

ತುಮಕೂರು: ಕನಿಷ್ಟ ಬೆಂಬಲ ಬೆಲೆಯಲ್ಲಿ ಉಂಡೆ ಕೊಬ್ಬರಿಗೆ ಆರಂಭವಾಗಬೇಕಿದ್ದ ರೈತರ ನೋಂದಣಿ ಪ್ರಕ್ರಿಯೆ ಮತ್ತೆ ಮುಂದೂಡಿಕೆಯಾಗಿದ್ದು ತೆಂಗು ಬೆಳೆಗಾರರಲ್ಲಿ ಆತಂಕ ಹೆಚ್ಚಿಸಿದೆ.
ಆರಂಭದಲ್ಲಿ ಜ.20ರಿಂದ ನೋಂದಣಿ ಎಂದು ಹೇಳಿದ್ದ ಸರ್ಕಾರ ಫೆ.1ಕ್ಕೆ ದಿನಾಂಕ ಮುಂದೂಡಿಕೆ ಮಾಡಿತ್ತು ಆದರೆ, ಫೆ.1ರಿಂದ ರಾಜ್ಯದ ಯಾವುದೇ ಖರೀದಿ ಕೇಂದ್ರದಲ್ಲಿಯೂ ನೋಂದಣಿ ಪ್ರಕ್ರಿಯೆ ನಡೆಯುತ್ತಿಲ್ಲವಾದರೂ ಬುಧವಾರ ಸಂಜೆಯವರೆಗೂ ಈ ಬಗ್ಗೆ ಯಾವುದೇ ಆದೇಶ ಜಿಲ್ಲಾ ಟಾಸ್ಕ್ ಪೋರ್ಸ್ ವತಿಯಿಂದಲೂ ಹೊರಬಂದಿಲ್ಲ.
ಕನಿಷ್ಟ ಬೆಂಬಲ ಬೆಲೆಯಲ್ಲಿ ಕೊಬ್ಬರಿ ಖರೀದಿಗೆ ಜ.24ರಂದು ತರಾತುರಿಯಲ್ಲಿ ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಚಾಲನೆ ನೀಡಿದ್ದರು. ಈ ಸಮಾರಂಭದಲ್ಲಿ ರಾಜ್ಯದ ಗೃಹ ಸಚಿವ ಡಾ.ಜಿ.ಪರಮೇಶ್ವರ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಕೂಡ ಹಾಜರಿದ್ದು ಫೆ.1ರಿಂದಲೇ ನೋಂದಣಿ ಹಾಗೂ ಖರೀದಿ ಎಂದು ಘೋಷಿಸಿದ್ದರು.
ಫೆ.1ರಂದು ಜಿಲ್ಲೆಯ ಎಲ್ಲಾ ಖರೀದಿ ಕೇಂದ್ರದಲ್ಲಿಯೂ ನೋಂದಣಿಗೆ ರೈತರು ಮುಗಿ ಬೀಳಲಿದ್ದು ಇದಕ್ಕೆ ಸಂಬAಧಪಟ್ಟ ತಂತ್ರಾಂಶ ಮಾತ್ರ ಇನ್ನೂ ಸಿದ್ಧವೇ ಆಗಿಲ್ಲ. ಈ ಬಗ್ಗೆ ರೈತರಿಗೆ ಪೂರ್ವಮಾಹಿತಿ ನೀಡುವ ಗೋಜಿಗೆ ಜಿಲ್ಲಾಡಳಿತ ಹೋಗಿಲ್ಲ.
ಕೇಂದ್ರ ಸಚಿವೆ ಚಾಲನೆ ನೀಡಿದ್ದರೂ ಖರೀದಿಗೆ ಅಗತ್ಯವಾದ ನೋಂದಣಿ ಪ್ರಕ್ರಿಯೆಗೆ ಅಗತ್ಯವಾದ ತಂತ್ರಾಂಶ ಅಭಿವೃದ್ಧಿ ಪಡಿಸಲು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳ ತಡಮಾಡಿರುವುದು ಸಮಸ್ಯೆ ತಂದೊಡ್ಡಿದೆ. ಮ್ಯಾನುಯಲ್ ಮೂಲಕ ಖರೀದಿಗೆ ಅವಕಾಶವಿದೆಯಾದರೂ ಭವಿಷ್ಯದಲ್ಲಿ ಖರೀದಿ ಹಣ ಪಡೆಯುವುದು ಸಮಸ್ಯೆಯಾಗಲಿದೆ.
ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿ ಕೂಡ ಇದರ ಮೇಲ್ವಚಾರಣೆಯನ್ನು ಸಂಪೂರ್ಣ ಮರೆತಿದ್ದು ನೋಂದಣಿ ಮುಂದೂಡಿಕೆಯಾಗಿರುವ ಬಗ್ಗೆಯೂ ರೈತರಿಗೆ ಮಾಹಿತಿ ನೀಡದಿರುವುದು ರೈತರಲ್ಲಿ ಆತಂಕ ಹೆಚ್ಚಿಸಿದೆ.
ಜಿಲ್ಲೆಯ ತುಮಕೂರು, ಗುಬ್ಬಿ, ತುರುವೇಕೆರೆ, ತಿಪಟೂರು, ಕುಣಿಗಲ್, ಶಿರಾ, ಚಿಕ್ಕನಾಯಕನಹಳ್ಳಿ ತಾಲೂಕುಗಳಲ್ಲಿ ಒಟ್ಟು 21 ಖರೀದಿ ಕೇಂದ್ರ ಆರಂಭಿಸಲಾಗಿದೆಯಾದರೂ ನೋಂದಣಿ ತಡವಾಗಿರುವುದು ಖರೀದಿ ಅವದಿಯ ಮೇಲೆ ಪರಿಣಾಮವಾದರೆ ರೈತರಿಗೆ ಕಷ್ಟವಾಗಲಿದೆ.
ಜಿಲ್ಲೆಯ ತಿಪಟೂರು ಹಾಗೂ ತುರುವೇಕೆರೆಯಲ್ಲಿ ತಲಾ 6 ಖರೀದಿ ಕೇಂದ್ರ, ಗುಬ್ಬಿ, ಚಿಕ್ಕನಾಯಕನಹಳ್ಳಿ ಹಾಗೂ ಹುಳಿಯಾರಿನಲ್ಲಿ ತಲಾ 2, ತುಮಕೂರು, ಕುಣಿಗಲ್ ಹಾಗೂ ಶಿರಾ ತಾಲೂಕಿನಲ್ಲಿ ತಲಾ 1 ಸೇರಿ ಒಟ್ಟು 21 ಖರೀದಿ ಕೇಂದ್ರಗಳನ್ನು ತೆರೆಯಲು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳ ಅಗತ್ಯ ಸಿದ್ಧತೆ ಮಾಡಿಕೊಂಡಿದೆ.
ಕೊಬ್ಬರಿ ಖರೀದಿಸಲು ಕೇಂದ್ರ ಸರ್ಕಾರದ ಖರೀದಿ ಸಂಸ್ಥೆಯನ್ನಾಗಿ ನಫೆಡ್ ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳವನ್ನು ರಾಜ್ಯ ಸರ್ಕಾರದ ಖರೀದಿ ಸಂಸ್ಥೆಯನ್ನಾಗಿ ನೇಮಿಸಿದೆ.