್ವಿಂಟಾಲ್ ರಾಗಿ ಬಳಸಿ ಐದಾರು ಸಾವಿರ ಮುದ್ದೆ ತಯಾರಿಸುತ್ತಾರೆ. ಏಳೆಂಟು ಕೊಳಗದಷ್ಟು ಸಾಂಬರ್ ತಯಾರಿಸುತ್ತಾರೆ. ಹದಿನೈದಿಪ್ಪತ್ತು ಕ್ವಿಂಟಾಲ್ ಅಕ್ಕಿ ಬಸಿಯುತ್ತಾರೆ. ಒಟ್ಟಿನಲ್ಲಿ ಬಂದ ಭಕ್ತರಲ್ಲಿ ಯಾರೊಬ್ಬರೂ ಊಟ ಇಲ್ಲದೆ ಹಿಂದಿರುಗದAತೆ ಹೊಟ್ಟೆ ತುಂಬ ಊಟ ಹಾಕುವಷ್ಟು ಅಡಿಗೆ ಸಿದ್ಧವಾಗುತ್ತದೆ. ಎಷ್ಟೇ ಜನ ಬಂದರೂ, ಎಷ್ಟೇ ನೂಕು ನುಗ್ಗಲು ಇದ್ದರೂ, ಕೋಪಗೊಳ್ಳದೆ ಪ್ರೀತಿಯಿಂದ ಊಟಕ್ಕಿಟ್ಟು ಕಳುಹಿಸುತ್ತಾರೆ.

ಒಟ್ಟಾರೆ ಧಾರ್ಮಿಕ ಸಮಾರಂಭದಲ್ಲಿ ಸುತ್ತಲ್ಲೂ ಕಾಣಸಿಗದ ಮುದ್ದೆ ಊಟ ಸಿಗುವುದರಿಂದ ಇದೊಂದು ಈ ಭಾಗದ ವಿಶೇಷವಾಗಿದೆ. ಹಾಗಾಗಿಯೇ ಪುರದಮಠದ ಕೃತಿಕೋತ್ಸವಕ್ಕೆ ಜನ ಸಾಗರವೇ ಹರಿದು ಬರುತ್ತದೆ. ಮುದ್ದೆ ಹುಳ್ಸೊಪ್ಪು ಸಾರು ತಿಂದು ಧನ್ಯತಾಭಾವದಲ್ಲಿ ಹಿಂದಿರುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net